ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಉತ್ತರಕನ್ನಡ ಗೊಂಡರ ವಿರುದ್ಧ ಪಟ್ಟಭದ್ರ ರಿಂದ ದೌರ್ಜನ್ಯ; ಗೊಂಡ ಸಮಾಜ ಅಭಿವೃದ್ಧಿ ಸಂಘದ ಆಕ್ರೋಶ

ಭಟ್ಕಳ: ಉತ್ತರಕನ್ನಡ ಗೊಂಡರ ವಿರುದ್ಧ ಪಟ್ಟಭದ್ರ ರಿಂದ ದೌರ್ಜನ್ಯ; ಗೊಂಡ ಸಮಾಜ ಅಭಿವೃದ್ಧಿ ಸಂಘದ ಆಕ್ರೋಶ

Sun, 12 Jan 2025 20:23:20  IG Bhatkali   S O news
ಭಟ್ಕಳ: ಉತ್ತರಕನ್ನಡ ಗೊಂಡರ ವಿರುದ್ಧ  ಪಟ್ಟಭದ್ರ ರಿಂದ ದೌರ್ಜನ್ಯ; ಗೊಂಡ ಸಮಾಜ ಅಭಿವೃದ್ಧಿ ಸಂಘದ ಆಕ್ರೋಶ

ಭಟ್ಕಳ: ಉತ್ತರಕನ್ನಡ ಜಿಲ್ಲೆಯಲ್ಲಿ ವಾಸಿಸುವ ಬುಡಕಟ್ಟು ಗೊಂಡ ಸಮಾಜದವರು ಮುಖ್ಯವಾಹಿನಿಗೆ ಬರದಂತೆ ನಿರಂತರ ದೌರ್ಜನ್ಯದ ಮೂಲಕ ತಡೆಯೊಡ್ಡಲಾಗುತ್ತಿದ್ದು, ಇದನ್ನು ಸಮಸ್ತ ಗೊಂಡ ಸಮಾಜ ಖಂಡಿಸುತ್ತದೆ ಎಂದು ಗೊಂಡ ಸಮಾಜ ಅಭಿವೃದ್ಧಿ ಸಂಘ ಆಕ್ರೋಶ ಹೊರ ಹಾಕಿದೆ.

ಈ ಕುರಿತು ಶುಕ್ರವಾರ ಬೆಳಿಗ್ಗೆ ಕೋಕ್ತಿ ಶ್ರೀ ಮಹಾಸತಿ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ನಾರಾಯಣ ಗೊಂಡ, ಕಾನೂನು ಸಲಹೆಗಾರ, ನ್ಯಾಯವಾದಿ ಮಂಜುನಾಥ ಗೊಂಡ ಮಾತನಾಡಿದರು. ಗೊಂಡ ಬುಡಕಟ್ಟು ಸಮಾಜದ ಜನರು ಮಧ್ಯಪ್ರದೇಶ, ಉತ್ತರಪ್ರದೇಶ, ಜಾರ್ಖಂಡ್, ಛತ್ತೀಸಘಡ, ಆಂಧ್ರಪ್ರದೇಶ, ಬಿಹಾರ, ಕರ್ನಾಟಕ ಸೇರಿದಂತೆ ಭಾರತದಾದ್ಯಂತ ವಾಸವಾಗಿದ್ದು, ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ವಾಸಿಸುತ್ತಿರುವ ಗೊಂಡರು ಸರಿಸುಮಾರು 350 ವರ್ಷಗಳ ಹಿಂದೆ ಭಾರತವು ಬ್ರಿಟೀಷರ ಆಡಳಿತಕ್ಕೆ ಒಳಪಟ್ಟಿರುವ ಸಂದರ್ಭದಲ್ಲಿ ಆಂಧ್ರಪ್ರದೇಶದಿಂದ ವಲಸೆ ಬಂದಿರುವ ಬಗ್ಗೆ ಉತ್ತರಕನ್ನಡ ಗೆಜೆಟಿಯರ್‍ನಲ್ಲಿ ಉಲ್ಲೇಖವಿದೆ. 

ಹಲವಾರು ಅಧ್ಯಯನಗಳು ಭಟ್ಕಳದ ಗೊಂಡರು ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ವಾಸಿಸುತ್ತಿರುವ ಗೊಂಡರ ನಡುವೆ ಇರುವ ಸಾಮ್ಯತೆಗಳನ್ನು ಎತ್ತಿ ತೋರಿಸಿದೆ. ಕೆಲವು ಶನಿವಾರ ಕಟಗಾರಕೊಪ್ಪದಲ್ಲಿ 21ನೇ ರಾಷ್ಟ್ರೀಯ ಗೊಂಡಿ ಸಾಹಿತ್ಯ ಸಮ್ಮೇಳನ ನಡೆದಿರುವುದು ಇದಕ್ಕೆ ಸಾಕ್ಷಿಯಾಗಿದೆ. 1950ರಲ್ಲಿ ಭಾರತ ಸಂವಿಧಾನ ರಚನೆಯ ನಂತರ ಕ್ಷೇತ್ರ ನಿರ್ಬಂಧನೆ ಇದ್ದರೂ ಉತ್ತರಕನ್ನಡ ಜಿಲ್ಲೆಯ ಗೊಂಡರು ಪರಿಶಿಷ್ಟ ವರ್ಗಕ್ಕೆ ಸೇರಿದ್ದು, ಜಾತಿ ಪ್ರಮಾಣ ಪತ್ರ ನೀಡುವಂತೆ ಆದೇಶ ಆಗಿರುವುದು ಸ್ಪಷ್ಟವಾಗಿದೆ. ಸದರಿ ಆದೇಶ ಗೆಜೆಟಿಯರ್‍ನಲ್ಲಿ ಪ್ರಕಟವಾಗಿದ್ದು, ಕಾಲಂ ನಂಬರ್ 9ರಲ್ಲಿ ಸ್ಪಷ್ಟವಾಗಿ ನಮೂದಿಸಿದ್ದು ಇರುತ್ತದೆ. ಅಲ್ಲದೇ 1956, ಡಿ.10ರಲ್ಲಿ ಮೈಸೂರು ಸರಕಾರವು ಭಾರತ ಸರಕಾರದ ಆದೇಶದ ಆಧಾರದಲ್ಲಿ ಮೈಸೂರು ಗೆಜೆಟಿಯರ್‍ನಲ್ಲಿ ಉತ್ತರಕನ್ನಡದಲ್ಲಿರುವ ಗೊಂಡರು ಬುಡಕಟ್ಟು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಎನ್ನುವುದನ್ನು ಪ್ರಕಟಿಸಿದ್ದು ಇರುತ್ತದೆ. 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ವ್ಯತ್ಯಾಸ ಇದ್ದು, ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡುವಾಗ ಕೇವಲ ಶಾಲಾ ದಾಖಲೆಗಳ ಲಭ್ಯತೆಯನ್ನು ಅವಲಂಬಿಸದೇ, ಸದ್ರಿ ಅರ್ಜಿದಾರರ ಆಚಾರ, ವಿಚಾರ, ಸಾಂಪ್ರದಾಯಿಕ ಹುಟ್ಟು ಸಾವಿನ ಸೂತಕ, ಹಬ್ಬ ಹರಿದಿನಗಳ ಆಚರಣೆ, ಜೀವನ ಕ್ರಮ, ಸಾಮಾಜಿಕ ವ್ಯವಸ್ಥೆ, ಸಾಂಸ್ಕøತಿಕ ಜೀವನ ವಿಧಾನಗಳ ಆಧಾರದ ಮೇಲೆ ನೀಡಬೇಕು ಎಂಬ ಸ್ಪಷ್ಟೀಕರಣ ಇದೆ. ಇದರ ಬಗ್ಗೆ ಅರಿವಿಲ್ಲದೇ 2010-2011ರ ನಂತರ ಗೊಂಡ ಸಮಾಜದವರು ವಿವಿಧ ಚುನಾವಣೆಗೆ ನಾಮಪತ್ರ ಸಲ್ಲಿಸಲು ಆರಂಭಿಸಿದ ನಂತರ ಪಟ್ಟಭದ್ರ ಹಿತಾಸಕ್ತಿಗಳು ಅಧಿಕಾರಿಗಳಿಗೆ ಸುಳ್ಳುಹೇಳಿ, ಬೆದರಿಸಿ ಸಮಸ್ಯೆಯನ್ನು ಹುಟ್ಟು ಹಾಕಿದ್ದಾರೆ. 

ಗೊಂಡ ಸಮಾಜದವರ ಮೇಲೆ ಸುಮಾರು 50 ಪ್ರಕರಣಗಳನ್ನು ದಾಖಲಿಸಿದ್ದರೂ ನ್ಯಾಯಾಯದ ತೀರ್ಪುಗಳು ಗೊಂಡ ಸಮಾಜದ ಪರವಾಗಿ ಬಂದಿವೆ. ಈಗಾಗಲೇ ತಹಸೀಲ್ದಾರರು ಪರಿಶೀಲನೆ ಮಾಡಿ ಗೊಂಡ ಸಮಾಜದವರು ಪರಿಶಿಷ್ಟ ಪಂಗಡದವರು ಎಂದು ವರದಿ ನೀಡಿದ್ದಾರೆ. ಗೊಂಡ ಸಮಾಜದ ಯಾವುದೇ ವ್ಯಕ್ತಿಯ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರವೂ ಇಲ್ಲಿಯವರೆಗೆ ರದ್ದಾಗಿಲ್ಲ. ಎಲ್ಲವೂ ಈಗಲೂ ಊರ್ಜಿತದಲ್ಲಿ ಇವೆ. ಕಳೆದ ಒಂದು ವರ್ಷದಿಂದ ಸಿಂಧುತ್ವ ಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸಲಾಗಿದ್ದು, ಅದನ್ನು ಸಚಿವರ ಗಮನಕ್ಕೆ ತಂದಿದ್ದೇವೆ. ಸಮಸ್ಯೆಯನ್ನು ಸರಿಪಡಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಕಳೆದ ಗೊಂಡಿ ಸಾಹಿತ್ಯ ಸಮ್ಮೇಳನದಲ್ಲಿ ವಿಧಾನಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಗೊಮಡ ಸಮುದಾಯದವರಿಗೆ ಆಗುತ್ತಿರುವ ಅನ್ಯಾಯವನ್ನು ಬಹಿರಂಗವಾಗಿ ಹೇಳಿದ್ದು, ಅವರ ವಿರುದ್ಧ ಪಟ್ಟಭದ್ರ ಹಿತಾಸಕ್ತಿಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಡುತ್ತಿರುವ ಸಂದೇಶ, ಪತ್ರಿಕಾ ಹೇಳಿಕೆಯನ್ನು ನಾವು ಬಲವಾಗಿ ಖಂಡಿಸುವುದಾಗಿ ತಿಳಿಸಿದರು. 

ಸೋಮಯ್ಯ ಗೊಂಡ, ಬಡಿಯಾ ಗೊಂಡ, ಹೊನ್ನಯ್ಯ ಗೊಂಡ, ರಾಘು ಗೊಂಡ, ವೆಂಕಟೇಶ ಗೊಂಡ, ಪಾರ್ವತಿ ಗೊಂಡ, ಮಾದೇವ ಗೊಂಡ, ಚಂದ್ರ ಗೊಂಡ, ರಮೇಶ ಗೊಂಡ, ದುರ್ಗಯ್ಯ ಗೊಂಡ, ಗಣಪತಿ ಗೊಂಡ ಮೊದಲಾದವರು ಉಪಸ್ಥಿತರಿದ್ದರು.


Share: