ತಬೂಕ್: (ಸೌದಿ ಅರೇಬಿಯಾ) ಡಿಸೆಂಬರ್ 22 : ನಿನ್ನೆ ಪಡುಬಿದ್ರೆಯಲ್ಲಿ ನಡೆದ ಟ್ಯಾಂಕರ್ ಮತ್ತು ಬೈಕ್ ನಡುವಿನ ರಸ್ತೆ ಅಪಘಾತದಲ್ಲಿ ಮೃತಪಟ್ಟ ಜನಾಬ್ ಇಸ್ಮಾಯಿಲ್ ಜೋಕಟ್ಟೆ ಇವರ ಸಹೋದರರಾದ ಜನಾಬ್ ಉಸ್ಮಾನ್ ಜೋಕಟ್ಟೆಯವರ ಮನೆಗೆ ಭೇಟಿ ನೀಡಿದ ಮುಸ್ಲಿಂ ಸಂಯುಕ್ತ ಜಮಾಅತ್ ಮುಖಂಡರು ಅವರಿಗೆ ಸಾಂತ್ವಾನ ಹೇಳಿದರು.
ಜನಾಬ್ ಉಸ್ಮಾನ್ ಜೋಕಟ್ಟೆಯವರು ನಗರದ ಸಿಟಿ ಮ್ಯಾಕ್ಸ್ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದು ತನ್ನ ಸಾಮಾಜಿಕ ಚಟುವಟಿಕೆಗಳ ಮೂಲಕ ಇಲ್ಲಿ ಜನಪ್ರಿಯರಾಗಿದ್ದಾರೆ. ಮಂಗಳೂರು ನಗರದಲ್ಲಿ ಕಾಯಿನ್ ಫೋನ್ ವ್ಯವಹಾರ ಮಾಡಿಕೊಂಡಿದ್ದ ಅವರ ಸಹೋದರ ಉಡುಪಿಯಿಂದ ಮರಳಿ ತನ್ನ ಮನೆಗೆ ಬರುತಿದ್ದಾಗ ರಸ್ತೆ ಮಧ್ಯೆ ನಿಲ್ಲಿಸಿದ್ದ ಡಾಮಾರ್ ತುಂಬಿದ ಟ್ಯಾಂಕರ್ ಒಂದಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರಣ ಅವರು ಮೃತಪಟ್ಟಿದ್ದರು.
ಮೃತರ ನಮಾಜ್ ಅನ್ನು ತಬೂಕ್ ನಗರದಲ್ಲಿ ಸಾಮೂಹಿಕವಾಗಿ ನಡೆಸುವ ವ್ಯವಸ್ಥೆ ಮಾಡಲಾಗುತ್ತಿದೆ. ಜನಾಬ್ ಉಸ್ಮಾನ್ ಜೋಕಟ್ಟೆಯವರ ಮನೆಗೆ ಭೇಟಿ ನೀಡಿದ ಇಲ್ಲಿನ ಕರ್ನಾಟಕ ಮುಸ್ಲಿಂ ಜಮಾಅತ್ ಮುಖಂಡ ಜನಾಬ್ ಮಜೀದ್ ಕನ್ನಂಗಾರ್ ಮೃತರ ಆತ್ಮಕ್ಕೆ ಶಾಂತಿಕೋರಿ ಪರಮದಯಾಮಯನಾದ ಅಲ್ಲಾಹು ಅವರಿಗೆ ಮಗ್ಫಿರತ್ ನೀಡಲಿ ಮತ್ತು ಅವರ ಕುಟುಂಬದವರಿಗೆ ದುಃಖಭರಿಸುವ ಶಕ್ತಿಯನ್ನು ನೀಡಲಿ ಎಂದು ಹೇಳಿದರು.
ವರದಿ: ಅಶ್ರಫ್ ಮಂಜ್ರಾಬಾದ್.