ಮಕ್ಕಾ(ಸೌದಿ ಅರೇಬಿಯಾ) ನವೆಂಬರ್23: ಹಜ್ ಕರ್ಮಗಳು ಆರಂಭಗೊಳ್ಳಲು ಕೇವಲ ಒಂದು ದಿನ ಬಾಕಿ ಇರುವಂತೆಯೇ ಮಕ್ಕಾ ಪುಣ್ಯಭೂಮಿಯಲ್ಲಿ ಈಗಾಗಲೇ ಇಪ್ಪೈತೈದು ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಪವಿತ್ರ ಕಾಬಾ ಮಸೀದಿಯ ಸಮೀಪ ಜಮಾಯಿಸಿದ್ದಾರೆ. ಈ ಬಾರಿ ಸುಮಾರು ಇಪ್ಪತ್ತೈದು ಲಕ್ಷ ವಿದೇಶಿಯರೂ ಸೇರಿದಂತೆ ಸುಮಾರು ಮೂವತ್ತು ಲಕ್ಷ ಮಂದಿ ಹಜ್ ನಿರ್ವಹಿಸಲಿದ್ದಾರೆಂದು ಅಂದಾಜಿಸಲಾಗಿದೆ.
ಈ ಮಧ್ಯೆ ಇದೇ ಮೊದಲ ಬಾರಿಗೆ ಸೌದಿ ಸರ್ಕಾರ ಯಾತ್ರಾರ್ಥಿಗಳ ಸುರಕ್ಷೆತೆಗಾಗಿ ಹಜ್ ನಿರ್ವಹಿಸುವ ಪ್ರದೇಶಗಳಲ್ಲಿ ಭಯೋತ್ಪಾದನಾ ನಿಗ್ರಹ ಪಡೆಯನ್ನು ನಿಯೋಜಿಸಿದೆ. ಭಾರತದ ಮಾಜಿ ಕೇಂದ್ರ ಸಚಿವ ಸೈಫುದ್ದೀನ್ ಸೋಜ್ ನೇತೃತ್ವದ ಭಾರತೀಯ ಹಜ್ ಸಮಿತಿಯ ನಿಯೋಗ ಈಗಾಗಲೇ ಮಕ್ಕಾ ತಲುಪಿದೆ. ನಿಯೋಗದಲ್ಲಿ ಕೇರಳ ಮುಸ್ಲಿಂ ಲೀಗ್ ರಾಜ್ಯ ಘಟಕದ ಅಧ್ಯಕ್ಷ ಜನಾಬ್: ಪಾನಕ್ಕಾಡ್ ಹೈದರಾಲಿ ಶಿಹಾಬ್ ತಂಗಲ್, ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಹಾಗೂ ಹಾಲಿ ಲೋಕಸಭಾ ಸದಸ್ಯ ಮಹಮ್ಮದ್ ಅಜರುದ್ದೀನ್, ಜುಮ್ಮು ಕಾಶ್ಮೀರದ ಪಿ.ಡಿ.ಪಿ. ಪಕ್ಷದ ಅಧ್ಯಕ್ಷೆ ಮಹಬೂಬಾ ಮುಫ್ತಿ ಸಯೀದ್ ಸಹಿತ ಇತರ ಕೆಲವು ಗಣ್ಯರೂ ಒಳಗೊಂಡಿದ್ದಾರೆ.
ವರದಿ: ಅಶ್ರಫ್ ಮಂಜ್ರಾಬಾದ್.