ದುಬೈ, ಏಪ್ರಿಲ್ ೨೫: ಇದೇ ಪ್ರಥಮ ಬಾರಿಗೆ ಮರಳುಗಾಡಿನ ರಾಷ್ಟ್ರವೊಂದರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಉತ್ಸಾಹವನ್ನು ತೋರಿದ ಧ್ವನಿ ಪ್ರತಿಷ್ಠಾನ ತನ್ನ ಬೆಳ್ಳಿಹಬ್ಬದಂದೇ ಆಚರಿಸಿ ವಿದೇಶದಲ್ಲಿ ಕನ್ನಡದ ಮೆರುಗಿಗೆ ನಾಂದಿ ಹಾಡಿದೆ. ನಗರದ ದುಬೈ ಜೆಮ್ಸ್ ಪ್ರೈವೇಟ್ ಶಾಲಾ ಸಭಾಂಗಣದಲ್ಲಿ ಶುಕ್ರವಾರ ಇಡಿಯ ದಿನ ಆಯೋಜಿತವಾಗಿದ್ದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಶ್ರೀ ಗೋಪಿನಾಥ್ ರಾವ್ ರವರ ಸಹಯೋಗದೊಂದಿಗೆ ಕನ್ನಡ ಪುಸ್ತಕ ಪ್ರದರ್ಶನ - 'ಗ್ರಂಥ ಸಂಭ್ರಮ' ಹಾಗೂ ಶ್ರೀಮತಿ ಸರಳಾರವರ ಸಹಯೋಗದಲ್ಲಿ ರಂಗೋಲಿ ಸ್ಪರ್ಧೆಗಳನ್ನು ಪ್ರಾರಂಭದಲ್ಲಿ ಆಯೋಜಿಸಲಾಗಿತ್ತು.
ಸತೀಶ್ ಪೂಜಾರಿ ಹಾಗೂ ಪದ್ಮರಾಜ್ ಎಕ್ಕಾರ್ ರವರು ಬೆಳಗ್ಗಿನ ಉಪಾಹಾರದ ಹೊಣೆ ಹೊತ್ತಿದ್ದರು. ಶ್ರೀ ಜಯರಾಮ ಸೋಮಯಾಜಿಯವರು ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿದರು.
ಬೆಳಿಗ್ಗೆ ಸುಮಾರು ಎಂಟೂವರೆಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಪಂಚವಾದ್ಯದ ಮೊಳಗುವಿಕೆಯ ನಡುವೆ ಸುಮಂಗಲೆಯರು ಆರತಿ ಎತ್ತಿ ಸಾಂಪ್ರಾದಾಯಿಕ ರೀತಿಯಲ್ಲಿ ಸ್ವಾಗತಿಸಿದರು. ಬಳಿಕ ಸಭಾಕಾರ್ಯಕ್ರಮ ಪ್ರಾರಂಭವಾಯಿತು. ಶ್ರೀ ಬಿ.ಕೆ. ಗಣೇಶ್ ರೈಯವರು ತಮ್ಮ ಅನುಭವದ ಸಾರವನ್ನು ಎರೆದು ನಿರ್ಮಿಸಿದ ವೇದಿಕೆ ಅತ್ಯಂತ ಸುಂದರವಾಗಿ ಮೂಡಿಬಂದಿತ್ತು. ಎಡಬಲಗಳಲ್ಲಿ ರನ್ನ ದ್ವಾರ ಹಾಗೂ ಪೊನ್ನ ದ್ವಾರಗಳಿಂದ ವಿರಚಿತ ಪಂಪಮಹಾಮಂಟಪದ ಮೇಲ್ಭಾಗದಲ್ಲಿ ಕನ್ನಡ ದಿಗ್ಗಜರ ಚಿತ್ರಪಟಗಳನ್ನು ತೂಗುಬಿಡಲಾಗಿದ್ದು ಅಪ್ಪಟ ಕರ್ನಾಟಕದ ಒಂದು ರೂಪ ಬಿಂಬಿತವಾಗಿತ್ತು. ಎಲ್ಲಾ ಆಹ್ವಾನಿತರು ಹಾಗೂ ಸದಸ್ಯರು ಕನ್ನಡ ರಂಗಿನ ಮೇಲ್ವಸ್ತ್ರ ತೊಟ್ಟು ಒಂದೇ ಮನೆಯ ಭಾವನೆಯನ್ನು ಬಿಂಬಿಸಿದರು.
ಕನ್ನಡದ ಹಿರಿಯ ಕವಿಗಳಾದ ಶ್ರೀ ಡಾ ಚೆನ್ನವೀರ ಕಣವಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಧ್ವನಿ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಮಧುಸೂಧನ್ ರವರು ಸ್ವಾಗತಿಸಿದರು. ಸಂಗೀತಾ, ಸೋನು, ಸರಳಾ ಹಾಗೂ ಯಶೋದರವರು ಸ್ವಾಗತಗೀತೆಯನ್ನು ಹಾಡಿದರು. ಬಳಿಕ ಶ್ರೀ ಅನಂತ್ ಕುಮಾರ್ ಕಾರ್ಯಕ್ರಮದುದ್ದಕ್ಕೂ ನಿರೂಪಣೆಯ ಹೊಣೆಯನ್ನು ನಿರ್ವಹಿಸಿದರು.
ಕಾರ್ಯಕ್ರಮಕ್ಕೆ ನಾಡಿನಿಂದ ಮಾತ್ರವಲ್ಲದೇ ಯು.ಎ.ಇ.ಯ ಪ್ರಮುಖ ಕನ್ನಡಿಗರೂ ಆಗಮಿಸಿದ್ದರು. ಯು.ಎ.ಇ.ಯ ಪ್ರಮುಖ ಉದ್ಯಮಿ, ಪದ್ಮಶ್ರೀ ವಿಜೇತ ಡಾ. ಬಿ.ಆರ್. ಶೆಟ್ಟಿ, ಜೈನ್ ಇಂಟರ್ನ್ಯಾಶನಲ್ ಸಂಸ್ಥೆಯ ಜಫರುಲ್ಲಾ ಖಾನ್, ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಶಿಕ್ಷಣ ಸಚಿವರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಕರ್ನಾಟಕ ಸರ್ಕಾರ, ಅನಿವಾಸಿ ಸಚಿವಾಲಯದ ಉಪಾಧ್ಯಕ್ಷ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಖ್ಯಾತ ಗೀತರಚನಾಕಾರ ಜಯಂತ್ ಕಾಯ್ಕಿಣಿ, ವಿಜಯ ಕರ್ನಾಟಕ ದೈನಿಕದ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್, ಚಿತ್ರನಟಿ ತಾರಾ, ಅವರ ಪತಿ ವೇಣುಗೋಪಾಲ್, ಗಾಯಕ ಶಶಿಧರ ಹೆಗಡೆ, ರಂಗಕರ್ಮಿ ವೆಂಕಟರಾಜು, ಚುಟುಕುಕವಿ ಜರಗನಹಳ್ಳಿ ಶಿವಶಂಕರ್ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಧ್ವನಿ ಪ್ರತಿಷ್ಠಾನದ ಸದಸ್ಯರು ಹಾಡಿದ 'ಹಚ್ಚೇವು ಕನ್ನಡದ ದೀಪ' ಗೀತೆಯ ಹಿನ್ನೆಲೆಯಲ್ಲಿ ಅತಿಥಿಗಳು ಜ್ಯೋತಿಬೆಳಗಿಸುವ ಮೂಲಕ ಪ್ರಾರಂಭಿಸಲಾಯಿತು. ಧ್ವನಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರಕಾಶ್ ರಾವ್ ಪಯ್ಯಾರ್ ಅತಿಥಿಗಳನ್ನು ವೇದಿಕೆಗೆ ಹೂಗುಚ್ಛಗಳೊಂದಿಗೆ ಸ್ವಾಗತಿಸಿದರು. ಆ ಬಳಿಕ ಮಾತನಾಡಿದ ಅತಿಥಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಡಾ. ಬಿ.ಆರ್. ಶೆಟ್ಟಿಯವರು ಕನ್ನಡಕ್ಕೆ ತಮ್ಮ ಪ್ರೋತ್ಸಾಹ ಹಿಂದಿನಂತೆ ಮುಂದೆಯೂ ಮುಂದುವರೆಸುವ ಭರವಸೆ ನೀಡಿದರು. ಸಚಿವರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮಾತನಾಡಿ ವಿದೇಶದಲ್ಲಿ ಕನ್ನಡಿಗರ ಈ ಸಂಭ್ರಮಕ್ಕೆ ತಮ್ಮ ಶ್ಲಾಘನೆ ಪ್ರಕಟಿಸಿದರು. ನಿಜಕ್ಕೂ ನೋಡುವುದಾದರೆ ಈ ದೇಶದ ಅಭಿವೃದ್ದಿ ನಮ್ಮ ಆಡಳಿತ ಯಂತ್ರದ ವಿಫಲತೆಯೇ ಕಾರಣ. ವಿದೇಶಗಳಿಗೆ ಆಗಮಿಸಿ ಆ ನಾಡಿನ ಅಭಿವೃದ್ದಿಗೆ ಕಾರಣರಾದ ಭಾರತೀಯರ ಸೇವೆ ಭಾರತಕ್ಕೂ ಅಗತ್ಯವಿದೆ, ಹಿಂದಿರುಗುವ ಅನಿವಾಸಿ ಭಾರತೀಯರಿಗೆ ಉತ್ತಮ ಜೀವನ ಒದಗಿಸುವ ಹಾಗೂ ಅವಕಾಶಗಳನ್ನು ಕಲ್ಪಿಸುವ ಕುರಿತು ತಮ್ಮ ಸರ್ಕಾರ ಬದ್ದವಾಗಿದೆ ಎಂದು ಅವರು ಪ್ರಕಟಿಸಿದರು. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸಹಾ ಧ್ವನಿ ಬಳಗದ ಕಾರ್ಯವೈಖರಿಯನ್ನು ಮೆಚ್ಚಿಕೊಂಡರು. ವಿದೇಶಗಳಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸಲು ಇಂತಹ ಸಮ್ಮೇಳನಗಳು ಅತೀ ಅವಶ್ಯವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಸರ್ಕಾರದ ಅನಿವಾಸಿ ವಿಭಾಗದಲ್ಲಿ ಹಲವು ಪ್ರಗತಿಗಳಾಗಿದ್ದು ಮುಂದಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಲಹೆಗಳೊಂದಿಗೆ ಹೆಚ್ಚಿನ ಸೇವೆ ಸಲ್ಲಿಸಲು ಅವಕಾಶ ನೀಡಲು ಅವರು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಯು.ಎ.ಇ.ಯಲ್ಲಿ ನೆಲೆಸಿರುವ ಯುವ ಲೇಖಕ ಶ್ರೀ ಶ್ರೀನಾಥ್ ರಾಜಣ್ಣರವರ ಸಂಗ್ರಹರೂಪಕ 'ಕನ್ನಡ ಸಾಹಿತ್ಯ ಲೋಕದ ದಿಗ್ಗಜರು' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಬಳಿಕ ಮಾತನಾಡಿದ ಶ್ರೀ ಜಫರುಲ್ಲಾ ಖಾನ್ ನಾಡಿನಿಂದ ದೂರವಿದ್ದ ಬಳಿಕವಷ್ಟೇ ನಾಡಿನ ಪ್ರೀತಿ ನಮಗೆ ಅರ್ಥವಾಗುವುದು, ಈ ನಾಡಿಗಾಗಿ ನಮ್ಮ ಕೈಲಾದ ದೇಣಿಗೆ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಅಂತಿಮವಾಗಿ ಮಾತನಾಡಿದ ಸಮ್ಮೇಳನಾಧ್ಯಕ್ಷ, ಕವಿ ಚೆನ್ನವೀರ ಕಣವಿಯವರು ಕನ್ನಡ ಭಾಷೆಯ ಮಹತ್ವವನ್ನು ವಿವರಿಸಿದರು. ಕನ್ನಡದ ಏಳ್ಗೆಗೆ ಹಾಗೂ ಉಳಿವಿಗೆ ಸಾಹಿತ್ಯ ಸಮ್ಮೇಳನಗಳು ಅತೀ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಧ್ವನಿ ಪ್ರತಿಷ್ಠಾನ ಶ್ಲಾಘನೀಯ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷರ ಭಾಷಣದ ಬಳಿಕ ಯು.ಎ.ಇ.ಯ ಹಲವು ಗಣ್ಯರನ್ನು ಅವರು ಕನ್ನಡಕ್ಕಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಶ್ರಿ ಜಫರುಲ್ಲಾ ಖಾನ್, ಅರಬ್ ಉಡುಪಿ ಹೋಟೆಲ್ ಗುಂಪಿನ ಮಾಲಿಕರಾದ ಶ್ರೀ ಶೇಖರ್ ಶೆಟ್ಟಿ, ಜೇಮ್ಸ್ ಮೆಂಡೋನ್ಸಾ (ಈ ವರ್ಷದ ಮಯೂರ ಪ್ರಶಸ್ತಿ ನಾಮಾಂಕಿತರು), ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ, ಶ್ರೀ ಅಶೋಕ್ ಶೆಟ್ಟಿ, ಉದಯ ಕುಮಾರ್ ಕಟೀಲ್ ಹಾಗೂ ಜಯರಾಮ ಸೋಮಯಾಜಿಯವರನ್ನು ಸನ್ಮಾನಿಸಲಾಯಿತು. ಎಲ್ಲರಿಗೂ ಶಾಲು, ಫಲಾಹಾರ, ಸ್ಮರಣಿಕೆ ಹಾಗೂ ಮೈಸೂರು ಪೇಟಾ ತೊಡಿಸಿ ಸನ್ಮಾನಿಸಲಾಯಿತು.
ಆ ಬಳಿಕ ಹಲವು ಸಾಂಸ್ಕತಿಕ ಕಾರ್ಯಕ್ರಮಗಳು ನೆರೆದವರನ್ನು ರಂಜಿಸಿದವು. ಗೌತಮ್, ರಾಜೇಶ್, ಪೃಥ್ವಿ, ಸರಳಾ, ಸಂಗೀತ, ಸೋನಿಯಾ ಹಾಗೂ ಯಶೋದ ರವರು ಹಾಡಿದ ಜನಪದಗೀತೆ ಮನಸೆಳೆಯಿತು. ಯು.ಎ.ಇ.ಯಲ್ಲಿ ಕನ್ನಡಪರ ಕಾರ್ಯಕ್ರಮಗಳಿಂದ ಇತ್ತೀಚೆಗೆ ಗಮನಸೆಳೆಯುತ್ತಿರುವ ಕನ್ನಡ ಕೂಟ ದುಬೈ ಸಂಘಟನೆಯ ಸದಸ್ಯರು ಹಾಗೂ ಬಸವ ಸಮಿತಿಯ ಸದಸ್ಯರು ಜಂಟಿಯಾಗಿ ಹಲವು ಮನರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ತಾವೂ ಯಾರಿಗೂ ಕಡಿಮೆ ಇಲ್ಲ ಎಂದು ಚಿಣ್ಣರೂ ತಮ್ಮ ಪ್ರತಿಭೆಯನ್ನು ಮೆರೆದು ಪ್ರಕಟಿಸಿದರು. ಕೆಲವು ರೂಪಕಗಳಲ್ಲಂತೂ ಸದಸ್ಯರು ಮತ್ತೊಮ್ಮೆ ಪ್ರಸ್ತುತಪಡಿಸಲು ಆಗ್ರಹಿಸಿ ತಮ್ಮ ಅಭಿಮಾನವನ್ನು ಪ್ರಕಟಿಸುತ್ತಿದ್ದರು.
ಮದ್ಯಾಹ್ನದ ಊಟವನ್ನು ಉಚಿತವಾಗಿ ಆಯೋಜಿಸಲಾದ್ದು ಅಪ್ಪಟ ಸಸ್ಯಾಹಾರ ಭೋಜನ ಆಗಮಿಸಿದವರ ಜಿಹ್ವಾಚಾಪಲ್ಯವನ್ನು ತಣಿಸಿತು.
ಭೋಜನದ ಬಳಿಕ ಹಲವು ಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಪ್ರಾರಂಭದಲ್ಲಿ 'ಕನ್ನಡ ಸಾಹಿತ್ಯದ ವಿವಿಧ ನೆನೆಗಳು' ಎಂಬ ಶೀರ್ಷಿಕೆಯಡಿ ಆಹ್ವಾನಿತ ಅತಿಥಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಸಾಹಿತಿ ಜಯಂತ ಕಾಯ್ಕಿಣಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಗೋಷ್ಠಿಯಲ್ಲಿ ಕಾವ್ಯದ ವಿಷಯದಲ್ಲಿ ಜರಗನಹಳ್ಳಿ ಶಿವಶಂಕರ್, ಚಲನಚಿತ್ರದ ವಿಷಯದಲ್ಲಿ ನಟಿ ತಾರಾ, ಸಂಗೀತದ ವಿಷಯದಲ್ಲಿ ಶಶಿಧರ್ ಕೋಟೆ, ರಂಗಭೂಮಿಯ ವಿಷಯದಲ್ಲಿ ವೆಂಕಟರಾಜು, ಕಲಾ ವಿಷಯದಲ್ಲಿ ಅಭಿಲಾಷಾ ಹಾಗೂ ಸಣ್ಣಕತೆಗಳ ವಿಷಯದಲ್ಲಿ ಸೌದಿ ಅರೇಬಿಯಾದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿರುವ ಶ್ರೀ ಕನಕರಾಜು ತಮ್ಮ ತಮ್ಮ ಪಾಲಿನ ವಿಷಯಗಳನ್ನು ಅರುಹಿದರು.
ಬಳಿಕ ನಡೆದ ಮಾಧ್ಯಮಗೋಷ್ಠಿಯ ಅಧ್ಯಕ್ಷತೆಯನ್ನು ವಿಶ್ವೇಶ್ವರ ಭಟ್ ವಹಿಸಿದ್ದರು. ಶ್ರೀ ಮನೋಹರ ತೋನ್ಸೆ, ರೇಡಿಯೋ ಸ್ಪೈಸ್ ನ ಶ್ರೀ ಹರ್ಮನ್ ಲೂವಿಸ್ ಹಾಗೂ ಸಾಹಿಲ್ ಆನ್ಲೈನ್ ತಾಣದ ಅರ್ಶದ್ ಹುಸೇನ್ ತಮ್ಮ ತಮ್ಮ ವಿಷಯಗಳನ್ನು ಮಂಡಿಸಿದರು. ಮಾಧ್ಯಮದ ವಿಚಾರದಲ್ಲಿ ಪ್ರಸ್ತಾಪಿಸಲ್ಪಟ್ಟ ಹಲವು ವಿಷಯಗಳನ್ನು ಸಭಿಕರು ತಮ್ಮ ಕರತಾಡನದಿಂದ ಸ್ವಾಗತಿಸಿದರು. ಶ್ರೀಮತಿ ಗೋಪಿಕಾ ಮಯ್ಯ ತಮ್ಮ ಲವಲವಿಕೆಯ ಧ್ವನಿಯಿಂದ ಮಾಧ್ಯಮಗೋಷ್ಠಿಯನ್ನು ನಡೆಸಿಕೊಟ್ಟರು.
ಸಮಯದ ಆಭಾವದಿಂದ ಶಶಿಧರ ಕೋಟೆಯವರ ಸಂಗೀತಗೋಷ್ಠಿಯನ್ನು ಕೇವಲ ಮೂರು ಗೀತೆಗಳಿಗೆ ಮೊಟಕುಗೊಳಿಸಬೇಕಾಯ್ತಾದರೂ ಈ ಮೂರು ಗೀತೆಗಳಲ್ಲಿಯೇ ಶಶಿಧರ್ ಹಾಗೂ ತಂಡದವರು ಸಭಿಕರನ್ನು ಮಂತ್ರಮುಗ್ಧಗೊಳಿಸಿದರು. ಕನ್ನಡ ಕೂಟ ಯು.ಎ.ಇ. ದ ಸದಸ್ಯರ ನೃತ್ಯ ರೂಪಕ ಮನಸೆಳೆಯಿತು. ಕನ್ನಡ ಕೂಟದ ಸಂಚಾಲಕರಾದ ಶ್ರಿ ಅರುಣ ಮುತುಗದೂರು ಹಾಗೂ ಸಂಗಡಿಗರು ಪ್ರಸ್ತುತಪಡಿಸಿದ ರೂಪಕ ಮನಸೆಳೆಯಿತು.
ಬಳಿಕ ನಡೆದ ಹನಿಗವನ ಗೋಷ್ಠಿಯ ಅಧ್ಯಕ್ಷತೆಯನ್ನು ಜರಗನಹಳ್ಳಿ ಶಿವಶಂಕರ್ ರವರು ವಹಿಸಿದ್ದರು. ಶ್ರೀ ಪ್ರಕಾಶ್ ಪಯ್ಯಾರ್, ಶ್ರೀ ಈರಣ್ಣ ಮೂಲಿಮನಿ, ಶ್ರೀ ಗೋಪಿನಾಥ ರಾವ್ ಹಾಗೂ ಶ್ರೀ ಇರ್ಶಾದ್ ಮೂಡಬಿದ್ರಿ ತಮ್ಮ ತಮ್ಮ ಕವನಗಳಿಂದ ನೆರೆದವರನ್ನು ರಂಜಿಸಿದರು.
ಕಾರ್ಯಕ್ರಮದ ಮೊದಲು ಆಯೋಜಿತವಾಗಿದ್ದ ಅನಿವಾಸಿ ಗೋಷ್ಠಿಯನ್ನು ಸಮಯದ ಆಭಾವದ ಕಾರಣ ಅನಿವಾರ್ಯವಾಗಿ ರದ್ದುಗೊಳಿಸಬೇಕಾಯ್ತು. ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಸಾಧಿಸಿದ ಗಣ್ಯರಿಗೆ "ಧ್ವನಿ ಪ್ರತಿಷ್ಠಾನ ಪುರಸ್ಕಾರ-೨೦೧೦" ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಮಾಧ್ಯಮ ಕ್ಷೇತ್ರದಲ್ಲಿ ಶ್ರೀ ವಿಶ್ವೇಶ್ವರ ಭಟ್, ಚಲನಚಿತ್ರ ಕ್ಷೇತ್ರದಲ್ಲಿ ಶ್ರೀಮತಿ ತಾರಾ, ಸಂಗೀತ ಕ್ಷೇತ್ರದಲ್ಲಿ ಶಶಿಧರ್ ಕೋಟೆಯವರನ್ನು ಸನ್ಮಾನಿಸಲಾಯಿತು. ಆಗಮಿಸಿದ ಆಹ್ವಾನಿತ ಅತಿಥಿಗಳಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಜರಗನಗಳ್ಳಿ ಶಿವಶಂಕರ್, ವಂಕಟರಾಜು, ಎಲಿಯಾಸ್ ಸಾಂಕ್ಟಸ್, ಕನಕರಾಜು, ಅಭಿಲಾಷಾ ರವರನ್ನೂ ಸಹಾ ಶಾಲು ಹೊದೆಸಿ ಫಲಪುಷ್ಪ ಸ್ಮರಣಿಕೆಗಳೊಂದಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದವರನ್ನೂ ವೇದಿಕೆಗೆ ಆಹ್ವಾನಿಸಿ ಸೂಕ್ತ ಉಡುಗೊರೆಯೊಂದಿಗೆ ಶ್ಲಾಘಿಸಲಾಯಿತು. ಬೆಳಿಗ್ಗೆ ನಡೆದ ರಂಗೋಲಿ ಸ್ಪರ್ಧೆ ಹಾಗೂ ಕನ್ನಡ ಪುಸ್ತಕ ಪ್ರದರ್ಶನದಲ್ಲಿ ತಮ್ಮ ಪುಸ್ತಕಗಳನ್ನು ಪ್ರದರ್ಶಿಸಿ ಸಹಕರಿಸಿದವರಿಗೆ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
]
ಇತ್ತೀಚೆಗೆ ಈ ಸಮ್ಮೇಳನದ ತಯಾರಿಗಳು ನಡೆಯುತ್ತಿರುವಾಗಲೇ ಕರ್ನಾಟಕ ಸರ್ಕಾರದ ನಾಟಕ ಅಕ್ಯಾಡೆಮಿ ಪ್ರಶಸ್ತಿ ಶ್ರೀ ಪ್ರಕಾಶ್ ರಾವ್ ಪಯ್ಯಾರ್ ರವರಿಗೆ ಸಂದಿದ್ದು ಸದಸ್ಯರಿಗೆ ಅತೀವ ಹರ್ಷ ಉಂಟುಮಾಡಿದ್ದು ಸದಸ್ಯರು ಪ್ರಕಾಶ್ ರಾವ್ ಪಯ್ಯಾರ್ ಹಾಗೂ ಶ್ರೀಮತಿ ಕುಸುಮಾ ಪ್ರಕಾಶ್ ದಂಪತಿಗಳನ್ನು ಅನಿರೀಕ್ಷಿತವಾಗಿ ವೇದಿಕೆಗೆ ಆಹ್ವಾನಿಸಿ ಸನ್ಮಾನಿಸುವ ಮೂಲಕ ತಮ್ಮ ಸಂತೋಷವನ್ನು ಪ್ರಕಟಿಸಿದರು.
ಇಡಿಯ ದಿನ ನಡೆದ ಕಾರ್ಯಕ್ರಮ ಸುಮಾರು ಒಂಭತ್ತೂವರೆಯ ಹೊತ್ತಿಗೆ ಅಂತ್ಯಕಂಡಿತು. ಅಧ್ಯಕ್ಷ ಶ್ರೀ ಪ್ರಕಾಶ್ ರಾವ್ ಪಯ್ಯಾರ್ ವಂದನಾರ್ಪಣೆ ಸಲ್ಲಿಸಿದರು.
ಧ್ವನಿ ಪ್ರತಿಷ್ಠಾನದ ಸದಸ್ಯರಾದ ಲತಾ ಹೆಗಡೆ, ಆನಂದ್ ಬೈಲೂರ್, ಜಯರಾಮ ಸೋಮಯಾಜಿ, ಶ್ರೀಮತಿ ನಳಿನಿ ಸೋಮಯಾಜಿ, ಸಂಪತ್ ಶೆಟ್ಟಿ, ಸತೀಶ್ ಪೂಜಾರಿ, ಮಧುಸೂದನ್, ಶ್ರೀಮತಿ ಜಯಶೀ ಮಧುಸೂದನ್, ಗೌತಮ್, ಶ್ರೀಮತಿ ಸೋನಿಯಾ ಗೌತಮ್, ಪದ್ಮರಾಜ್ ಎಕ್ಕಾರ್, ಆರ್ಥರ್ ರೋಶನ್ ಪಿರೇರಾ, ಶ್ರೀಧರ್, ಸರಳಾ ರಘುಪ್ರಸಾದ್, ನವೀನ್ ಸೀಕ್ವೇರಾ, ಗಣೇಶ್ ಕುಲಾಲ್, ಶ್ರೀ ಬಿ.ಕೆ. ಗಣೇಶ್ ರೈ, ಮುರುಗೇಶ್ ಗಾಜರೆ, ಸುಮಾ ಗಾಜರೆ, ದೀಪಾ, ಅರ್ಶದ್ ಹುಸೇನ್, ಪ್ರಕಾಶ್, ವಿದ್ಯಾ ಶೆಟ್ಟಿ, ವಿನಯ ಕುಮಾರ್, ವೀರೇಂದ್ರ, ಶ್ರೀಮತಿ ದೀಪ್ತಿ ವೀರೇಂದ್ರ, ಶ್ರೀ ಗೋಪಿನಾಥ ರಾವ್ ಈ ಕಾರ್ಯಕ್ರಮದ ಯಶಸ್ಸಿನಲ್ಲಿ ಭಾಗಿಯಾಗಿದ್ದಾರೆ. ಎಲ್ಲರಿಗೂ ಅಧ್ಯಕ್ಷರಾದ ಶ್ರೀ ಪ್ರಕಾಶ್ ರಾವ್ ಪಯ್ಯಾರ್ ತಮ್ಮ ಅಭಿನಂದನೆಗಳನ್ನು ಅರ್ಪಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸುಮಾರು ಏಳುನೂರಕ್ಕೂ ಹೆಚ್ಚು ಕನ್ನಡಿಗರು ಆಗಮಿಸಿ ಸಂಭ್ರಮಪಟ್ಟರು. ಶಾರ್ಜಾ ಕರ್ನಾಟಕ ಸಂಘದ ನಿಕಟಪೂರ್ವ ಅಧ್ಯಕ್ಷ ಶ್ರೀ ಪ್ರಭಾಕರ ಅಂಬಲ್ತೆರೆ, ಶಾರ್ಜಾ ಕನ್ನಡ ಸಂಘದ ಮಹಾ ಪೋಷಕರಾದ ಶ್ರೀ ಮಾರ್ಕ್ ಡೆನಿಸ್ ಡಿಸೋಜಾ, ಗಲ್ಫ್ ಕನ್ನಡಿಗ ಸಂಪಾದಕರಾದ ಶ್ರೀ ಬಿ.ಜಿ. ಮೋಹನದಾಸ್ ಸಹಿತ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಚಿತ್ರ, ವರದಿ: ಅರ್ಶದ್ ಹುಸೇನ್, ದುಬೈ.