ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ಅಬುಧಾಬಿ: ಈದ್ ಮಿಲನ್ ಆಚರಿಸಿದ ಮರ್ಜಜ್ ಅಲ್ ನವಾಯತ್

ಅಬುಧಾಬಿ: ಈದ್ ಮಿಲನ್ ಆಚರಿಸಿದ ಮರ್ಜಜ್ ಅಲ್ ನವಾಯತ್

Tue, 13 Oct 2009 02:36:00  Office Staff   S.O. News Service
ಅಬುಧಾಬಿ, ಅಕ್ಟೋಬರ್ 12: ನಗರದಲ್ಲಿ ಕಾರ್ಯನಿರತವಾಗಿರುವ ಮರ್ಕಜ್ ಅಲ್ ನವಾಯತ್ ಸಂಘಟನೆ ಇತ್ತೀಚೆಗೆ ಈದ್ ಮಿಲನ್ ಕಾರ್ಯಕ್ರಮವೊಂದನ್ನು ಏರ್ಪಡಿಸಿತ್ತು.  ನಗರದ ಇಂಡಿಯನ್ ಸೋಶಿಯಲ್ ಅಂಡ್ ಕಲ್ಚರಲ್ ಸೆಂಟರ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಶೆಟ್ಟಿ, ಸುಧೀರ್ ಶೆಟ್ಟಿ, ಎಸ್.ಎಮ್. ಖಲೀಲುರ್ರಹ್ಮಾನ್ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.
9_abudhabi_1.jpg
ಸ್ವಾದಿಷ್ಟ ಬಫಿ ಭೋಜನದ ಬಳಿಕ ಕಾರ್ಯಕ್ರಮ ಪ್ರಾರಂಭವಾಯಿತು. ಹಫೀಜ್ ಮೊಹಮ್ಮದ್ ಅಸ್ಲಂ ರವರು ಪವಿತ್ರ ಕುರ್‍ ಆನ್ ವಾಕ್ಯಗಳನ್ನು ಪಠಿಸಿದರು. ಬಳಿಕ  ಅಬ್ದುಲ್ ಹಮೀದ್ ಹೈದರಾಬಾದಿಯವರು ನಾತ್ ಪದ್ಯವೊಂದನ್ನು ಹಾಡಿದರು.ಪ್ರಧಾನ ಕಾರ್ಯದರ್ಶಿಗಳಾದ ಅಶ್ರಫ್ ಮುಸ್ಬಾಹ್ ರವರು ಸಭಿಕರನ್ನು ಸಭೆಗೆ ಸ್ವಾಗತಿಸಿದರು.
9_abudhabi_3.jpg
9_abudhabi_4.jpg9_abudhabi_5.jpg
9_abudhabi_6.jpg]9_abudhabi_7.jpg
9_abudhabi_8.jpg
 
ಬಳಿಕ ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ಪದ್ಮಶ್ರೀ ಡಾ. ಬಿ.ಆರ್. ಶೆಟ್ಟಿಯವರು ಮಂಗಳೂರು ವಿಮಾನ ನಿಲ್ದಾಣ ಅಂತಾರಾಷ್ಟ್ರೀಯವಾಗಲು ಭಟ್ಕಳ ಬಾಂಧವರು ನೀಡಿದ ಸಹಕಾರವನ್ನು ಮರೆಯುವಂತಿಲ್ಲ ಎಂದು ತಿಳಿಸಿದರು.  ಸ್ವದೇಶದಲ್ಲಿ ಹಲವು ಸಾಮಾಜಿಕ ಮತ್ತು ದತ್ತಕ ಕಾರ್ಯಕ್ರಮಗಳಲ್ಲಿ ಭಟ್ಕಳದ ಮುಸ್ಲಿಂ ಜನತೆ ಎಂದಿಗೂ ತಮ್ಮ ಸಹಕಾರ ಹಾಗೂ ನೆರವನ್ನು ನೀಡುತ್ತಿದ್ದು ಸಾಮರಸ್ಯಕ್ಕೆ ಒಂದು ಉದಾಹರಣೆಯಾಗಿದೆ ಎಂದು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ನೆರೆಯಿಂದ ಪ್ರಭಾವಿತವಾದ ಪ್ರದೇಶಗಳಿಗೆ ನೆರವು ನೀಡಲು ಮುಖ್ಯಮಂತ್ರಿಗಳು ಅನಿವಾಸಿಗಳ ಸಹಕಾರ ಕೋರಿದ್ದು ಆ ಕೋರಿಕೆಗೆ ಸ್ಪಂದಿಸಲು ಅವರು ಕರೆ ನೀಡಿದರು. ಉತ್ತರ ಕನ್ನಡ ಜಿಲ್ಲೆಯ ಕಾರಾವಾರದ ಬಳಿ ಮನೆಗಳನ್ನು ಕಳೆದುಕೊಂಡವರಿಗೆ ಸುಮಾರು ಇನ್ನೂರು ಮನೆಗಳನ್ನು ಕಟ್ಟಿಸಿಕೊಡಲು ಇರುವ ತಮ್ಮ ಇಚ್ಛೆಯನ್ನು ಅವರು ವ್ಯಕ್ತಪಡಿಸಿದರು. 

ಬಳಿಕ ಮಾತನಾಡಿದ ಇನ್ನೋರ್ವ ಅತಿಥಿ ಮೌಲಾನಾ ಅಯ್ಯೂಬ್ ನದ್ವಿಯವರು ಅಲ್ ಸುನ್ನಾಹ್ ದತ್ತಕ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರಣೆ ನೀಡಿದರು.  ಭಟ್ಕಳ ಸಮುದಾಯದ ಜನತೆಗೆ ಅವರು ಇಸ್ಲಾಂ ವಿಧಿಸಿದ ಉಡುಪುಗಳನ್ನೇ ತೊಡುವಂತೆ ಕರೆನೀಡಿದರು. 

ಬಳಿಕ ಮಾತನಾಡಿದ ಅಂಜುಮಾನ್ ಸಂಸ್ಥೆಯ ಅಧ್ಯಕ್ಷರಾದ ಎಸ್. ಎಂ. ಖಲೀಲುರ್ರಹ್ಮಾನ್ ರವರು ಭಟ್ಕಳದ ಭೂವಿವಾದದ ಕುರಿತು ಮಾತನಾಡಿ ಭೂಮಿಯ ಸದ್ಬಳಕೆಯ ಬಗ್ಗೆ ಒತ್ತು ನೀಡಿದರು. ಭಟ್ಕಳ ತಾಲ್ಲೂಕಿನ ಶೇ. ೮೦ ರಷ್ಟು ಪ್ರದೇಶ ಅರಣ್ಯಪ್ರದೇಶವಾಗಿದ್ದು ಸುಮಾರು ಇಪ್ಪತ್ತು ವರ್ಷಗಳ ಬಳಿಕ ಭೂಮಿಯ ತೀವ್ರ ಆಭಾವ ಉಂಟಾಗಲಿದೆ, ಆ ಪರಿಸ್ಥಿತಿಯನ್ನು ಇಂದೇ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ಜಾರಿಯಲ್ಲಿದೆ ಎಂದು ಅವರು ತಿಳಿಸಿದರು.

ಬಳಿಕ ಮಾತನಾಡಿದ ಖಲೀಜ್ ಕೌಂಸಿಲ್ ಪ್ರಧಾನ ಕಾರ್ಯದರ್ಶಿ ಎಸ್. ಜೆ. ಸೈಯದ್ ಹಾಶಿಂ ರವರು ಮಾತನಾಡಿ ರಾಬಿತಾ ಸಂಸ್ಥೆಯ ಪ್ರಗತಿಯ ಬಗ್ಗೆ ವಿವರ ನೀಡಿದರು.  

ಜಮಾತ್ ಅಧ್ಯಕ್ಷರಾದ ಜಾಫರ್ ದಾಮ್ದಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಕಾರ್ಯಕ್ರಮದ ಎರಡನೆಯ ಭಾಗದಲ್ಲಿ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.  ಕೆ.ಎಂ. ಸಮೀರ್ ಮತ್ತು ಮುಹೀಬುಲ್ಲಾ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಿದ್ದರೆ ಶಬ್ಬೀರ್ ಅಜೈಬ್ ಗಜಲ್ ಗೀತೆಯೊಂದನ್ನು ಹಾಡಿದರು.  ಜೀಲಾನಿ ರುಕ್ನುದ್ದೀನ್, ರಯ್ಯನ್ ಖತೀಬ್ ಮತ್ತು ಅಬ್ದುರ್ರಹೀಂ ರವರು ರ್‍ಯಾಫೆಲ್ ಡ್ರಾ ಮೂಲಕ ಹಲವು ಅದೃಷ್ಟಶಾಲಿಗಳು ಬಹುಮಾನಗಳನ್ನು ಪಡೆಯುವಂತೆ ಮಾಡಿದರು. ಎಸ್. ಎಂ. ಹಾಸಿಬ್ ಕಾಡ್ಲಿಯವರು ವಂದನಾರ್ಪಣೆ ಸಲ್ಲಿಸಿದರು. ಆಫ್ತಾಬ್ ಎಂ.ಜೆ ಮತ್ತು ಮುರ್ತುಜಾ ಕೋಲಾ ಕಾರ್ಯಕ್ರಮವನ್ನು ನಿರೂಪಿಸಿದರು.  

ಯು.ಎಇ. ಎಕ್ಸ್ ಚೇಂಜ್ ಸಂಸ್ಥೆಯ ಮುಖ್ಯ ನಿರ್ವಾಹಕ ಅಧಿಕಾರಿ ಶ್ರೀ ಸುಧೀರ್ ಶೆಟ್ಟಿ, ಶ್ರೀ ಪುರಿ ಸಹಿತ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share: