ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ದುಬೈ ಸಾಲದ ಬಿಕ್ಕಟ್ಟು - ಭಾರತದ ಮೇಲೂ ಪರಿಣಾಮ

ದುಬೈ ಸಾಲದ ಬಿಕ್ಕಟ್ಟು - ಭಾರತದ ಮೇಲೂ ಪರಿಣಾಮ

Tue, 01 Dec 2009 03:05:00  Office Staff   S.O. News Service
ದುಬೈ, ಡಿಸೆಂಬರ್ ೧: ದುಬೈ ಸಾಲದ ಬಿಕ್ಕಟ್ಟು ಭಾರತದಲ್ಲಿಯೂ ಆತಂಕ ಉಂಟು ಮಾಡಿದೆ. ಅಲ್ಲಿನ ಬಂಡವಾಳ ಹೂಡಿಕೆ ಕಂಪನಿ ‘ದುಬೈ ವರ್ಲ್ಡ್’ ಕೋಟ್ಯಂತರ ಡಾಲರ್ ಸಾಲ ಮರುಪಾವತಿ ಮಾಡಲಾಗದೆ ಕಂಗೆಟ್ಟಿದೆ. ನೆರವಿಗಾಗಿ ತನ್ನ ಮಿತ್ರ ಅಬುಧಾಬಿಯ ಮೊರೆ ಹೊಕ್ಕಿದ್ದು, ಅಲ್ಲಿಂದ ಭರವಸೆಯ ದನಿ ಕೇಳಿಬಂದಿದೆ. ಪ್ರಸ್ತುತದಲ್ಲಿ ಬರುತ್ತಿರುವ ವರದಿಗಳಲ್ಲಿ ಉತ್ಪ್ರೇಕ್ಷೆ ಇದ್ದರೂ ದುಬೈನಲ್ಲಿ ಪರಿಸ್ಥಿತಿ ನೆಟ್ಟಗಿಲ್ಲ ಎಂಬುವುದು ವಾಸ್ತವ. ಹೀಗಾಗಿ, ಭಾರತದ ಮೇಲೆ ದುಬೈ ಬೆಳವಣಿಗೆ ಪರಿಣಾಮ ಬೀರದೆಂಬ ವಿತ್ತ ಸಚಿವ ಪ್ರಣವ್ ಮುಖರ್ಜಿ ಮಾತನ್ನು ಒಪ್ಪಲಾಗದು. ಕೊಲ್ಲಿ ರಾಷ್ಟ್ರದಿಂದ ಸ್ಪಷ್ಟ ವರದಿಗಳು ಬರುವವರೆಗೆ ಏನೂ ಹೇಳಲಾಗದಿದ್ದರೂ ಅಲ್ಲಿರುವ ಭಾರತೀಯರ ಉದ್ಯೋಗದ ಭವಿಷ್ಯ ಆತಂಕಕಾರಿ. ಇವರ ಮೇಲೆ ಅವಲಂಬಿತ ವಾಗಿರುವ ಸಾವಿರಾರು ಕುಟುಂಬಗಳು ಈಗಾಗಲೇ ದಿಗ್ಭ್ರಮೆ ಗೊಂಡಿವೆ.
 
ದುಬೈನ ಜನಸಂಖ್ಯೆಯಲ್ಲಿ ಶೇಕಡ ೪೦ ರಷ್ಟು ಮಂದಿ ಭಾರತೀಯರು. ಅವರ ಭವಿಷ್ಯ ಏನಾದೀತೆಂದು ಊಹಿಸಲಿಕ್ಕಾಗದು. ವಿಶ್ವಆರ್ಥಿಕ ಹಿಂಜರಿತವು ದುಬೈ ರಿಯಲ್ ಎಸ್ಟೇಟ್ ಉದ್ದಿಮೆ ಮೇಲೆ
ತೀವ್ರ ಪರಿಣಾಮ ಬೀರಿತ್ತು. ಆಗ ಅಸಂಖ್ಯ ಮಂದಿ ಉದ್ಯೋಗ ಕಳೆದುಕೊಂಡರು ಅಥವಾ ವೇತನ ಕಡಿತಕ್ಕೆ ಗುರಿಯಾದರು. ಪ್ರವಾಸೋದ್ಯಮದಿಂದ ದುಬೈ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿತು. ಈಗ ಸಾಲದ ಬಿರುಗಾಳಿಯು ಅಲ್ಲಿನ ಉದ್ದಿಮೆಗಳ ಮೇಲೆ ತೀವ್ರ ಪರಿಣಾಮ ಬೀರಿದರೆ ಉದ್ಯೋಗ ಕ್ಷೇತ್ರ ಭಾರೀ ಪ್ರಹಾರಕ್ಕೆ ಗುರಿಯಾಗುತ್ತದೆ. ಇನ್ನೊಂದೆಡೆ, ಭಾರತದಲ್ಲಿ ದುಬೈ ಹೂಡಿಕೆ ಮೇಲೆ ಕೂಡ ಹೊಡೆತವೇ. ಬಿಡದಿಯಲ್ಲಿನ ರಿಯಲ್ ಎಸ್ಟೇಟ್ ಯೋಜನೆ ಭವಿಷ್ಯ ಈಗ ತೂಗುಯ್ಯಾಲೆಯಲ್ಲಿ. ಜಾಗತಿಕ ಆರ್ಥಿಕ ಹಿಂಜರಿತದ ಬಿಸಿ ತಟ್ಟಿದ ಮೇಲೆ ಕ್ರಮ ಕೈಗೊಂಡಿದ್ದರಿಂದ ಒಂದಷ್ಟು ಚೇತರಿಕೆ ಕಂಡು ಬಂದಿದ್ದ ಭಾರತದಲ್ಲಿ ಈಗ ದುಬೈ ಸಾಲದ ಬಿಕ್ಕಟ್ಟು ಪುನಃ ಆತಂಕ ಸೃಷ್ಟಿಸಿದೆ. ಪರಿಸ್ಥಿತಿ ಗಾಬರಿ ಉಂಟುಮಾಡಿದ್ದರೂ ‘ದುಬೈ ವರ್ಲ್ಡ್’ ಸರಕಾರಿ ಒಡೆತನದ್ದಾಗಿರುವುದರಿಂದ ಸಂಪನ್ಮೂಲ ಕ್ರೋಡೀಕರಿಸಿ ಚೇತರಿಸಿ ಕೊಳ್ಳುತ್ತದೆ ಎಂಬ ಆಶಾಭಾವನೆಯು ಇದೆ. ಗೊಣಗಿದರೂ ಅಬುಧಾಬಿ ಸರಕಾರ ನೆರವಿನ ಹಸ್ತ ಚಾಚಿದೆ. ಮುಂದಿನ ಕೆಲ ತಿಂಗಳಲ್ಲಿ ಚೇತರಿಕೆ ಸಾಧ್ಯವೆಂಬ ಸಕಾರಾತ್ಮಕ ಚಿಂತನೆಯನ್ನು ನಂಬಬಹುದಾದರೂ ಉದ್ಯೋಗ ಕ್ಷೇತ್ರದ ಸ್ಥಿತಿ ಅಷ್ಟು ವೇಗದಲ್ಲಿ ಸುಧಾರಿಸುವುದು ಕಷ್ಟ. ಈಗಾಗಲೇ ಕೆಲ ಭಾರತೀಯರಿಗೆ ಇದರ ಬಿಸಿ ತಟ್ಟಿದೆ. ಸ್ವದೇಶಕ್ಕೆ ಮರಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದು ಇಲ್ಲಿನ ಅರ್ಥವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರುವುದು ಖಚಿತ. ದುಬೈನಲ್ಲಿ ಬಿಕ್ಕಟ್ಟು ಶೀಘ್ರ ಬಗೆಹರಿದರೆ ಸುಖ್ಯಾಂತ ಕಾಣಬಹುದು. ಅಲ್ಲಿ ಬಿರುಗಾಳಿ ಬೇಗ ತಣ್ಣಗಾದರೆ ಹೂಡಿಕೆದಾರರೂ ಪುನಃ ಗಮನಹರಿಸುತ್ತಾರೆ. ಇದಕ್ಕೆಲ್ಲ ಕಾಯಬೇಕು.


ಸೌಜನ್ಯ: ವಿಜಯ ಕರ್ನಾಟಕ


Share: