ಮೈಸೂರು: ಕರ್ನಾಟಕ ನಾಟಕ ಅಕಾಡೆಮಿಯಿಂದ ಕೊಡಮಾಡುವ ನಾಟಕ ಪ್ರಶಸ್ತಿಯನ್ನು ನಗರದ ಜಗನ್ಮೋಹನ ಅರಮನೆ ಯಲ್ಲಿ ಶನಿವಾರ ಪ್ರದಾನ ಮಾಡಲಾಯಿತು.
ನಾಡೋಜ ದೇಜಗೌ 19 ಕಲಾವಿದರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಹಿರಿಯ ಕಲಾವಿದ ಎಸ್.ಆರ್. ಶಂಕರರಾವ್ ಜೀವಮಾನದ ರಂಗ ಸಾಧನೆ ಗೌರವ ಪ್ರಶಸ್ತಿಗೆ ಭಾಜನರಾದರು. ಲಕ್ಷ್ಮಣರಾವ್ ಮುತ್ತಂಗಿ ಅವರಿಗೆ ಕೆ.ಹಿರಣ್ಣಯ್ಯ ರಂಗ ಪ್ರಶಸ್ತಿ ನೀಡಲಾಯಿತು.
ಯುಎಯಿ ಧ್ವನಿ ಪ್ರತಿಷ್ಠಾನದ ಅದ್ಯಕ್ಷ ಪ್ರಕಾಶ್‌ರಾವ್ ಪಯ್ಯಾರ್ ರವರಿಗೆ ವಿದೇಶಿ ರಂಗಕರ್ಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ದೇಜಗೌ, ನಾಟಕಗಳು ಸಮಾಜದಲ್ಲಿನ ಕೊಳೆಯನ್ನು ತೊಳೆದು ಶುದ್ಧ ಮಾಡುತ್ತವೆ. ಮನುಷ್ಯನ ಬದುಕನ್ನು ತಿದ್ದುತ್ತವೆ. ಸಮಾಜದಲ್ಲಿ ಇರುವ ಅಪಮೌಲ್ಯ, ಭ್ರಷ್ಟಾಚಾರವನ್ನು ಹೋಗಲಾಡಿಸಲು ಸದಾರಮೆಯಂತಹ ನಾಟಕಗಳ ಅವಶ್ಯಕತೆ ಇದೆ ಎಂದರು. ಪ್ರತಿಯೊಂದು ತಾಲ್ಲೂಕಿನಲ್ಲೂ ರಂಗಮಂದಿರ ಸ್ಥಾಪನೆಯ ಅಗತ್ಯವಿದೆ. ದೇಶದ ಮೂಲೆ-ಮೂಲೆಯಲ್ಲಿ ನಾಟಕಗಳು ನಿರಂತರವಾಗಿ ಪ್ರದರ್ಶನವಾಗಬೇಕು. ತನ್ಮೂಲಕ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದರು.

ಹಿರಿಯ ರಂಗ ಕಲಾವಿದ ಡಾ.ನ.ರತ್ನ ರಂಗ ಬೃಂದಾವನ ಪುಸ್ತಕ ಬಿಡುಗಡೆಗೊಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಕಾರ್ಯದರ್ಶಿ ಜಯರಾಮರಾಜೇ ಅರಸ್ ಗ್ರಾಮೀಣ ರಂಗಭೂಮಿ ನಾಟಕ ಪರದೆ ಉಡುಪು ನೀಡುವ ಸಂಸ್ಥೆಗಳಿಗೆ ಅನುದಾನವನ್ನು ನೀಡಿದರು.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ರಾಜಾರಾಂ, ರಿಜಿಸ್ಟ್ರಾರ್ ಟಿ.ಜಿ. ನರಸಿಂಹಮೂರ್ತಿ ಮತ್ತಿತರರು ಹಾಜರಿದ್ದರು.