ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ದುಬೈ : ಆರ್ಥಿಕ ಕುಸಿತ ಕರಾವಳಿಯಲ್ಲಿ ತಲ್ಲಣ

ದುಬೈ : ಆರ್ಥಿಕ ಕುಸಿತ ಕರಾವಳಿಯಲ್ಲಿ ತಲ್ಲಣ

Thu, 07 Jan 2010 15:03:00  Office Staff   S.O. News Service

ಜಾಗತಿಕ ಆರ್ಥಿಕ ಕುಸಿತದಿಂದ ಜಗತ್ತು ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದೆ ಎಂಬ ಹುಸಿಭ್ರಮೆಯನ್ನು ಬಂಡವಾಳಶಾಹಿ ಪರ ಮಾಧ್ಯಮಗಳು ಸೃಷ್ಟಿಸುತ್ತಿರುವಾಗಲೇ ದುಬಾಯಿ ದೊಪ್ಪನೆ ಕುಸಿದುಬಿದ್ದಿದೆ. ಯಾವುದೇ ಉತ್ಪಾದನೆಗಳಿಲ್ಲದೆ ದುಡ್ಡಿನಿಂದಲೇ ದುಡ್ಡನ್ನು ಸೃಷ್ಟಿಸುವ ಜಾಗತೀಕರಣದ ಜಾದು ಬರಿ ಮರಳಿನಿಂದ ಕಟ್ಟಿದ ಅರಮನೆಯಂತೆ ಎಂಬ ನಗ್ನ ಸತ್ಯ ದುಬಾಯಿ ಕುಸಿತದಿಂದ ಸಾಬೀತಾಗಿದೆ. ಜಾಗತೀಕರಣದ ಎಲ್ಲಾ ಅಂದಾದುಂದು ವ್ಯವಹಾರ, ಉದ್ಯಮ, ಐಶಾರಾಮಿತನಗಳನ್ನು ತನ್ನೊಳಗೆ ಸೃಷ್ಟಿಸಿಕೊಂಡು ಜಗತ್ತಿನ ಬಹುರಾಷ್ಟ್ರೀಯ ಕಂಪನಿಗಳನ್ನು ತನ್ನತ್ತ ಎಳೆದು ನವಶ್ರೀಮಂತರ ಮೋಜಿನ ಕನಸಿನ ರಾಜಧಾನಿಯಾಗಿ ರೂಪುಗೊಂಡಿದ್ದ ದುಬಾಯಿ ಇಂದು ತಾನು ಮುಳುಗುವುದರೊಂದಿಗೆ ಇಡೀ ಏಷ್ಯಾ ಮೆಲ್ಲಗೆ ಕಂಪಿಸುವಂತೆ ಮಾಡಿದೆ.

ಇಂತಹ ದುಬಾಯಿ ಜೊತೆಗಿನ ಕರಾವಳಿ ಕರ್ನಾಟಕದ ನಂಟು ಬಹಳ ಹಳೆಯದು. ತೈಲ ಉತ್ಪನ್ನಗಳಿಂದ ಕೊಲ್ಲಿ ರಾಷ್ಟ್ರಗಳು ಶ್ರೀಮಂತಿಕೆಯನ್ನು ಕಾಣಲಾರಂಭಿಸಿದಾಗ ಸಹಜವಾಗಿಯೇ ಅಲ್ಲಿ ಉದ್ಯೋಗಗಳು ಸೃಷ್ಟಿಯಾಗತೊಡಗಿತು. ಐಶಾರಾಮಿ ಬದುಕಿಗೆ ಬದಲಾಗತೊಡಗಿದ ಅರಬ್ಬರು ಸಣ್ಣಪುಟ್ಟ ಕೆಲಸಗಳಿಗೂ ಏಷ್ಯನ್ ರಾಷ್ಟ್ರಗಳ ಕಾರ್ಮಿಕರನ್ನು ಕರೆಸತೊಡಗಿದರು. ಆ ಸಂದರ್ಭದಲ್ಲಿಯೇ ಕರಾವಳಿಯಲ್ಲಿಯೂ ಸಾಮಾಜಿಕ, ಆರ್ಥಿಕ ಸ್ಥಾನಮಾನಗಳ ಬದಲಾವಣೆಗಳು ರಭಸದಲ್ಲಿ ನಡೆಯತೊಡಗಿತ್ತು.

ಉದ್ಯೋಗ ಅರಸಿ

ಭೂಮಸೂದೆ ಕಾಯ್ದೆಯ ಜಾರಿಯಿಂದ ಪರಂಪರಾಗತ ಭೂಮಾಲಕರು ಭೂಮಿ ಕಳೆದುಕೊಂಡು ಹೊಸ ಅವಕಾಶಗಳಿಗಾಗಿ ಹೊರ ದೇಶಗಳತ್ತ ಕಣ್ಣು ಹಾಯಿಸುತ್ತಿದ್ದಾಗ ಅವರನ್ನು ಕೈಬೀಸಿ ಕರೆದದ್ದು ಇದೇ ದುಬಾಯಿ ಮತ್ತಿತರ ಕೊಲ್ಲಿ ರಾಷ್ಟ್ರಗಳು. ಆವರೆಗೆ ಭೂಮಾಲಕರಾಗಿದ್ದ ಬಂಟ ಯುವಕರ ಹಿಂದೆಯೇ ಇಲ್ಲಿನ ಬ್ಯಾರಿ ಮುಸಲ್ಮಾನರು, ಹಿಂದುಳಿದ ಜಾತಿಗಳ ನವಯುವಕರು ಪೆಟ್ರೋ ಡಾಲರಿನ ನಾಡಿಗೆ ಉದ್ಯೋಗವನ್ನರಸಿ ಲಗ್ಗೆ ಇಟ್ಟರು. ಇಂದು ಕರಾವಳಿಯ ಆರ್ಥಿಕತೆ ನಿಂತಿರುವುದೇ ಕೊಲ್ಲಿರಾಷ್ಟ್ರಗಳಿಂದ ಬರುವ ಮನಿಯಾರ್ಡರ್ ಜನಜೀವನದಲ್ಲಿ ಏರುಪೇರುಗಳನ್ನು ಸೃಷ್ಟಿಸುವ ಸಾಧ್ಯತೆಗಳು ಗೋಚರಿಸುತ್ತಿದೆ. ಸೌದಿ ಅರೇಬಿಯಾ ಮತ್ತಿತರ ಕೊಲ್ಲಿ ರಾಷ್ಟ್ರಗಳಲ್ಲಿ ಆರ್ಥಿಕ ಕುಸಿತ ದೊಡ್ಡ ರೀತಿಯ ಪರಿಣಾಮ ಬೀರದಿರುವುದು ಮೇಲ್ನೋಟಕ್ಕೆ ಗಲ್ಫ್ ರಾಷ್ಟ್ರಗಳನ್ನು ನಂಬಿಕೊಂಡಿರುವ ಆರ್ಥಿಕತೆಯನ್ನು ಕಾಡುತ್ತಿರುವುದು ಕಾಣದಿದ್ದರೂ ಆಂತರಿಕವಾಗಿ ಪರಿಣಾಮ ಆಘಾತಕಾರಿಯಾಗಿದೆ. ದುಬಾಯಿನಿಂದ ಬರುವ ದುಡ್ಡನ್ನು ನೆಚ್ಚಿಕೊಂಡು ಸಾಲಗಳನ್ನು ಮಾಡಿ ನಿವೇಶನ ಖರೀದಿಸಿದವರು, ಮನೆ ಕಟ್ಟಿಕೊಂಡವರು, ಹೆಣ್ಣುಮಕ್ಕಳ ಮದುವೆ ಮಾಡಿದವರು, ಮಕ್ಕಳನ್ನು ಉನ್ನತ ವಿದ್ಯಾಭ್ಯಾಸಕ್ಕೆ ಸೇರಿಸಿದವರು, ಇಲ್ಲಿನ ಉದ್ಯಮಗಳಲ್ಲಿ ಹಣ ಹೂಡಿದವರು ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ದುಬಾಯಿನಲ್ಲಿ ಈಗ ಹೊಸ ಉದ್ಯೋಗಗಳ ಸೃಷ್ಟಿಯಾಗುತ್ತಿಲ್ಲ. ಆ ಮೂಲಕ ಹೊಸ ವೀಸಾಗಳು ದೊರಕುತ್ತಿಲ್ಲ. ಬದಲಿಗೆ ರಜಾ ಕಳೆಯಲು ಊರಿಗೆ ಬಂದ ಅಲ್ಲಿನ ಉದ್ಯೋಗಿಗಳಿಗೆ ಸದ್ಯಕ್ಕೆ ದುಬಾಯಿಗೆ ಮರಳುವುದು ಬೇಡ ಎಂಬ ಸಂದೇಶಗಳು ಕಂಪನಿಗಳಿಂದ ಬರತೊಡಗಿವೆ ಮತ್ತು ದುಬಾಯಿಯಲ್ಲಿ ಬ್ಯಾಂಕ್ ಸಾಲಗಳನ್ನು ಮಾಡಿ ಕಾರು, ಮನೆ ಕೊಂಡವರು, ಹೊಟೇಲ್ ಮತ್ತಿತರ ಉದ್ಯಮಗಳಲ್ಲಿ ಹಣ ಹೂಡಿದವರು ಸಾಲ ಪಾವತಿಸಲು ಆಗದೇ ಅಲ್ಲಿನ ಕಠಿಣ ಕಾನೂನು ಕ್ರಮಗಳಿಗೆ ಹೆದರಿ ಅರ್ಧ ರಾತ್ರಿಯಲ್ಲಿ ಹೇಳದೆ ಕೇಳದೆ ಊರಿಗೆ ಮರಳುತ್ತಿದ್ದಾರೆ. ದುಬಾಯಿ ಹಣದಿಂದ ಐಶಾರಾಮಿ ಬದುಕಿಗೆ ತಮ್ಮನ್ನು ಬದಲಾಯಿಸಿಕೊಂಡಿದ್ದ ಜನತೆ ಇಂದು ಬದಲಾದ ಪರಿಸ್ಥಿತಿಯನ್ನು ಎದುರಿಸುವ ದಾರಿ ಕಾಣದೆ ಕಂಗಾಲಾಗಿದ್ದಾರೆ.

ಕೇರಳದಲ್ಲೂ ತಲ್ಲಣ ಸುಲಭವಲ್ಲ

ಪಕ್ಕದ ಕೇರಳ ರಾಜ್ಯದಲ್ಲಿಯೂ ಇದೇ ಪರಿಸ್ಥಿತಿ ಇದೆ. ಆದರೆ ಅಲ್ಲಿನ ಪರಿಸ್ಥಿತಿ ಇಲ್ಲಿನದಕ್ಕಿಂತ ಭಿನ್ನವಾಗಿದೆ. ಅಲ್ಲಿನ ಮಾಧ್ಯಮಗಳು ವಾಸ್ತವ ಪರಿಸ್ಥಿತಿಗೆ ಕನ್ನಡಿ ಹಿಡಿಯುವ ಕೆಲಸವನ್ನು ಮಾಡುತ್ತಿವೆ. ಅಲ್ಲಿನ ಸರಕಾರ ದುಬಾಯಿನಿಂದ ಮರಳುತ್ತಿರುವವರ ಬಗ್ಗೆ ಕಾಳಜಿ ವಹಿಸುತ್ತಿದೆ. ಪುನರ್ವಸತಿಗೆ ವಿಶೇಷ ಕಾರ್ಯಕ್ರಮಗಳನ್ನು ಆದ್ಯತೆಯಲ್ಲಿ ನಡೆಸತೊಡಗಿದೆ. ಆದರೆ ಇಲ್ಲಿನ ಮಾಧ್ಯಮಗಳಲ್ಲಿ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ. ಸರಕಾರ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು ಬಿಡಿ ಇಲ್ಲಿನ ಯಾವುದೇ ಜನಪ್ರತಿನಿಧಿಗಳು, ಮಂತ್ರಿಗಳು ಇಷ್ಟರವರೆಗೆ ಈ ಬಗ್ಗೆ ಒಂದು ಶಬ್ದವನ್ನೂ ಮಾತಾಡಿಲ್ಲ. ಪ್ರತೀ ವರ್ಷ ದುಬಾಯಿಗೆ ತೆರಳಿ ಅಲ್ಲಿನ ಅನಿವಾಸಿ ತುಳುವರಿಂದ ಭರ್ಜರಿ ಆತಿಥ್ಯ ಸ್ವೀಕರಿಸಿ ಸ್ಥಳೀಯ ಮಾಧ್ಯಮಗಳ ಗಲ್ಫ್ ಪೇಜ್ಗಳಲ್ಲಿ ಮಿಂಚುತ್ತಿದ್ದ ಈ ನಾಯಕರುಗಳಿಗೆ ಈಗ ಅವರು ನೆನಪಾಗುತ್ತಿಲ್ಲ. ಸದ್ಯಕ್ಕೆ ದುಬಾಯಿನಲ್ಲೇ ನೆಲೆ ಕಂಡುಕೊಂಡವರಿಗೆ ಇರುವ ಏಕೈಕ ಆಶಾಭಾವನೆ ಎಂದರೆ ಈ ಕುಸಿತದಿಂದ ದುಬಾಯಿ ಮತ್ತೆ ದುಬಾಯಿಯನ್ನು ಕೈಹಿಡಿದು ಮೇಲೆತ್ತುತ್ತದೆ. ಆ ಮೂಲಕ ತಮ್ಮ ಸಂಕಷ್ಟಗಳು ಕ್ಷಣಿಕ; ಅದು ಮಂಜಿನಂತೆ ಕರಗುತ್ತದೆ ಎಂಬುವುದು. ಅದು ನಿಜವಾಗಲಿ ಎಂಬ ಹಾರೈಕೆ ಊರಿನಲ್ಲಿರುವ ಅವರ ಬಂಧುಗಳದ್ದು. ಆದರೆ ದುಬಾಯಿ ಮತ್ತೆ ಮೇಲೆದ್ದು ನಿಲ್ಲುವುದು ಅಷ್ಟು ಸುಲಭವಲ್ಲ ಎಂಬುವುದು ಆರ್ಥಿಕ ತಜ್ಞರ ಅಭಿಪ್ರಾಯ. ಕುಸಿತಕ್ಕೂ ಮುನ್ನ ದುಬಾಯಿನಲ್ಲಿ ಒಂದು ವಾಸದ ಸಣ್ಣ ಮನೆ ಹಿಡಿಯುವುದು ಅಲ್ಲಿ ಒಳ್ಳೆಯ ಕೆಲಸ ಹಿಡಿಯುವುದಕ್ಕಿಂತಲೂ ಕಷ್ಟ ಎಂಬಷ್ಟು ದುಬಾರಿಯಾಗಿತ್ತು. ಈಗ ಇಲ್ಲಿನ ರಿಯಲ್ ಎಸ್ಟೇಟ್ ಮಾರುಕಟ್ಟೆ ಸಂಪೂರ್ಣ ಕುಸಿತ ಕಂಡ ನಂತರ ಬಾಡಿಗೆ ಮನೆಗಳು ತೀರಾ ಅಗ್ಗವಾಗಿವೆ. ಆದರೆ ಅಗ್ಗದ ಬಾಡಿಗೆ ಮನೆಗಳಲ್ಲಿ ವಾಸ ಹೂಡುವ ಚೈತನ್ಯವೂ ಅಲ್ಲಿನ ಅನಿವಾಸಿಗಳಿಗೆ ಉಳಿದಿಲ್ಲ ಎಂಬುವುದೇ ಒಟ್ಟು ಚಿತ್ರಣವನ್ನು ಕಣ್ಣಿಗೆ ಕಟ್ಟುತ್ತದೆ.

ಇಷ್ಟೆಲ್ಲಾ ಅನಾಹುತಕಾರಿ ಬೆಳವಣಿಗೆಗಳು ನಡೆದರೂ, ತುಳುನಾಡಿನ ಅಭಿವೃದ್ಧಿಯಲ್ಲಿ ದೊಡ್ಡ ಕೊಡುಗೆ ನೀಡಿದ, ಅಲ್ಲಿನ ಆರ್ಥಿಕತೆಗೆ ಚೈತನ್ಯ ನೀಡಿದ, ಇಲ್ಲಿನ ದೈವ ದೇವಸ್ಥಾನಗಳು, ಜಾತ್ರೆ, ಉತ್ಸವಗಳು, ಮದುವೆ ಮುಂಜಿಗಳು ಅದ್ದೂರಿಯಾಗಿ ನಡೆಯಲು ಕಾರಣಕರ್ತರಾದ ಕೊಲ್ಲಿ ರಾಷ್ಟ್ರದಲ್ಲಿನ ಉದ್ಯೋಗಿಗಳ ಸಂಕಷ್ಟದ ಬಗ್ಗೆ ನಿನ್ನೆ, ಇಂದು, ನಾಳೆ ಎಂಬ ಹೆಸರಿನಲ್ಲಿ ವಿಶ್ವ ತುಳು ಸಮ್ಮೇಳನದ ಜಾತ್ರೆ ನಡೆಸಿದ ತುಳುನಾಡಿನ ಧನಿಗಳು ಸಣ್ಣ ಚರ್ಚೆಯನ್ನೂ ನಡೆಸದಿರುವುದು ಪರಿಸ್ಥಿತಿಯ ವ್ಯಂಗ್ಯವಾಗಿದೆ.

 ಸೌಜನ್ಯ: ಜನಶಕ್ತಿ

 


Share: