ದುಬೈ, ನವೆಂಬರ್ 6: ಶುಕ್ರವಾರ, ೬ನೇ ನವೆಂಬರ್ ನಂದು ನಗರದ ಜಬೀಲ್ ಪಾರ್ಕ್ ಉದ್ಯಾನವನದಲ್ಲಿ ಸನ್ ಶೈನ್ ಸ್ಪೋರ್ಟ್ - ಎಮಾರಾತ್ ಸಂಘಟನೆ ತನ್ನ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು.
ಕಾರ್ಯಕ್ರಮದಲ್ಲಿ ಖ್ಯಾತ ಇಸ್ಲಾಮಿಕ್ ವಿಧ್ವಾಂಸರಾದ ಮೌಲಾನಾ ಸಲ್ಮಾನ್ ನದ್ವಿಯವರು ಆಗಮಿಸಿ ವಿಶೇಷ ಕಳೆ ನೀಡಿದರು.

ಜುಮಾ ನಮಾಜಿನ ಬಳಿಕ ಮಧ್ಯಾಹ್ನದ ಸವಿನಿದ್ದೆಯನ್ನು ತ್ಯಜಿಸಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸ್ವಾದಿಷ್ಟವಾದ ಪಾರಂಪರಿಕ ಭೋಜನದ ಬಳಿಕ ಅಸರ್ ನಮಾಜ್ ಜಮಾತ್ ಮೂಲಕ ನಿರ್ವಹಿಸಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ಕಾರ್ಯಕ್ರಮವು ಹಫೀಜ್ ಅಬ್ದುಲ್ ರವೂಫ್ ರವರ ಪವಿತ್ರ ಕುರಾನ್ ಪಠಣದೊಂದಿಗೆ ಪ್ರಾರಂಭವಾಯಿತು.

ಮೌಲಾನಾ ಇರ್ಶಾದ್ ಅಫ್ರಿಖಾ ರವರು ಕಾರ್ಯಕ್ರಮದ ನಿರೂಪಕರಾಗಿ ಕಾರ್ಯನಿರ್ವಹಿಸಿದರು.
ಬಳಿಕ ಮಾತನಾಡಿದ ಸಂಘಟನೆಯ ಕಾರ್ಯದರ್ಶಿಗಳಾದ ಮೌಲಾನಾ ಜಿಲಾನಿ ಅಕ್ರಮಿಯವರು ಸದಸ್ಯರು ಸಂಘದ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗುವುದರ ಮೂಲಕ ಸಂಘಟನೆಯ ಬಲವನ್ನು ವೃದ್ಧಿಗೊಳಿಸಲು ಕರೆನೀಡಿದರು.

ಕಾರ್ಯಕ್ರಮಕ್ಕೆ 120 ಸದಸ್ಯರಿರುವ ಸಂಘಟನೆಯ ಬಹುತೇಕ ಸದಸ್ಯರು ಹಾಜರಿದ್ದು ತಮ್ಮ ಸಹಕಾರವನ್ನು ಪ್ರಕಟಿಸಿದರು.


ಬಳಿಕ ಮೌಲಾನಾ ಇರ್ಷಾದ್ ರವರು ಸಂಘದ ವಾರ್ಷಿಕ ವರದಿಯನ್ನು ಸಾದರಪಡಿಸಿದರು. ಕಳೆದೆರೆಡು ವರ್ಷಗಳಿಂದ ಊರಿನಲ್ಲಿ ಐವತ್ತಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ನಗರದ ಖಾಜಿಯಾ ಮಸೀದಿಯ ಮೇಲ್ಬಾಗದ ಕೋಣೆಯಲ್ಲಿ ವ್ಯವಸ್ಥೆ ಮಾಡಲಾಗಿರುವುದನ್ನು ಅವರು ಇತರ ವಿಷಯಗಳೊಂದಿಗೆ ವಿಷದಪಡಿಸಿದರು.

ಬಳಿಕ ಮಾತನಾಡಿದ ಭಟ್ಕಳ್ ಮುಸ್ಲಿಂ ಜಮಾತ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸೈಯದ್ ಹಾಶಿಂ ರವರು ನವಾಯತ್ ಸಮುದಾಯದಲ್ಲಿ ಸಂಘಟನೆಯ ಮಹತ್ವವನ್ನು ವಿವರಿಸಿದರು. ಊರಿನಲ್ಲಿ ಜಾಮಿಯಾ ಮತ್ತು ಅಂಜುಮನ್ ಶಿಕ್ಷಣ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಹಿಂದಿನ ವರ್ಷಗಳ ಪ್ರಯತ್ನಗಳು ಈಗ ಪ್ರಕಟಗೊಳ್ಳುತ್ತಿರುವುದು ಸಂತಸ ತಂದಿದೆ ಎಂದು ಅವರು ತಿಳಿಸಿದರು.
ಇತ್ತೀಚೆಗೆ ಎಸ್ಸೆಸ್ಸೆಲ್ಸಿ ಮುಗಿಸಿದ ವಿದ್ಯಾರ್ಥಿಗಳು ಕಾಲೇಜಿಗೇ ಸೇರದೇ ಹೊರಬೀಳುತ್ತಿರುವುದು ಕಾಳಜಿಗೆ ಕಾರಣವಾಗಿದ್ದು ಅಂತಹವರನ್ನು ಗುರುತಿಸಿ ಹೆಚ್ಚಿನ ಶಿಕ್ಷಣ ಪಡೆಯುವಂತೆ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.

ನಂತರ ಮಾತನಾಡಿದ ಭಟ್ಕಳ ಮುಸ್ಲಿಂ ಜಮಾತ್ ದುಬೈ ಸಂಘಟನೆಯ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಸಿದ್ದೀಖಿಯವರು ಮಾತನಾಡಿ
ಭಟ್ಕಳದ ನವಾಯತ್ ಸಮುದಾಯ ಕನ್ನಡ ಭಾಷೆಯ ಕಲಿಕೆಯಿಂದ ವಂಚಿತವಾಗಿದ್ದು ಕನ್ನಡ ಕಲಿಯುವಿಕೆಯಲ್ಲಿ ಆದ್ಯತೆ ನೀಡಲು ಕರೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ದಾಖಲೆಗಳು ಹಾಗೂ ಸರ್ಕಾರಿ ಕಛೇರಿಗಳಲ್ಲಿ ಸಂವಾದ ಹೆಚ್ಚಾಗಿ ಕನ್ನಡದಲ್ಲಿಯೇ ಆಗುತ್ತಿದ್ದು ರಾಜ್ಯಭಾಷೆಯಾದ ಕನ್ನಡ ಕಲಿಯುವುದು ಅಗತ್ಯವಾಗಿದೆ ಎಂದು ಅವರು ತಿಳಿಸಿದರು.

ಆ ಬಳಿಕ ಮಾತನಾಡಿದ ಮರ್ಕಜ್-ನವಾಯತ್ ಅಬುಧಾಬಿ ಸಂಘಟನೆಯ ಮೊಹಮ್ಮದ್ ಜಾಫರ್ ದಾಂದಾ ರವರು ಮಾತನಾಡಿ ವಿದೇಶದಲ್ಲಿ ನಮ್ಮ ಒಗ್ಗಟ್ಟೇ ನಮ್ಮ ಬಲವಾಗಿದೆ, ಈ ಬಲವನ್ನು ಕುಂಠಿತಗೊಳಿಸಲು ಬಿಡಬಾರದು ಎಂದು ಕರೆನೀಡಿದರು. ಇಂದಿನ ದಿನಗಳಲ್ಲಿ ಉತ್ತಮ ಶಿಕ್ಷಣವೊಂದೇ ಸಮುದಾಯದ ಏಳ್ಗೆಗೆ ಸಾಧನವಾಗಿದ್ದು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲು ಕರೆನೀಡಿದರು.

ಇತ್ತೀಚೆಗೆ ದುಬೈ ಸರ್ಕಾರದ ಆರೋಗ್ಯ ಇಲಾಖೆಯ ಪ್ರತಿಷ್ಟಿತ ಪ್ರಶಸ್ತಿ ಪಡೆದ ಅಬ್ದುಲ್ ಕಾದರ್ ಭಾಶಾ ರವರು ಮಾತನಾಡಿ ಸಂಘಟನೆಗಳು ಯಾವುದೇ ಕಾರ್ಯವನ್ನು ನಿರ್ವಹಿಸುವ ಮುನ್ನ ತಮ್ಮ ಸಹಸಂಘಟನೆಗಳ ಮುಖಂಡರೊಂದಿಗೆ ಸಮಾಲೋಚಿಸುವುದು ಸೂಕ್ತ, ಇದರಿಂದಾಗಿ ಒಂದೇ ಕೆಲಸವನ್ನು ಇಬ್ಬರು ಮಾಡುವುದು ತಪ್ಪಿದಂತಾಗುವುದು ಎಂದು ತಮ್ಮ ಅಭಿಪ್ರಾಯ ತಿಳಿಸಿದರು. ಸೇವೆಯ ಮೂಲಕ ಇಹದಾರಿಯ ಉನ್ನತಿ ಸಾಧ್ಯವಿದ್ದು ಯಾವುದೇ ಕೆಲಸದಲ್ಲಿದ್ದರೂ ಆ ಕೆಲಸದಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿ ಜನತೆಗೆ ನೆರವಾಗುವುದರ ಮೂಲಕ ಇಹಲೋಕದ ಕರ್ತವ್ಯವನ್ನು ಪೂರೈಸಿದಂತಾಗುತ್ತದೆ ಎಂದು ಅವರು ತಿಳಿಸಿದರು.

ಬಳಿಕ ಮಾತನಾಡಿದ ಮೌಲಾನ ತಲ್ಹಾರವರು ಈ ಸಂಘಟನೆ ಕ್ರೀಡೆಯ ಹೆಸರಿನಲ್ಲಿ ಸ್ಥಾಪಿಸಲ್ಪಟ್ಟಿದ್ದರೂ ಕ್ರೀಡೆಯ ಹೊರತಾಗಿ ಬೇರೆ ಕ್ಷೇತ್ರಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದೆ, ಊರಿನಲ್ಲಿ ಇನ್ನೂರರಿಂದ ನಾನ್ನೂರು ಮಕ್ಕಳಿಗೆ ಶಿಕ್ಷಣಕ್ಕೆ ನೆರವಾಗುತ್ತಿದ್ದು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ ಎಂದು ತಿಳಿಸಿದರು.
ಈ ಹಿಂದೆ ಒಂದು ಕಾರ್ಯಕ್ರಮದಲ್ಲಿ ಭಾರತದ ಖ್ಯಾತ ಕ್ರಿಕೆಟ್ ಪಟು ಯೂಸುಫ್ ಪಠಾಣ್ ರನ್ನು ವೇದಿಕೆಯ ಮೇಲೆ ಕರೆತರಲಾಗಿತ್ತು. ಕ್ರಿಕೆಟ್ ಮೈದಾನದಲ್ಲಿ ಜನರ ಮನಗೆದ್ದ ಅವರು ವೇದಿಕೆಯಲ್ಲಿ ತಮ್ಮ ಮಾತುಗಳಿಂದ ಜನರನ್ನು ಗೆಲ್ಲಲು ವಿಫಲರಾದರು. ಏಕೆಂದರೆ ಅವರಲ್ಲಿ ಸೂಕ್ತ ಶಿಕ್ಷಣದ ಕೊರತೆಯಿತ್ತು. ಆದ್ದರಿಂದ ಮಕ್ಕಳ ಸಹಜ ಪ್ರತಿಭೆಯೊಂದೇ ಅವರ ಬಾಳಿಗೆ ದೀಪವಾಗಬಾರದು, ಪ್ರತಿ ತಂದೆತಾಯಿಯರು ತಮ್ಮ ಮಕ್ಕಳಿಗೆ ಸಾಧ್ಯವಾದಷ್ಟು ಉತ್ತಮ ಹಾಗೂ ಹೆಚ್ಚಿನ ಶಿಕ್ಷಣ ನೀಡುವತ್ತ ಗಮನ ನೀಡಬೇಕು ಎಂದು ಅವರು ಕರೆ ನೀಡಿದರು.

ಬಳಿಕ ಮಾತನಾಡಿದ ಮೌಲಾನಾ ಹಾಫೀಜ್ ಇರ್ಶಾದ್ ರವರು ಊರಿನಲ್ಲಿರುವ ಹೆಣ್ಣು ಮಕ್ಕಳ ಪಾಲಕರು ವಿದೇಶದಲ್ಲಿದ್ದರೆ ಅಂತಹವರಿಗೆ ಮೊಬೈಲ್ ಪೋನುಗಳ ಮೂಲಕ ಕಿರುಕುಳ ನೀಡಲಾಗುತ್ತಿದ್ದು ಅವುಗಳನ್ನು ದಿಟ್ಟತನದಿಂದ ಎದುರಿಸಲು ಕರೆನೀಡಿದರು. ಸೂಕ್ತ ಶಿಕ್ಷಣ ಪಡೆಯದ ಮಹಿಳೆ ಹೆಚ್ಚು ಬಾಧಿತಳಾಗುತ್ತಿದ್ದು ಹೆಣ್ಣು ಮಕ್ಕಳೂ ಸಾಧ್ಯವಾದಷ್ಟು ಹೆಚ್ಚಿನ ಶಿಕ್ಷಣ ಪಡೆಯುವಂತಾಗಬೇಕು, ಇದಕ್ಕಾಗಿ ಹಲವು ಸಂಘಟನೆಗಳು ಕಾರ್ಯನಿರ್ವಹಿಸುತ್ತಿದ್ದು ಅವುಗಳಿಗೆ ಸಹಕಾರ ನೀಡಲು ಕರೆನೀಡಿದರು. ಆಲ್ಲದೆ ಯಾವುದೇ ವಿದ್ಯಾರ್ಥಿ ಉತ್ತಮ ಸಾಧನೆ ತೋರಿದರೆ ಅವುಗಳಿಗೆ ಮನ್ನಣಿ ನೀಡಿ ಪ್ರೋತ್ಸಾಹಿಸುವುದು ಸಂಘಟನೆಗಳ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಬಳಿಕ ಸಭೆಗೆ ಆಗಮಿಸಿದ್ದ ಖ್ಯಾತ ಇಸ್ಲಾಮಿಕ್ ವಿದ್ವಾಂಸರಾದ ಮೌಲಾನಾ ಸಲ್ಮಾನ್ ನದ್ವಿಯವರು ಮಾತನಾಡಿ ಇಸ್ಲಾಮಿ ವಿಷಯದ ಕುರಿತು ಕಿರು ಪ್ರವಚನವನ್ನು ನೀಡಿದರು. ಪವಿತ್ರ ಕುರಾನ್ ನಲ್ಲಿ ಹೇಳಿರುವಂತೆ ಕಯಾಮತ್ ನ ದಿನ (ಅಂತಿಮ ದಿನ) ಹತ್ತಿರಾಗುತ್ತಿರುವ ಎಲ್ಲಾ ಸೂಚನೆಗಳು ನಿಧಾನವಾಗಿ ನಿಜವಾಗುವ ಲಕ್ಷಣಗಳು ತೋರುತ್ತಿದ್ದು ಆ ದಿನಕ್ಕಾಗಿ ಎಲ್ಲರೂ ತಯಾರಿ ನಡೆಸಬೇಕೆಂದು ಕರೆನೀಡಿದರು. ಇತ್ತೀಚಿನ ಬೆಳವಣಿಗೆಗಳು ಅಂತ್ಯಕಾಲದಲ್ಲಿ ಪ್ರಕಾಶಮಾನವಾಗಿ ಉರಿಯುವ ಮೋಂಬತ್ತಿಯಂತಿದ್ದು ಅಲ್ಲಾಹನೆಡೆಗೆ ನಡೆಯುವ ಮಾರ್ಗಗಳನ್ನು ಅನುಸರಿಸುವ ಮೂಲಕ ಮಾತ್ರ ನರಕಾಗ್ನಿಯಿಂದ ಉಳಿಯಬಹುದು ಎಂದು ಅವರು ತಿಳಿಸಿದರು.



ಆ ಬಳಿಕ ರಸಪ್ರಶ್ನೆ ಕಾರ್ಯಕ್ರಮದ ಮೂಲಕ ಹಲವು ಪ್ರಶ್ನೆಗಳನ್ನು ಕೇಳಲಾಯ್ತು. ಸರಿಯುತ್ತರ ನೀಡಿದವರಿಗೆ ಬಹುಮಾನಗಳ ಮೂಲಕ ಪ್ರೋತ್ಸಾಹಿಸಲಾಯ್ತು.




ನಂತರ ಮೌಲಾನಾ ಸಲ್ಮಾನ್ ನದ್ವಿಯರು ಪ್ರಶಸ್ತಿ ವಿಜೇತ ಅಬ್ದುಲ್ ಖಾದರ್ ಬಾಷಾರವರಿಗೆ ಸನ್ ಶೈನ್ ಸ್ಪೋರ್ಟ್ಸ್ ಸಂಘಟನೆಯ ಪರವಾಗಿ ಸನ್ಮಾನ ಪತ್ರವನ್ನು ನೀಡಿ ಸನ್ಮಾನಿಸಿದರು. ನೆರೆದ ಸದಸ್ಯರು ಅಬ್ದುಲ್ ಖಾದರ್ ಬಾಷಾರೊಂದಿಗೆ ತಮ್ಮ ಸಂತೋಷವನ್ನು ಹಂಚಿಕೊಂಡರು.
ಸದಸ್ಯರು ತಮ್ಮ ಮನೆಯಿಂದ ಈ ಕಾರ್ಯಕ್ರಮಕ್ಕೆಂದೇ ತಯಾರಿಸಿ ತಂದಿದ್ದ ಹಲವು ಸಿಹಿ ಖಾದ್ಯಗಳು ನೆರೆದವರ ಜಿಹ್ವಾಚಾಪಲ್ಯವನ್ನು ತಣಿಸಿದವು.
ಅಂತಿಮವಾಗಿ ಮೌಲಾನಾ ಇರ್ಶಾದ್ ರವರು ವಂದನಾರ್ಪಣೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಕೊನೆಗೊಂಡಿತು.
ಚಿತ್ರ, ವರದಿ: ಅರ್ಶದ್ ಹುಸೇನ್ ಎಂ.ಹೆಚ್, ದುಬೈ.