ತಬೂಕ್ (ಸೌದಿ ಅರೇಬಿಯಾ) ಜನವರಿ 19: ಅನಿವಾಸಿ ಭಾರತೀಯರು ತಾವು ಕೆಲಸ ಮಾಡುವ ದೇಶದ ಜೊತೆಗೆ ತಮ್ಮ ಮಾತೃ ದೇಶದ ಬಗ್ಗೆಯೂ ಅಭಿಮಾನ ಮತ್ತು ಗೌರವಾದರಗಳನ್ನು ಬೆಳೆಸಿಕೊಂಡು ದೇಶದ ಅಭಿವೃದ್ಧಿ ಮತ್ತು ಐಕ್ಯತೆಗಾಗಿ ಶ್ರಮಿಸಲು ಮುಂದಾಗಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜನಾಬ್: ಕೆ.ಎಂ. ಶರೀಫ್ ಕರೆ ನೀಡಿದರು.
ಅವರು ಇಂಡಿಯಾ ಫ್ರಟೆರ್ನಿಟಿ ಫೋರಂ ತಬೂಕ್ ಘಟಕ ಇಲ್ಲಿನ ಸಹಾಬ್ ಹೋಟೆಲಿನಲ್ಲಿ ಏರ್ಪಡಿದ್ದ ಸಹೋದರ ಸಂಗಮ ಎಂಬ ಅನಿವಾಸಿ ಭಾರತೀಯರ ಸಾರ್ವಜನಿಕ ಸಭೆಯಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡುತಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬಂದು ಐದು ದಶಕಗಳೇ ಕಳೆದಿದ್ದರೂ ಇದುವರೆಗೆ ದೇಶ ಅಭಿವೃದ್ಧಿ ಹೊಂದಿಲ್ಲ. ಇದಕ್ಕೆ ಇಲ್ಲಿನ ಭ್ರಷ್ಟ ಆಡಳಿತ ವ್ಯವಸ್ಥೆ ಮತ್ತು ದೇಶದ ಜನರನ್ನು ಧರ್ಮದ ಆಧಾರದ ಮೇಲೆ ಒಡೆಯುತ್ತಿರುವ ಮಾನವತೆಯ ವಿರೋಧಿಗಳಾದ ಸಂಘ ಪರಿವಾರದ ತತ್ವ ಸಿದ್ಧಾಂತಗಳೇ ಕಾರಣ ಎಂದು ಹೇಳಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಭಾರತದ ಶೋಷಿತ ಮತ್ತು ದಮನಿತ ಸಮುದಾಯದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತಿದ್ದು ಸೌಹಾರ್ದ ಭಾರತವನ್ನು ಕಟ್ಟುವ ಒಂದು ಜನಾಂದೋಲನವಾಗಿ ರೂಪುಗೊಂಡಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಇಂಡಿಯಾ ಫ್ರಟೆರ್ನಿಟಿ ಫೋರಂ ಜಿದ್ದಾ ವಿಭಾಗದ ಜನಾಬ್ ಅಬ್ದುಲ್ ರಶೀದ್ ಮೌಲವಿ ಅಖಂಡ ಭಾರತವನ್ನು ಸುಮಾರು ಎಂಟುನೂರು ವರ್ಷ ಆಳಿದ ಮುಸ್ಲಿಮರು ಇಲ್ಲಿನ ಜ್ಯಾತ್ಯಾತೀತ ಪರಂಪರೆಗೆ ದಕ್ಕೆ ಬರದಂತೆ ಆಳ್ವಿಕೆ ನಡೆಸಿದರು. ಆದರೆ ಇಂದು ಇಲ್ಲಿ ಧರ್ಮದ ಹೆಸರಿನಲ್ಲಿ ಪರಸ್ಪರ ಕಚ್ಚಾಟ ನಡೆಸಿ ಅಧಿಕಾರ ಪಡೆಯುವಂತಹ ಕುತಂತ್ರ ರಾಜಕಾರಣವನ್ನು ಇಲ್ಲಿನ ಫ್ಯಾಸಿಸ್ಟ್ ಸಂಘಟನೆಗಳು ಮಾಡುತ್ತಿವೆ ಎಂದು ಹೇಳಿದರು.
ವೇದಿಕೆಯಲ್ಲಿ ಇಂಡಿಯಾ ಫ್ರಟೆರ್ನಿಟಿ ಫೋರಂ ತಬೂಕ್ ಘಟಕದ ಕರ್ನಾಟಕ ವಿಭಾಗದ ಅಧ್ಯಕ್ಷರಾದ ಜನಾಬ್ ಅಬ್ದುಲ್ ಲತೀಫ್ ಉಪ್ಪಿನಂಗಡಿ. ಕೇರಳ ವಿಭಾಗದ ಅಧ್ಯಕ್ಷರಾದ ಜನಾಬ್ ಅಬ್ದುಲ್ ರಜ್ಹಾಕ್ ಪಾಲಕ್ಕಾಡ್ ಉಪಸ್ಥಿತರಿದ್ದರು. ಜನಾಬ್ ನೌಶಾದ್ ಮುಲ್ಕಿ ಕಿರಾಅತ್ ಪರಾಯಣ ಮಾಡಿದರೆ ಜನಾಬ್ ಶೌಕತ್ ಸ್ವಾಗತಿಸಿ ಜನಾಬ್ ಅಶ್ರಫ್ ಎಂ.ವಿ. ವಂದಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಆರೋಗ್ಯ ಜಾಗೃತಿ ಅಭಿಯಾನದ ಅಂಗವಾಗಿ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷಾ ಶಿಬಿರವನ್ನು ಆಯೋಜಿಸಲಾಗಿತ್ತು. ಜೊತೆಗೆ ಸಾರ್ವಜನಿಕರಿಗಾಗಿ ಕ್ರೀಡಾ ಮತ್ತು ರಸ ಪ್ರಶ್ನೆ ಕಾರ್ಯಕ್ರಮಗಳು ನಡೆದವು. ವಿಜೇತರಿಗೆ ಜನಾಬ್ ಕೆ.ಎಂ. ಶರೀಫ್ ಬಹುಮಾನ ವಿತರಿಸಿದರು.
ಅಶ್ರಫ್ ಮಂಜರಾಬಾದ್, ತಬೂಕ್, ಸೌದಿ ಅರೇಬಿಯಾ.