ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ಶಾರ್ಜಾ: ಅದ್ದೂರಿಯ ಸಮಾರಂಭ ಯಶಸ್ವಿ - ಶಾರ್ಜಾ ಕರ್ನಾಟಕ ಸಂಘದ 7ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಸಮಾರಂಭ

ಶಾರ್ಜಾ: ಅದ್ದೂರಿಯ ಸಮಾರಂಭ ಯಶಸ್ವಿ - ಶಾರ್ಜಾ ಕರ್ನಾಟಕ ಸಂಘದ 7ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಸಮಾರಂಭ

Sat, 14 Nov 2009 02:33:00  Office Staff   S.O. News Service
ಶಾರ್ಜಾ, ನವೆಂಬರ್ ೧೪: ತನ್ನದೇ ಆದ ವೈಶಿಷ್ಟ್ಯಪೂರ್ಣತೆಯಿಂದ ಕಾರ್ಯಕ್ರಮಗಳನ್ನು ನೀಡುತ್ತಾ ಕನ್ನಡಿಗರ ಮೆಚ್ಚುಗೆಯನ್ನು ಪಡೆದಿರುವ ಕರ್ನಾಟಕ ಸಂಘ ಶಾರ್ಜಾ ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ಎಲ್ಲಾ ಕರ್ನಾಟಕ ಪರ ಸಂಘಟನೆಗಳ ಮುಖ್ಯಸ್ಥರು, ಯು. ಎ. ಇ. ಯ  ಗಣ್ಯರು, ಕಿಕ್ಕಿರಿದು ತುಂಬಿದ್ದ ಏಶ್ಯನ್ ಪ್ಯಾಲೆಸ್ ಸಭಾಂಗಣ ಕನ್ನಡಿಗರ ಸಂತೋಷ ಸಂಭ್ರಮದ ವಾತವರಣ ಸೃಷ್ಟಿಯಾಗಿತ್ತು.

ಕರ್ನಾಟಕವನ್ನು ಪ್ರತಿನಿಧಿಸುವ ಕನ್ನಡ, ತುಳು, ಕೊಂಕಣಿ, ಕೊಡವ, ಬ್ಯಾರಿ ಭಾಷೆಯ ಸಂಕೇತವಾಗಿ ಪಂಚ ಜ್ಯೋತಿಗಳನ್ನು ಕ್ರಮವಾಗಿ ಮಹಿಳಾಮಣಿಗಳಾದ ಸರಿತಾ ನಿತ್ಯಾನಂದ್, ಮಂಜುಳಾ ಗಣೇಶ್ ರೈ, ಪಾರಿಜಾ ಆನಂದ್ ಬೈಲೂರ್, ಸ್ಮಿತ ಸುಜಯ, ಮತ್ತು ರಜನಿ ಜೀವನ್ ಕುಕ್ಯಾನ್ ರವರು ಮೆರವಣಿಗೆಯ ಮೂಲಕ ತಂದು ಜ್ಯೋತಿ ಬೆಳಗುವುದರ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು. ಮಂಗಳೂರಿನಿಂದ ಅತಿಥಿಗಳಾಗಿ ಬಂದಿದ್ದ ಗಾಯಕರಾದ ರವಿಂದ್ರ ಪ್ರಭು ಮತ್ತು ಅನಿತಾ ಸ್ಯಾಮ್ಸನ್ ರವರ ಪ್ರಾಥನಾ ಗೀತೆ, ನಂತರ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ನೋವೆಲ್ ಡಿ. ಅಲ್ಮೇಡಾ ಸರ್ವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಅಜ್ಮಾನ್  ಸಿಂಫೊನಿ ಮ್ಯುಸಿಕ್ ಶಾಲೆಯ ಮಕ್ಕಳು ಅಕರ್ಷಕವಾಗಿ ಸ್ವಾಗತ ನೃತ್ಯದ ಮೂಲಕ ನೋಡುಗರ ಮನಗೆದ್ದರು, ಒಸಿಯನ್ ಕಿಡ್ಸ್ ನ ಸಮೂಹ ನೃತ್ಯ, ಸುಮಧುರ ಕಂಠದ ಗಾಯಕ ಹರೀಶ್ ಶೇರಿಗಾರ್ ರವರ ಗಾಯನ, ಮಂಗಳೂರಿನ ಪ್ರಖ್ಯಾತ ಹಾಸ್ಯ ಕಲಾವಿದ ’ಡೊಲ್ಲಾ ಮಂಗಳೂರ್’ ತುಳು, ಕನ್ನಡ, ಕೊಂಕಣಿ ಭಾಷೆಯಲ್ಲಿ  ಹಾಸ್ಯ ರಸಾಯನ ನೀಡಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಾಡಿಸಿದರು.

ಬಿಲ್ಲವಾಸ್ ದುಬಾಯಿ ಮತ್ತು ನಾರ್ಥನ್ ಎಮಿರಟ್ಸ್ ರವರ ಯೋಗಿತಾ ಸಾಲಿಯಾನ್ ನಿರ್ದೇಶನದ ಮನಮೋಹಕ ನೃತ್ಯ,  ನಂತರ ಕರ್ನಾಟಕದಿಂದ ಆಗಮಿಸಿದ ನವೀನ್ ಕೊಪ್ಪ ರವರ ನಿರೂಪಣೆಯಲ್ಲಿ ಪ್ರಸಿದ್ದ ಗಾಯಕ ರವಿಂದ್ರ ಪ್ರಭು, ಸುಮಧುರ ಕಂಠದ ಗಾಯಕಿ ಅನಿತಾ ಸ್ಯಾಮ್ಸನ್, ರೋಶನ್ ಬೆಳ್ಮಣ್,ಅರುಣ್ ಕಾರ್ಲೋ ಸಂಗೀತ ನಿರ್ದೇಶನದಲ್ಲಿ ಸಂಗೀತ ರಸಮಂಜರಿ ಕನ್ನಡ, ತುಳು, ಕೊಂಕಣಿ, ಕೊಡವ, ಬ್ಯಾರಿ ಭಾಷೆಯ ಸುಮಧುರ ಗೀತೆಗಳು ಸಭಾಂಗಣದಲ್ಲಿದ್ದ ಎಲ್ಲರ ಮನಗೆದ್ದು ರಂಜಿಸಿತ್ತು.

ದಾಯಿಜಿ ರಂಗ್ ಮಂದಿರ್ ನೀಡಿದ ಕನ್ನಡ ಹಾಸ್ಯ ಪ್ರಹಸನ ಆಲ್ವಿನ್ ಪಿಂಟೋ, ಸುವರ್ಣ ಸತೀಶ್ ರವರು ನಗೆಗಡಲಲ್ಲಿ ತೇಲಾಡಿಸಿದರು.

ಮಯೂರ ಪ್ರಶಸ್ತಿ ಪ್ರಧಾನ

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕನ್ನಡಿಗರನ್ನು ಆಯ್ಕೆ ಮಾಡಿ ನೀಡಲಾಗುವ ಶಾರ್ಜಾ ಕರ್ನಾಟಕ ಸಂಘದ ಪ್ರತಿಷ್ಠಿತ ಮಯೂರ ಪ್ರಶಸ್ತಿಯನ್ನು ಈ ಬಾರಿ ಕನ್ನಡ ಭಾಷೆ, ಕಲೆ, ಸಂಸ್ಕೃತಿ, ಸಂಘಟನೆ, ಸಮಾಜಸೇವೆಯಲ್ಲಿ ಕಳೆದ ಒಂದುವರೆ ದಶಕಗಳಿಂದ ಯು. ಎ. ಇ. ಯಲ್ಲಿರುವ ಎಲ್ಲಾ ಕರ್ನಾಟಕ ಪರ ಸಂಘಟನೆಗಳಲ್ಲಿ, ವಿವಿಧ ಭಾಷೆಗಳ ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಗಲ್ಫ್ ನಾಡಿನಲ್ಲಿ ಎಲ್ಲರಿಗೂ ಚಿರಪರಿಚಿತರಾದ ಕ್ರೀಯಾತ್ಮಕ ಕಲಾ ನಿರ್ದೇಶಕ, ಶಾರ್ಜಾ ಕರ್ನಾಟಕ ಸಂಘದ ಪೂರ್ವ ಅಧ್ಯಕ್ಷರಾದ ಶ್ರೀ ಗಣೇಶ್ ರೈ ಯವರನ್ನು ೨೦೦೯ ನೇ ಸಾಲಿನ "ಮಯೂರ ಪ್ರಶಸ್ತಿ" ನೀಡಿ ಸನ್ಮಾನಿಸಿ ಗೌರವಿಸಲಾಯಿತು.   ಶಾಲು ಹೊದಿಸಿದರು, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರ ಸಮುಖದಲ್ಲಿ ಕರ್ನಾಟಕ ಸಂಘದ ನಿಕಟ ಪೂರ್ವ ಅಧ್ಯಕ್ಷರು ಶ್ರೀ ಪ್ರಭಾಕರ ಅಂಬಲತೆರೆ ಯವರು ಪಲವನ್ನು ನೀಡಿದರು, ಅಧ್ಯಕ್ಷರಾದ ಶ್ರೀ ನೋವೆಲ್ ಡಿ,ಅಲ್ಮೆಡಾ ರವರು ಮಯೂರ ಲಾಂಛನ ಪ್ರಶಸ್ತಿ ನೀಡಿದರು. ವಿಶ್ವಕರ್ಮ ಸಮಾಜ ಯು. ಎ. ಇ. ಅಧ್ಯಕ್ಷರಾದ ಶ್ರೀ ಸಾಂತರಾಂ ಆಚಾರ್ ರವರು ಸನ್ಮಾನ ಪತ್ರ ವಾಚಿಸಿದರು. ಶಾರ್ಜಾ ಕರ್ನಾಟಕ ಸಂಘದ ಪೋಷಕರಾದ ಶ್ರೀ ಮಾರ್ಕ್ ಡೆನ್ನಿಸ್ ಡಿ’ಸೋಜ ರವರು ಸನ್ಮಾನ ಪತ್ರ ನೀಡಿ ಗೌರವಿಸಿದರು.

ಮತ್ತೊರ್ವ ಕನ್ನಡ ಸಾಹಿತ್ಯ, ನಾಟಕ, ನಿರ್ದೇಶನ, ಪುಸ್ತಕ ರಚನೆ, ಬಿಡುಗಡೆ, ಇತ್ಯಾದಿ ಹಲವು ವಿವಿಧ ರೀತಿಯಲ್ಲಿ ಕನ್ನಡ ಭಾಷೆಯನ್ನು ಗಲ್ಫಿನಲ್ಲಿ ’ಧ್ವನಿ ಪ್ರತಿಷ್ಠಾನ’ ಸಂಘಟನೆಯ ಮೂಲಕ ಕಳೆದ ಎರಡುವರೆ ದಶಕಗಳಿಂದ ಮುಂಬೈ ಮತ್ತು ಯು.ಎ.ಇ.ಯಲ್ಲಿ ನಾಟಕ, ವಿಚಾರ ಸಂಕಿರಣದ ಮೂಲಕ ಕನ್ನಡ ಭಾಷೆಯ ಜನರಲ್ಲಿ ಜಾಗೃತಿ ಮೂಡಿಸಿರುವ ಶ್ರೀ ಪ್ರಕಾಶ್ ರಾವ್ ಪಯ್ಯಾರ್ ರವರನ್ನು ೨೦೦೯ ನೇ ಸಾಲಿನ "ಮಯೂರ ಪ್ರಶಸ್ತಿ" ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಯು. ಎ. ಇ. ಪ್ರಖ್ಯಾತ ಉಧ್ಯಮಿ, ಎಲ್ಲಾ ಸಂಘ ಸಂಸ್ಥೆಗಳ ಕಾರ್ಯಕ್ರಮಗಳನ್ನು ಪ್ರಾಯೋಜಿಸಿ ಗಲ್ಫ್ ನಲ್ಲಿ ಕರ್ನಾಟಕ ಕಲಾ ಸಂಸ್ಕೃತಿಯನ್ನು ವೈಭವಿಕರಿಸಿರುವ ಶ್ರೀ ಶೇಖರ್ ಶೆಟ್ಟಿ ಯವರು ಶಾಲು ಹೊದಿಸಿದರು, ಶಾರ್ಜಾ ಕರ್ನಾಟಕ ಸಂಘದ ಖಜಾಂಚಿ, ಮೊಗವೀರ್ಸ್ ಯು. ಎ. ಇ. ಯ ಪ್ರಧಾನ ಕಾರ್ಯದರ್ಶಿ ಶ್ರೀ ಯಾದವ್ ಕೋಟ್ಯಾನ್ ಪುಷ್ಪ ಗುಚ್ಚ ನೀಡಿದರು, ಅಂಬಲತೆರೆ ವಿಷನ್ ಮುಖ್ಯಸ್ತರು, ಕರ್ನಾಟಕ ಸಂಘದ ನಿಕಟ ಪೂರ್ವ ಅಧ್ಯಕ್ಷರು ಶ್ರೀ ಪ್ರಭಾಕರ ಅಂಬಲತೆರೆ ಯವರು ಪಲವನ್ನು ನೀಡಿದರು, ಅಧ್ಯಕ್ಷರಾದ ಶ್ರೀ ನೋವೆಲ್ ಡಿ,ಅಲ್ಮೆಡಾ ರವರು ಮಯೂರ ಲಾಂಛನ ಪ್ರಶಸ್ತಿ ನೀಡಿದರು. ಶಾರ್ಜಾ ಕರ್ನಾಟಕ ಸಂಘದ ಉಪಾಧ್ಯಕ್ಷರು, ಬ್ಯಾರಿಸ್ ಕಲ್ಚರಲ್ ಫೋರಮ್ ಶಾರ್ಜ ಅಧ್ಯಕ್ಷರಾದ ಶ್ರೀ ಸಾದ್ ಮಹ್ಮದ್ ರವರು ಸನ್ಮಾನ ಪತ್ರ ವಾಚಿಸಿದರು. ಶಾರ್ಜಾ ಕರ್ನಾಟಕ ಸಂಘದ ಪೋಷಕರಾದ ಶ್ರೀ ಮಾರ್ಕ್ ಡೆನ್ನಿಸ್ ಡಿ’ಸೋಜ ರವರು ಸನ್ಮಾನ ಪತ್ರ ನೀಡಿ
ಗೌರವಿಸಿದರು.

"ಸಾರ್ವಭೌಮ" ಕಥಾ ಸಂಕಲನ ಬಿಡುಗಡೆ

’ಕನ್ನಡ ಧ್ವನಿ’ ಅಂತರ್ಜಾಲ ತಾಣದ ಪ್ರಧಾನ ಸಂಪಾದಕರಾದ ಶ್ರೀ ಗೋಪಿನಾಥ್ ರಾವ್ ರವರ ಕಥಾಸಂಕಲನ "ಸಾರ್ವಭೌಮ" ಕರ್ನಾಟಕ ಸಂಘದ ಆಶ್ರಯದಲ್ಲಿ ಪೋಷಕರಾದ ಮಾರ್ಕ್ ಡೆನ್ನಿಸ್ ಡಿಸೋಜ ಬಿಡುಗಡೆ ಮಾಡಿದರು. ಅದ್ಯ್ಕಕ್ಷರಾದ ನೋವೆಲ್ ಡಿ. ಅಲ್ಮೆಡಾ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೊತ್ತಮ ಶೆಟ್ಟಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶೇಖರ್ ಶೆಟ್ಟಿ, ಶ್ರೀ ಗಣೇಶ್ ರೈ ಯವರ ಸಮ್ಮುಖದಲ್ಲಿ ನಡೆದ ಸಮಾರಂಭ ಆರಂಭದಲ್ಲಿ ಬೆಂಗಳೂರಿನಿಂದ ಆಗಮಿಸಿದ ಲೇಖಕ ಮಹಾಬಲಮೂರ್ತಿ ಕೊಡ್ಲೆಕೆರೆ ಯವರು ಪುಸ್ತಕಕ್ಕೆ ಮುನ್ನುಡಿ ಬರೆದಿದ್ದು, ಗಲ್ಫ್ ನಾಡಿನಲ್ಲಿ ಕನ್ನಡ ಪುಸ್ತಕ ಬಿಡುಗಡೆ ಆಗುತ್ತಿರುವುದು ಕನ್ನಡ ಸಾಹಿತ್ಯ ಲೋಕದಲ್ಲಿ ನಡೆಯುತ್ತಿರುವ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬೋಜನದ ನಂತರ ಕಾರ್ಯಕ್ರಮ ಮೊಗವೀರ್ಸ್ ಯು. ಎ. ಇ. ತಂಡದ ದೀಪಕ್ ಕೋಟ್ಯಾನ್ ನಿರ್ದೇಶನದಲ್ಲಿ ತುಳು ಭಾಷೆಯ "ಬೆಸ್ತರ ನೃತ್ಯ" ಸಮುದ್ರ ಪೂಜೆಯೊಂದಿಗೆ ಪ್ರಾರಂಭವಾಗಿ ಬೆಸ್ತ ಮಹಿಳೆಯರು ಮತ್ತು ಪುರುಷರು ತಮ್ಮ ವೃತ್ತಿಜೀವನದ ಜೊತೆಗೆ ಸಾಂಸ್ಕೃತಿಕವಾಗಿ ತಮ್ಮ ನೃತ್ಯ ಶ್ರೀಮಂತಿಕೆಯನ್ನು ಅಕರ್ಷಕವಾಗಿ ಪ್ರದರ್ಶಿಸಿ ಜನರ ಮನಸೆಳೆದರು.

ಅಬುಧಾಬಿ ಕರ್ನಾಟಕ ಸಂಘದ ವತಿಯಿಂದ ಮಕ್ಕಳು ಪ್ರದರ್ಶಿಸಿದ "ಕರ್ನಾಟಕ ಇತಿಹಾಸ ಪರಿಚಯ" ದಲ್ಲಿ ಪಾತ್ರದಾರಿಗಳಾಗಿ ಮಯೂರ, ಬಸವಣ್ಣ, ಶಾಂತಲೆ, ರಾಣಿ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ, ಟಿಪ್ಪುಸುಲ್ತಾನ್, ವನಕೆ ಓಬವ್ವ, ವಿಶೇಶ್ವರಯ್ಯ, ಕರ್ನಾಟಕದ ಕ್ರಿಕೇಟ್ ಪಟು, ಡಾ. ರಾಜ್ ಕುಮಾರ್, ಕರ್ನಾಟಕ ಮಾತೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಜನ ಮೆಚ್ಚುಗೆಯನ್ನು ಪಡೆದರು. 

ಬ್ಯಾರಿಸ್ ಕಲ್ಚರಲ್ ಫೋರಂ ಯು. ಎ. ಇ. ಯ ಸದಸ್ಯರುಗಳು "ದಫ್" ನೃತ್ಯವನ್ನು ಅರ್ಥಪೂರ್ಣವಾಗಿ ಪ್ರದರ್ಶನ ಮಾಡಿದರು. ಬ್ಯಾರಿ ಸಂಸ್ಕೃತಿಯ ಪ್ರದರ್ಶನ ನೀಡಿ ಪ್ರೇಕ್ಷಕರ ಮನ ಗೆದ್ದರು.

ನವೀನ್ ಕೊಪ್ಪರವರ ಕ್ರಿಕೆಟ್ ಹರಿಕತೆ ಕಂಚಿನ ಕಂಠದಿಂದ ಹಾಸ್ಯಮಯವಾಗಿ ಮೂಡಿಬಂದು ಜನರು ನಗೆಗಡಲಲ್ಲಿ ತೇಲಾಡಿದರು. ದಿನಪೂರ್ತಿ ನಡೆದ ಕಾರ್ಯಕ್ರಮಗಳಲ್ಲಿ ತಮ್ಮ ಅಚ್ಚ ಸ್ವಚ್ಚ ಕನ್ನಡದಲ್ಲಿ ನಿರರ್ಗಳವಾಗಿ ಪದಪ್ರಯೋಗಗಳ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯ ಸಂದೇಶವನ್ನು ಜನ ಮನದಲ್ಲಿ ಮೂಡಿಸುವಲ್ಲಿ ಯಶಸ್ವಿಯಾಗಿ ಜನತೆಯ ಅಭಿನಂದನೆಗೆ ಪಾತ್ರರಾದರು. 

ಕರ್ನಾಟಕದ ಪ್ರಖ್ಯಾತ ಗಾಯಕರುಗಳಾದ ರವಿಂದ್ರ ಪ್ರಭು, ಅನಿತಾ ಸ್ಯಾಮ್ಸನ್, ರೋಶನ್ ಬೆಳ್ಮಣ್, ಅರುಣ್ ಕಾರ್ಲೊ ತಂಡದವರ ರಸಮಂಜರಿ ಕಾರ್ಯಕ್ರಮ ಬೆಳಗಿನಿಂದ ಸಂಜೆಯವರೆಗೆ, ಕೆಲವು ನೃತ್ಯ ಕಾರ್ಯಕ್ರಮಗಳ ನಡುವೆ, ಸುಮಧುರ ಕನ್ನಡ, ತುಳು, ಕೊಡವ, ಕೊಂಕಣಿ, ಬ್ಯಾರಿ, ಹಿಂದಿ, ತಮಿಳು ಗೀತೆಗಳನ್ನು ಸುಶ್ರಾವ್ಯ ವಾಗಿ ತಮ್ಮ ಸುಮಧುರ ಕಂಠಸಿರಿಯಲ್ಲಿ ಆಲಿಸಿದ ಸಭಾಂಗಣದಲ್ಲಿ ಕಿಕಿರಿದ್ದು ತುಂಬಿದ್ದ ಅಭಿಮಾನಿಗಳು ಸಂತಸ ಪಟ್ಟರು.

ಮಂಗಳೂರಿನಿಂದ ಆಗಮಿಸಿದ "ಡೊಲ್ಲಾ ಮಂಗ್ಳೂರ್" ದಿನ ಪೂರ್ತಿ ಕನ್ನಡ ತುಳು ಭಾಷೆಯಲ್ಲಿ ಹಾಸ್ಯದ ಹೊನಲನ್ನು ಹರಿಸಿದರು. ದೇಶ ವಿದೇಶಗಳಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡಿ ವಿಖ್ಯಾತರಾಗಿರುವ ಡೊಲ್ಲಾ ಮಂಗ್ಳುರ್ ರವರವರಿಗೆ  ಶಾರ್ಜಾ ಕರ್ನಾಟಕ ಸಂಘ "ಕರಾವಳಿ ಹಾಸ್ಯ ಚಕ್ರವರ್ತಿ" ಬಿರುದು ನೀಡಿ ಗೌರವ ಪೂರ್ವಕವಾಗಿ ಸನ್ಮಾನಿಸಿದರು. ಶ್ರೀ ಮಾರ್ಕ್ ಡೆನ್ನಿಸ್ ಡಿ’ಸೋಜ ರವರು ಶಾಲು ಹೊದಿಸಿ, ಫಲಪುಷ್ಪವನ್ನು ಶ್ರ್ರೆ ಯಾದವ್ ಕೋಟಿಯಾನ್, ಪಲಕವನ್ನು ಶ್ರೀ ಶಶಿಕಾಂತ್ ಕನ್ನಂಗಿ ನೀಡಿದರು. ಶ್ರೀ ಅರ್ಥರ್ ಪಿರೇರಾ ಸನ್ಮಾನ ಪತ್ರ ವಾಚಿಸಿ, ಶ್ರೀ ವಾಲ್ಟರ್ ಡಿ’ಸೋಜ ನಂದಳಿಕೆಯವರು ಸನ್ಮಾನ ಪತ್ರ ಅರ್ಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಡೊಲ್ಲಾರವ ಜೊತೆಗೆ ಸ್ಥಳೀಯ ಕಲಾವಿದರಾದ ಸಂತೋಷ್ ಡಿ’ಸೋಜ ಸಹ ಕಲಾವಿದರಾಗಿ ಜನರನ್ನು ರಂಜಿಸಿದರು.

ಕಾರ್ಯಕ್ರಮವನ್ನು ಪ್ರಾಯೋಜಿಸಿದ ಪ್ರಾಯೋಜಕರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಬೆಳಗಿನಿಂದ ಸಂಜೆಯವರೆಗೆ ನಡೆದ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಯು. ಎ. ಇ. ವಿವಿಧ ಸಂಘಟನೆಗಳ ಮುಖ್ಯಸ್ಥರುಗಳು, ಗಣ್ಯರು, ಅಭಿಮಾನಿ ಕನ್ನಡಿಗರು ಶಾರ್ಜಾ ಕರ್ನಾಟಕ ಸಂಘದ ೭ನೇ ವಾರ್ಷಿಕೋತ್ಸವ, ರಾಜ್ಯೋತ್ಸವ, ಮಯೂರ ಪ್ರಶಸ್ತಿ ಪ್ರಧಾನ ಸಮಾರಂಭ ವನ್ನು ಯಶಸ್ವಿ ಗೊಳಿಸಿದ ಕೀರ್ತಿ ಸಲ್ಲುತ್ತದೆ.

ಕಾರ್ಯದರ್ಶಿ ಶ್ರೀ ನಿತ್ಯಾನಂದ್ ರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಕಾರ್ಯಕ್ರಮದ ಜವಬ್ದಾರಿ ಸತೀಶ್ ಪೂಜಾರಿಯವರ ಮಾರ್ಗದರ್ಶನದಲ್ಲಿ ನಡೆದು, ಶೋಧನ್ ಪ್ರಸಾದ್ ರವರ ಕಾರ್ಯಕ್ರಮ ನಿರೂಪಣೆಯಲ್ಲಿ ಸೊಗಸಾಗಿ ಮೂಡಿ ಬಂದಿತ್ತು.

ಅತ್ಯುತ್ತಮ ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿರುವ ಶಾರ್ಜಾ ಕರ್ನಾಟಕ ಸಂಘ ಈ ಬಾರಿಯೂ ತನ್ನ ಕಾರ್ಯಕ್ರಮಗಳನ್ನು ಸದಾ ನೆನಪಿನಲ್ಲಿಡುವಂತೆ ಮಾಡುವಲ್ಲಿ ಯಶಸ್ವಿಯಾಯಿತು.


Share: