ಮಕ್ಕಾ( ಸೌದಿ ಅರೇಬಿಯಾ) ನವೆಂಬರ್ ೨೨: ಮುಸ್ಲಿಮರ ಪವಿತ್ರ ಕರ್ಮವಾದ ಹಜ್ ಸಂಧರ್ಭದಲ್ಲಿ ಹೆಚ್ ಒನ್ ಎನ್ ಒನ್ ರೋಗಾಣುಗಳು ಹರಡುವುದನ್ನು ತಡೆಯಲು ಜಮ್ರಾ ಪ್ರದೇಶದಲ್ಲಿ ನಿರ್ವಹಿಸಲ್ಪಡುವ ಸಾಂಕೇತಿಕವಾಗಿ ಶೈತಾನನಿಗೆ ಕಲ್ಲು ಹೊಡೆಯುವ ಕರ್ಮದ ಸಂಧರ್ಭದಲ್ಲಿ ತೀರ್ಥಾಟಕರಿಗೆ ಅಣುವಿಮುಕ್ತ ಕಲ್ಲುಗಳನ್ನು ನೀಡಲು ಸೌದಿ ಸರ್ಕಾರ ನಿರ್ಧರಿಸಿದೆ.
ಈ ಬಾರಿ ಸುಮಾರು ಮೂವತ್ತು ಲಕ್ಷ ಮಂದಿ ತೀರ್ಥಾಟಕರು ಹಜ್ ನಿರ್ವಹಿಸುತಿದ್ದು ತಲಾ ಮೂವರಿಗೆ ಒಂದರಂತೆ ಹತ್ತು ಲಕ್ಷ ಪ್ಯಾಕೆಟ್ ಕಲ್ಲುಗಳನ್ನು ವಿತರಿಸಲಾಗುವುದು. ಈಗಾಗಲೇ ಇದಕ್ಕೆ ಬೇಕಾದ ಸಿದ್ಧತೆಗಳನ್ನು ಪೂರ್ತಿಗೊಳಿಸಲಾಗಿದ್ದು ಇದಕ್ಕಾಗಿ ಮುಜ್ದಲಿಫಾ ಪರಿಸರದಲ್ಲಿ ಮೂವತ್ತೇಳು ಪ್ರತ್ಯೇಕ ಕೌಂಟರುಗಳನ್ನು ತೆರೆಯಲಾಗಿದೆ. ಈ ಪ್ಯಾಕೆಟುಗಳಲ್ಲಿ ತಲಾ ಮೂರು ಜನರಿಗೆ ಮೂರು ದಿವಸ ಉಪಯೋಗಿಸಲು ಸಾಧ್ಯವಾಗುವಷ್ಟು ಕಲ್ಲುಗಳು ಇರುತ್ತದೆ . ಈ ಪ್ಯಾಕೆಟುಗಳನ್ನು ಮಹಮದ್ ಅಲ್ ಉಬೈದಿ ಚಾರಿಟಬಲ್ ಟ್ರಸ್ಟ್ ಉಚಿತವಾಗಿ ವಿತರಿಸಲಿದೆ ಎಂದು ಸೌದಿ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ವರದಿ: ಅಶ್ರಫ್ ಮಂಜ್ರಾಬಾದ್.