ಭಟ್ಕಳ:ಮಂಗಳವಾರ ಮುರುಡೇಶ್ವರ ಸಮುದ್ರದಲ್ಲಿ ಮುಳುಗಿ ನಾಲ್ವರು ವಿದ್ಯಾರ್ಥಿನಿಯರು ಸಾವಿಗೀಡಾದ ಪ್ರಥ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಮುಖಂಡರು ಸಚಿವ ಮಂಕಾಳ ವೈದ್ಯರನ್ನು ಟೀಕಿಸಿರುವುದಕ್ಕೆ ಭಟ್ಕಳ ಕಾಂಗ್ರೆಸ್ ಖಂಡನೆ ವ್ಯಕ್ತಪಡಿಸಿದೆ.
ಈ ಕುರಿತು ಭಟ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ ಮುರುಡೇಶ್ವರ ಪ್ರಕರಣ ಒಂದು ಆಕಸ್ಮಿಕ ಘಟನೆಯಾಗಿದ್ದು, ಈ ಹಿಂದೆಯೂ ಇಂತಹ ಘಟನೆಗಳು ಮುರುಡೇಶ್ವರದಲ್ಲಿ ನಡೆದಿವೆ. ಆದರೆ ಆಗ ಶಾಸಕರಾಗಿದ್ದ ಸುನೀಲ ನಾಯ್ಕ ಜನರ ಮುಂದೆ ಬಂದಿರಲಿಲ್ಲ. ಮಂಗಳವಾರ ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗೇಳುತ್ತಿರುವುದನ್ನು ಕಂಡು ಸ್ಥಳೀಯರು ನೆರವಿಗೆ ಧಾವಿಸಿ ಕೆಲವರನ್ನು ರಕ್ಷಿಸಿದ್ದಾರೆ. ಅಧಿವೇಶನದಲ್ಲಿ ಭಾಗಿಯಾಗಿದ್ದ ಸಚಿವರು ಮಾಹಿತಿ ಪಡೆದು ಮಂಗಳವಾರ ರಾತ್ರಿಯೇ ಮುರುಡೇಶ್ವರಕ್ಕೆ ಧಾವಿಸಿ ಬಂದಿದ್ದು, ತಡ ರಾತ್ರಿ 2.30 ಸುಮಾರಿಗೆ ಆರೆನ್ನೆಸ್ ಆಸ್ಪತ್ರೆಗೆ ತೆರಳಿ ಆಸ್ಪತ್ರೆಗೆ ದಾಖಲಾದವರ ಆರೋಗ್ಯ ವಿಚಾರಿಸಿದ್ದಾರೆ. ಇದಕ್ಕೂ ಪೂರ್ವದಲ್ಲಿ ಡಿಸಿ, ಎಸ್ಪಿಯವರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿ, ಪ್ರವಾಸಕ್ಕೆ ಬಂದ ಮಕ್ಕಳಿಗೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಿದ್ದಾರೆ. ಕೋಲಾರ ಮುಳುಬಾಗಿಲು ಶಾಸಕ ಸಮೃದ್ಧಿ ಮಂಜುನಾಥ ಅವರನ್ನೂ ಸಂಪರ್ಕ ಮಾಡಿ ಅವರಿಗೆ ನೀಡಿದ ಭರವಸೆಯಂತೆ ಸಮುದ್ರದಿಂದ ಶವಗಳನ್ನು ಮೇಲೆತ್ತಿ, ಮರಣೋತ್ತರ ಪರೀಕ್ಷೆಯ ನಂತರ ಕೋಲಾರಗೆ ಕಳುಹಿಸುವ ಕೆಲಸವನ್ನೂ ಮಾಡಲಾಗಿದೆ. ಇದರ ಬಗ್ಗೆ ಅರಿವಿದ್ದರೂ ಮಾಜಿ ಶಾಸಕರು ಸಚಿವ ಮಂಕಾಳರನ್ನು ಟೀಕಿಸಿರುವುದು ಖಂಡನೀಯ ಎಂದರು.
ಕಾರ್ಮಿಕರ ಪ್ರತಿಭಟನೆಯ ಹಿಂದೆ
ಕಳೆದ ಕೆಲ ದಿನಗಳ ಹಿಂದೆ ಭಟ್ಕಳದಲ್ಲಿ ಮರಳು ಕೊರತೆ ಸೃಷ್ಟಿಯಾಗಲು ಬಿಜೆಪಿಯವರೇ ಕಾರಣರಾಗಿದ್ದಾರೆ. ಬಿಜೆಪಿಯ 8 ಪ್ರಮುಖರು ಶರಾವತಿ ನದಿ ಮರಳುಗಾರಿಕೆ ವಿರುದ್ಧ ಸುಪ್ರೀಮ್ ಕೋರ್ಟ ಹಸಿರು ಪೀಠಕ್ಕೆ ಸಲ್ಲಿಸಿರುವ ಅರ್ಜಿ ಮರಳುಗಾರಿಕೆಗೆ ತೊಡಕನ್ನುಂಟು ಮಾಡಿರುವ ಬಗ್ಗೆ ಸಾಕ್ಷಿ ಸಮೇತ ಮಾಧ್ಯಮದವರ ಮುಂದೆ ಬಂದು ಹೇಳಿದ್ದೇವೆ. ಆದರೂ ಬಿಜೆಪಿಯವರು ಯಾವುದೇ ಆಧಾರವಿಲ್ಲದೇ ಸಚಿವರ ವಿರುದ್ಧ ಆರೋಪಿಸಿದ್ದಾರೆ. ಕಾರ್ಮಿಕರ ಪ್ರತಿಭಟನೆ. ಅಲ್ಲಿ ಸಚಿವರ ವಿರುದ್ಧ ಮಾತನಾಡಿರುವುದರ ಹಿಂದೆ ಬಿಜೆಪಿ ಕೈವಾಡ ಇದೆ. ಮಾಜಿ ಶಾಸಕರಿಗೆ ಕೇವಲ ಪೇಪರ್ ಹೇಳಿಕೆ ಶೋಭೆ ತರುವುದಿಲ್ಲ, ಜನ ಸಾಮಾನ್ಯರ ಬದುಕಿನ ಮೇಲೆ ಆಟವಾಡಬೇಡಿ ಎಂದಷ್ಟೇ ವಿನಂತಿಸಿಕೊಳ್ಳುತ್ತಿದ್ದೇವೆ ಎಂದರು.
ಕೊರೊನಾ ಕಾಲದಲ್ಲಿ ನೀವೂ ಕುಣಿದಿದ್ದೀರಿ: ಸುನಿಲ್-ಸುಧಾಕರ ಕುಣಿದ ಬಗ್ಗೆ ಏನು ಹೇಳುತ್ತೀರಿ
ಮುರುಡೇಶ್ವರದಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಮತ್ಸಮೇಳ ಕಾರ್ಯಕ್ರಮ ನಡೆಸಲಾಗಿದೆ. ಆ ಮೂಲಕ ಮೀನುಗಾರಿಕೆ, ವಿವಿಧ ಯೋಜನೆಯ ಬಗ್ಗೆ ಸಮಗ್ರ ತಿಳುವಳಿಕೆ ನೀಡುವ ಪ್ರಯತ್ನ ನಡೆದಿದೆ. ಮೀನುಗಾರರೆಂದರೆ ಕೇವಲ ಮೊಗೇರರರು ಮಾತ್ರವಲ್ಲ, ನಾಯ್ಕ, ದೇವಡಿಗೆ, ಮುಸ್ಲಿಮ್ ಸೇರಿದಂತೆ ಎಲ್ಲ ಜಾತಿ, ಧರ್ಮದವರೂ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಮತ್ಸಮೇಳದ ಪ್ರಯುಕ್ತ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ ನಾವು ಕುಣಿದಿದ್ದು ತಪ್ಪು ಎಂದು ಜನರಿಗೆ ಅನ್ನಿಸಿದರೆ ನಾವು ಕ್ಷಮೆ ಕೋರುತ್ತೇವೆ. ಆದರೆ ಕೊರೊನಾ ಕಾಲದಲ್ಲಿ ಶಾಸಕರಾಗಿದ್ದ ಸುನೀಲ ನಾಯ್ಕ. ಸಚಿವರಾಗಿದ್ದ ಡಾ.ಸುಧಾಕರ ವೇಷ ಹಾಕಿ ಕುಣಿದ ಬಗ್ಗೆ ಏನು ಹೇಳುತ್ತಾರೆ?
ಭಟ್ಕಳ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ನಯನಾ ನಾಯ್ಕ, ವಿಷ್ಣು ದೇವಾಡಿಗ, ಟಿ.ಡಿ.ನಾಯ್ಕ, ಗಣಪತಿ ನಾಯ್ಕ, ಭಾಸ್ಕರ ಮೊಗೇರ ಬೆಳಕೆ, ಮಂಜುನಾಥ ನಾಯ್ಕ ಬೆಳಕೆ, ನಾಗೇಶ ನಾಯ್ಕ, ರಮೇಶ ನಾಯ್ಕ, ನಾಗೇಂದ್ರ ನಾಯ್ಕ, ಸುಧಾಕರ ನಾಯ್ಕ ಉಪಸ್ಥಿತರಿದ್ದರು.