ದುಬೈ, ನವೆಂಬರ್ 30: ದುಬೈ ವರ್ಲ್ಡ್ ಸ್ಥಿತಿಗತಿಯನ್ನು ಪ್ರಕಟಿಸಿದ ಸಂಡೇ ಟೈಮ್ಸ್ ಪತ್ರಿಕೆಯನ್ನು ನಗರದಲ್ಲಿ ನಿಷೇಧಿಸುವಂತೆ ದುಬೈ ಸರ್ಕಾರ ಪ್ರಕಟಣೆ ಹೊರಡಿಸಿದೆ. ನಗರದಲ್ಲಿರುವ ಎಲ್ಲಾ ಮಳಿಗೆಗಳಲ್ಲಿರುವ ಪತ್ರಿಕೆಗಳನ್ನು ಬಳಿಕ ಹಿಂತೆಗೆದುಕೊಳ್ಳಲಾಗಿದೆ.
ಪತ್ರಿಕೆಯ ಎರೆಡು ಪುಟಗಳಲ್ಲಿ ದುಬೈ ಆರ್ಥಿಕ ಸ್ಥಿತಿಗತಿ ಬಗ್ಗೆ ವಿವರಣೆ ನೀಡಿದ್ದು ಮಾತ್ರವಲ್ಲದೇ ಯು.ಎ.ಇ. ಉಪಪ್ರಧಾನಿ ಮತ್ತು ದುಬೈ ಸಂಸ್ಥಾನದ ಆಡಳಿತಗಾರರಾದ ಶೇಖ್ ಮೊಹಮ್ಮದ್ ರವರು ಮುಳುಗುತ್ತಿರುವ ಹಡಗಿನಲ್ಲಿದ್ದಂತಿರುವ ವ್ಯಂಗ್ಯಚಿತ್ರವನ್ನೂ ಪ್ರಕಟಿಸಲಾಗಿದೆ.
ಈ ವ್ಯಂಗ್ಯಚಿತ್ರವನ್ನು ಅಬುಧಾಬಿ ಸರ್ಕಾರ ’ಅವಹೇಳನಾಕಾರಿ’ ಎಂದು ಬಣ್ಣಿಸಿದ್ದು ಪತ್ರಿಕೆಯ ನಿಲುವನ್ನು ಖಂಡಿಸಿದೆ.
ಯು.ಎ.ಇ. ಕಾನೂನು ಸಂಹಿತೆಯ ಪ್ರಕಾರ ಯು.ಎಇ.ಯಲ್ಲಿರುವ ಯಾವುದೇ ಸಂಸ್ಥಾನದ ಆಡಳಿತಗಾರರ ವಿರುದ್ಧ ಪತ್ರಿಕೆಯಲ್ಲಿ ಅವಹೇಳನಾಕಾರಿ ವಿವರಣೆಗಳನ್ನು ನೀಡುವುದು ಅಪರಾಧವಾಗಿದೆ. ಈ ತಿಂಗಳ ಪ್ರಾರಂಭದಲ್ಲಿ ಪತ್ರಿಕಾ ಪ್ರತಿನಿಧಿಗಳಲ್ಲಿ ಅಬುಧಾಬಿಯೊಂದಿಗಿನ ಸಂಬಂಧ ಅಥವಾ ದುಬೈ ಸಂಸ್ಥಾನದ ಸ್ಥಿತಿಗತಿಯ ಬಗ್ಗೆ ವಿಮರ್ಶಿಸುವುದನ್ನು ನಿಲ್ಲಿಸಲು ಮನವಿ ಮಾಡಿಕೊಂಡಿದ್ದರು.
ಪ್ರಸ್ತುತ ಆರ್ಥಿಕ ಮುಗ್ಗಟ್ಟಿನಲ್ಲಿರುವ ದುಬೈ ಸರ್ಕಾರ ಎಂಭತ್ತು ಬಿಲಿಯನ್ ಡಾಲರುಗಳ ಕೊರತೆ ಎದುರಿಸುತ್ತಿದೆ.