ರಿಯಾದ್. ಫೆಬ್ರವರಿ ೪ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತೌಡುಗೋಳಿಯ ಇಸ್ಮಾಯಿಲ್ ಎಂಬುವವರ ಪುತ್ರ ಮಹಮ್ಮದ್ (26 ವರ್ಷ) ಎಂಬುವವರು ಹೃದಯಾಘಾತದಿಂದ ಜ.೨೬ ರಂದು ರಿಯಾದಿನಲ್ಲಿ ನಿಧನರಾದರು.
ಕಳೆದ ನಾಲ್ಕು ವರ್ಷಗಳ ಹಿಂದೆ ಉದ್ಯೋಗ ನಿಮಿತ್ತ ಸೌದಿ ಅರೇಬಿಯಾಕ್ಕೆ ಬಂದಿದ್ದ ಅವರು ಆರ್ಥಿಕ ಸಂಕಷ್ಟಗಳ ಕಾರಣ ಈ ಅವಧಿಯಲ್ಲಿ ಒಂದು ಬಾರಿಯೂ ಊರಿಗೆ ಭೇಟಿ ನೀಡಿರಲಿಲ್ಲ. ಮೊನ್ನೆ ಇದ್ದಕ್ಕಿದ್ದಂತೆ ತೀವ್ರ ಹೃದಯಾಘಾತಕ್ಕೀಡಾದ ಇವರನ್ನು ಇಲ್ಲಿನ ಅಲ್ ಒಬೈದಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.
ದಕ್ಷಿಣ ಕನ್ನಡ ಮುಸ್ಲಿಂ ಒಕ್ಕೂಟದ ಸಕ್ರಿಯ ಸದಸ್ಯರಾಗಿದ್ದ ಇವರು ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕುಟುಂಬದ ಆದಾಯದ ಬೆನ್ನೆಲುಬಾಗಿದ್ದ ಮೃತರು ತಂದೆ, ತಾಯಿ, ಮೂವರು ಸಹೋದರರ ಜೊತೆ ಇಬ್ಬರು ಸಹೋದರಿಯರನ್ನೂ ಅಗಲಿದ್ದಾರೆ. ಮೃತರ ನಿಧನಕ್ಕೆ ದಕ್ಷಿಣ ಕನ್ನಡ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಜನಾಬ್: ಅಬ್ಬಾಸ್ ಉಚ್ಚಿಲ್ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಇಲ್ಲಿನ ನಸೀಮ್ ಖಬರಸ್ಥಾನದಲ್ಲಿ ಫೆಬ್ರವರಿ ೨ ರಂದು ನಡೆಸಲಾಯಿತು.
ಸೌಜನ್ಯ: ಅಶ್ರಫ್ ಮಂಜರಾಬಾದ್