ದುಬೈ,ಮಾ.೧೪: ವಿವಿಧ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ಎದುರಿಸುತ್ತಿರುವ ೨೪ ಮಂದಿಯ ಪೈಕಿ ಏಳು ಭಾರತೀಯರು ಇದುವರೆಗೆ ಶಿಕ್ಷೆ ಜಾರಿಯಾಗದೇ ದುಬೈ ಜೈಲಿನಲ್ಲಿ ನರಳುತ್ತಿದ್ದಾರೆ ಎಂದು
ಮಾಧ್ಯಮವೊಂದು ವರದಿ ಮಾಡಿದೆ.
೭ ಮಂದಿ ಭಾರತೀಯರಲ್ಲಿ ೧೯೮೫ರಿಂದ ಸೆಂಟ್ರಲ್ ಜೈಲಿನಲ್ಲಿರುವ ೬೪ರ ಹರೆಯದ ಪಾಲ್ ಜಾರ್ಜ್ ನಾಡಾರ್ ಎಮಿರೇಟ್ನಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿ ಅತೀ ಹೆಚ್ಚು ಕಾಲ ಜೈಲಿನಲ್ಲಿಯೇ ಕಳೆದಿದ್ದರೆ, ಮತ್ತೋರ್ವ ಭಾರತೀಯ ೩೮ರ ಅನಿಲ್ ಮೊತ್ಯಾಟಿ ಅಧೋ ೧೯೯೯ರಿಂದ ದುಬೈ ಜೈಲಿನಲ್ಲಿದ್ದಾರೆ ಎಂದು ‘ಎಕ್ಸ್ಪ್ರೆಸ್’ ವರದಿ ಮಾಡಿದೆ.
ವಾಸ್ತವವಾಗಿ ೧೯೮೫ರ ಅಕ್ಟೋಬರ್ ೧೦ಕ್ಕೂ ಮುಂಚೆ ನಾಡಾರ್ ಅವರು ಪಾಕಿಸ್ಥಾನಿ ಮೂಲದ ಕೆಲವರೊಂದಿಗೆ ಜಗಳವಾಡಿದ್ದರು. ಕಾರ್ಪೆಂಟರ್ ಆಗಿದ್ದ ನಾಡಾರ್ ಪಾಕ್ ಮೂಲದ ಕುಟುಂಬದ ಮನೆಗೆ ಬೆಂಕಿ ಹಚ್ಚಿದ್ದರ ಪರಿಣಾಮ ಇಬ್ಬರು ಮಹಿಳೆಯರು ಹಾಗೂ ೭ ಮಕ್ಕಳು ಸಾವನ್ನಪ್ಪಿದ್ದರು.ಮರುದಿನ ನಾಡಾರ್ನನ್ನು ಬಂಧಿಸಲಾಗಿತ್ತು. ಆತನ ವಿರುದಟಛಿ ಹತ್ಯೆ ಆರೋಪ ಸಾಬೀತುಗೊಂಡ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆ ನೀಡಲಾಗಿತ್ತು. ಆದರೆ, ಈ ಶಿಕ್ಷೆ ಇದುವರೆಗೂ ಜಾರಿಗೊಂಡಿಲ್ಲ. ಇದೇ ರೀತಿ ೧೯೯೯ರಲ್ಲಿ ಅನಿಲ್ಗೂ ಗಲ್ಲು ಶಿಕ್ಷೆ ಶಿಕ್ಷೆ ಜಾರಿ ವಿಳಂಬಗೊಂಡಿರುವ ಹಿನ್ನೆಲೆಯಲ್ಲಿ ಈ
ಇಬ್ಬರಿಗೂ ಕ್ಷಮಾದಾನ ಲಭಿಸುವ ಬಗ್ಗೆ ಅವರ ಕುಟುಂಬ ವರ್ಗ ವಿಶ್ವಾಸದಲ್ಲಿದೆ.
‘ನನ್ನ ತಂದೆ ೨೫ ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದು, ಅವರಿಗೆ ಕ್ಷಮಾದಾನ ದೊರೆತು ಶೀಘ್ರವೇ ಬಿಡುಗಡೆಗೊಳ್ಳುವರು ಎಂಬ ವಿಶ್ವಾಸವಿದೆ ಎಂದು ದುಬೈನ ಖಾಸಗಿ ಉದ್ಯಮದಲ್ಲಿ ಎಂಜಿನಿಯರ್ ಆಗಿರುವ ನಾಡಾರ್ ಪುತ್ರ ಶುಭರಂಜನ್ಹೇಳಿದ್ದಾರೆ.ನಾಡಾರ್ ಹಾಗೂ ಅನಿಲ್ ಅವರಂತೆ ಇತರ ೨೩ ಮಂದಿ ಗಲ್ಲು ಶಿಕ್ಷೆ ಎದುರಿಸುತ್ತಿರುವ ಕೈದಿಗಳು ಜೈಲಿನಲ್ಲಿದ್ದು, ಇವರಾರಿಗೂ ಇದುವರೆಗೆ ಗಲ್ಲು ಶಿಕ್ಷೆ ಜಾರಿಗೊಂಡಿಲ್ಲ. ಈ ಪೈಕಿ ಶಿಶು ಅತ್ಯಾಚಾರಿ ಹಾಗೂ ಹಂತಕ ಸೇರಿದಂತೆ ಐವರ ವಿರುದ್ಧ ಪ್ರಕರಣಗಳು ಮೇಲ್ಮನವಿ ಹಂತದಲ್ಲಿದ್ದು, ಉಳಿದವರ ಗಲ್ಲು ಶಿಕ್ಷೆ ಜಾರಿಯನ್ನು ಆಡಳಿತಾಧಿಕಾರಿಯ ಅನುಮೋದನೆ ದೊರೆಯದ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದೆ ಎಂದು ಮೂಲಗಳು ಹೇಳಿವೆ.
ಸೌಜನ್ಯ:ಉದಯವಾಣಿ