ದುಬೈ, ಏಪ್ರಿಲ್ ೨೯: ನಗರದ ಅಲ್ ರಾಸ್ ನಲ್ಲಿರುವ ಇರಾನಿಯನ್ ಮಸೀದಿಯಲ್ಲಿ ಜರುಗಿದ ಹಿಫ್ಜ್-ಎ-ಕುರಾನ್ (ಕುರಾನ್ ಪಠಣ) ಹಾಗೂ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಟ್ಕಳದ ಕಿಶೋರಿ ಫಾತಿಮಾ ನಸ್ವಾ ' ವರ್ಷದ ಅತ್ಯುತ್ತಮ ವಿದ್ಯಾರ್ಥಿನಿ'ಯಾಗಿ ಆಯ್ಕೆಯಾಗಿದ್ದಾಳೆ. ದುಬೈ ಅವ್ಖಾಫ್ (ಧಾರ್ಮಿಕ ಸಚಿವಾಲಯ) ದ ಅಡಿ ಕಾರ್ಯನಿರ್ವಹಿಸುವ ಮರ್ಕಜ್ ಉಮರ್ ಬಿನ್ ಖತ್ತಾಬ್ ಲಿಥಾಫಿಜಿಲ್ ಕುರಾನ್ ಮದ್ರಸಾ ಈ ಕಾರ್ಯಕ್ರಮವನ್ನು ಏರ್ಪಡಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಮರ್ಕಜಿ ಖಲೀಫಾ ಜಮಾತುಲ್ ಮುಸ್ಲಿಮೀನ್ ಭಟ್ಕಳ್ ಸಂಘಟನೆಯ ಉಪಾಧ್ಯಕ್ಷರಾದ ಮೌಲಾನಾ ಖಾಜಾ ಮುಯೀನುದ್ದೀನ್ ಅಕ್ರಮಿ ಮದನಿಯವರು ನಗರದಲ್ಲಿ ಮದ್ರಸಾ ನಡೆಸಲು ಭಟ್ಕಳ ಮೂಲದ ವ್ಯಕ್ತಿಗಳು ಪಟ್ಟ ಶ್ರಮವನ್ನು ಶ್ಲಾಘಿಸಿದರು. ತಮ್ಮ ಮಕ್ಕಳ ವಿದ್ಯಾಭಾಸಕ್ಕಾಗಿ ಎಷ್ಟಾದರೂ ಖರ್ಚು ಮಾಡಲು ತಯಾರಿರುವ ಪಾಲಕರು ತಮ್ಮ ಮಕ್ಕಳ ಧಾರ್ಮಿಕ ವಿದ್ಯಾಭ್ಯಾಸದತ್ತ ಖರ್ಚು ಮಾಡುವಾಗ ಮಾತ್ರ ರಿಯಾಯಿತಿಗಳನ್ನು ಎದುರುನೋಡುವುದು ವಿಪರ್ಯಾಸವಾಗಿದೆ, ಆದರೆ ಧಾರ್ಮಿಕ ವಿದ್ಯಾಭ್ಯಾಸವೂ ಅಷ್ಟೇ ಅಗತ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಅಬ್ದುದ್ ದಯೀಂ ರವರು ಪವಿತ್ರ ಕುರಾನ್ ವಾಕ್ಯಗಳನ್ನು ವಾಚಿಸುವುದರೊಂದಿಗೆ ಪ್ರಾರಂಭವಾಯಿತು. ನಂತರ ಅಮ್ಮಾರ್ ಬಿನ್ ಫೈರೋಜ್ ಶಾಬಂದರಿಯವರು ನಾಅತ್ ಒಂದನ್ನು ಸುಶ್ರಾವ್ಯವಾಗಿ ಹಾಡಿದರು. ಸ್ವಾಗತ ಭಾಷಣದ ಬಳಿಕ ಮಕ್ಕಳು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿ ನೆರೆದವರ ಪ್ರಶಂಸೆಗೆ ಪಾತ್ರರಾದರು.
ಬಳಿಕ ನಡೆದ ಕುರಾನ್ ಪಠಣ ಸ್ಪರ್ಧೆಯಲ್ಲಿ ಮದ್ರಸಾದ ಮೂವರು ವಿದ್ಯಾರ್ಥಿನಿಯರಅದ ಸಾನಿಜಾ (ತಂದೆ:ಸಿರಾಜ್ ಶಿಂಗೇರಿ), ಜುಲ್ಫಾ ರಹಮತ್ (ತಂದೆ; ಮೊಹಿದ್ದೀನ್ ಹುಸೇನ್ ಕಲ್ಲಾಘರ್) ಹಾಗೂ ಫಾತಿಮಾ (ತಂದೆ:ಮುಹಮ್ಮದ್ ಅಲಿ) ಒಂದು ಧಾರ್ಮಿಕ ಸಂವಾದ (ಮುಕಾಲಿಮಾ) ವನ್ನು ಪ್ರಸ್ತುತಪಡಿದರು. ಈ ಕಾರ್ಯಕ್ರಮ ಒಂದು ವಿನೂತನ ಪ್ರಯೋಗವಾಗಿದ್ದು ನೆರೆದವರು ಮುಕ್ತಕಂಠದಿಂದ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮದ್ರಾಸ ಪೋಷಕರಲ್ಲೊಬ್ಬರಾದ ಮೌಲಾನಾ ಅಬ್ದುಲ್ ಮತೀನ್ ಮುನೀರಿಯವರು ಮದರಸಾದ ಬಗ್ಗೆ ವಿವರಗಳನ್ನು ನೀಡಿದರು.
ಬಳಿಕ ಮಾತನಾಡಿದ ದುಬೈ ವಕ್ಫ್ ಸಚಿವಾಲಯದ ಸೈಯದ್ ಮುಹಮ್ಮದ್ ಅಬ್ದುಲ್ಲಾ ಹಾಶ್ಮಿ ಹಾಗೂ ನೇತಾರ ಜನಾಬ್ ಎಸ್. ಎಮ್. ಖಲೀಲುರ್ರಹ್ಮಾನ್ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಮೌಲಾನಾ ಮೌಲಾ ಕರಣಿ ಹಾಗೂ ಮೌಲವಿ ಅಹ್ಮದ್ ಬೈದಾ ಕಾರ್ಯಕ್ರಮದ ನಿರೂಪಣೆಯ ಹೊಣೆ ಹೊತ್ತಿದ್ದರು. ಅಬ್ದುಲ್ ಕಾದಿರ್ ಬಾಷಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಸೂಕ್ತ ಬಹುಮಾನಗಳೊಂದಿಗೆ ಸನ್ಮಾನಿಸಲಾಯಿತು. ಮೌಲಾನಾ ಇರ್ಶಾದ್ ಹಫೀಜ್ ರ ದುವಾದೊಂದಿಗೆ ಕಾರ್ಯಕ್ರಮ ಮುಕ್ತಾಯ ಕಂಡಿತು.
ಜನಾಬ್ ಅಬ್ದುಸ್ ಸಲಾಂ ದಾಮೂದಿ, ರಹಮತುಲ್ಲಾ ರಾಹಿ, ಮೌಲಾನ ಇರ್ಶಾದ್ ಅಫ್ರಿಕಾ,ಇಬ್ರಾಹಿಂ ಕಾಜಿಯಾ, ಮೌಲಾನಾ ಮುಹಮ್ಮದ್ ಸಾದಿಖ್ ಅಕ್ರಮಿ, ಅಬ್ದುಲ್ ರಹ್ಮಾನ್ ಸಿದ್ದೀಖ್ ಸಹಿತ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.