ದುಬೈ/ ರಿಯಾದ್ : ಕಸ್ತೂರಿ ವಾಹಿನಿಯ ವರದಿಗಾರ ರಹೀಂ ಉಜಿರೆ ಮೇಲೆ ಪ್ರಭುತ್ವ ನಡೆಸಿರುವ ಹಲ್ಲೆಯನ್ನು ಖಂಡಿಸಿರುವ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿದೆ.
ಇತ್ತೀಚಿಗೆ ಪತ್ರಕರ್ತರ ಮೇಲೆ ಸರ್ಕಾರ ಮತ್ತು ಕೆಲ ಸ್ಥಾಪಿತ ಹಿತಾಸಕ್ತಿಗಳಿಂದ ನಿರಂತರ ದೌರ್ಜನ್ಯ ನಡೆಯುತಿದ್ದರೂ ಸರ್ಕಾರ ಇವರುಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡಿಲ್ಲ. ಇದರಿಂದ ಈ ರೀತಿಯ ಘಟನೆಗಳು ಪುನರಾವರ್ತನೆಯಾಗುತ್ತಿವೆ. ಇತ್ತೀಚಿಗೆ ಮರಳು ಮಾಫಿಯಾದ ಗೂಂಡಾಗಳು TV9 ಛಾಯಾಗ್ರಾಹಕನ ಮೇಲೆ ನಡೆಸಿದ ಹಲ್ಲೆ, ಪತ್ರಕರ್ತನೊಬ್ಬನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಧರ್ಮದ ಹೆಸರಿನಲ್ಲಿ ಆತನನ್ನು ಕಾರ್ಯಕ್ರಮದಿಂದ ಹೊರ ಹಾಕಿದ ಘಟನೆ, ಪತ್ರಕರ್ತನಿಗೆ ಕೈಕೋಳ ತೊಡಿಸಿದ ಪ್ರಕರಣ ಜೊತೆಗೆ ಮಾಧ್ಯಮ ಕೇಂದ್ರಗಳ ಮೇಲೆ ನಡೆದ ದಾಳಿ ಪತ್ರಕರ್ತರು ನಿರ್ಭೀತಿಯಿಂದ ಮತ್ತು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲು ಅಡ್ಡಿ ಪಡಿಸುವ ಕಿಡಿಗೇಡಿಗಳ ತಂತ್ರವಾಗಿದ್ದು ಇಂತಹ ಘಟನೆಗಳು ಮುಂದೆ ಜರುಗದಂತೆ ಮಾಧ್ಯಮ ಸ್ವಾತಂತ್ರ್ಯದ ರಕ್ಷಣೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದೆ.
ವರದಿ: ಅಶ್ರಫ್ ಮಂಜರಾಬಾದ್, ಸೌದಿ ಅರೇಬಿಯಾ