ದುಬೈ, ಅಕ್ಟೋಬರ್ 18: ಪ್ರತಿವರ್ಷದಂತೆ ಈ ವರ್ಷವೂ ನಗರದಲ್ಲಿ ಕಾರ್ಯನಿರತವಾಗಿರುವ ಬಿ.ಎಮ್.ಜೆ (ಭಟ್ಕಳ ಮುಸ್ಲಿಂ ಜಮಾತ್) ದುಬೈ ಸಂಘಟನೆ ತನ್ನ ಸದಸ್ಯರಿಗಾಗಿ ಈದ್ ಮಿಲನ್ ಕೂಟವೊಂದನ್ನು ಏರ್ಪಡಿಸಿತ್ತು.
ಕಾರ್ಯಕ್ರಮಕ್ಕೆ ವಿಶೇಷವಾಗಿ ಆಹ್ವಾನಿಸಲ್ಪಟ್ಟಿದ್ದ ಪಾಕಿಸ್ತಾನಿ ವಿನೋದ ಭಾಷಣಾಕಾರ ಕಾಶಿಫ್ ಖಾನ್ ರವರು ತಮ್ಮ ಎಂದಿನ ಲವಲವಿಕೆಯ ನಿರೂಪಣೆಯಿಂದ ನೆರೆದ ಜನತೆಯನ್ನು ರಂಜಿಸಿದರು.
ಪ್ರತಿವರ್ಷದಂತೆ ಈ ವರ್ಷವೂ ಪ್ರಾಯೋಜಕರು ಹಲವು ಬಹುಮಾನಗಳನ್ನು ಪ್ರಕಟಿಸಿದ್ದರು. ಈ ಬಹುಮಾನಗಳು ರ್‍ಯಾಫೆಲ್ ಡ್ರಾ ಮೂಲಕ ಅದೃಷ್ಟಶಾಲಿಗಳನ್ನು ಹುಡುಕಿಕೊಂಡು ಹೋದವು. ತಾವೂ ಯಾರಿಗೂ ಕಡಿಮೆಯಿಲ್ಲ ಎಂದು ಸಾಬೀತು ಪಡಿಸಿದ ಮಕ್ಕಳು ಹಲವು ಕಾರ್ಯಕ್ರಮಗಳನ್ನು ವೇದಿಕೆಯ ಮೇಲೆ ಪ್ರಸ್ತುತಪಡಿಸಿದರು. ವಿಶೇಷವಾಗಿ ನವಾಯತಿ ಭಾಷೆಯಲ್ಲಿ ಪ್ರಸ್ತುತಪಡಿಸಲ್ಪಟ್ಟ ಪ್ರಸಂಗವೊಂದು ಸಭಿಕರ ಭಾರಿ ಕರತಾಡನಕ್ಕೆ ಪಾತ್ರವಾಯಿತು.

ಹಿಂದಿನ ವರ್ಷಗಳಲ್ಲಿ ಪಂಚತಾರಾ ಹೋಟೆಲುಗಳಲ್ಲಿ ಆಚರಿಸುತ್ತಿದ್ದ ಕಾರ್ಯಕ್ರಮ ಈ ವರ್ಷ ಸರಳವಾಗಿ ಇಂಡಿಯನ್ ಹೈಸ್ಕೂಲ್ ಆವರಣದಲ್ಲಿರುವ ಕಿಂಗ್ ರಾಶಿದ್ ಆಡಿಟೋರಿಯಂ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಹಿಂದಿನ ವರ್ಷಗಳಲ್ಲಿ ಊಟದ ವ್ಯವಸ್ಥೆಯನ್ನು ಬಫೆ ಮೂಲಕ ಏರ್ಪಡಿಸಿದ್ದರೆ ಈ ವರ್ಷ ಸ್ವಾದಿಷ್ಟವಾದ ಭೋಜನವನ್ನು ಪ್ಯಾಕೆಟ್ಟುಗಳ ಮೂಲಕ ಪ್ರತಿಯೊಬ್ಬರಿಗೂ ವಿತರಿಸಲಾಯಿತು. ಈ ವ್ಯವಸ್ಥೆ ಎಲ್ಲರ ಪ್ರಶಂಸೆ ಪಡೆಯಿತು.
ಈ ವರ್ಷ ಇಡಿಯ ಮೇಲಂತಸ್ತು (ಬಾಲ್ಕನಿ) ಯನ್ನು ಮಹಿಳೆಯರಿಗಾಗಿ ಮೀಸಲಾಗಿರಿಸಿದ್ದು ಕಾರ್ಯಕ್ರಮವನ್ನು ಯಾವುದೇ ಅಡೆತಡೆಯಿಲ್ಲದೇ ಆಸ್ವಾದಿಸುವಂತೆ ಆಯೋಜಿಸಲಾಗಿತ್ತು. ಶುಕ್ರವಾರ ನಡೆದ ಕಾರ್ಯಕ್ರಮ ನೆರೆದ ಸಮಸ್ತರ ಪ್ರಶಂಸೆಗೆ ಕಾರಣವಾಯಿತು.
ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಹೈದರಾಬಾದ್ ಎಂ.ಪಿ. ಜನಾಬ್ ಅಸಾದುದ್ದೀನ್ ಅವೇಸಿಯವರು ಮಾತನಾಡಿ ಜಮಾತ್ ಕಾರ್ಯಕಲಾಪಗಳನ್ನು ಅಭಿನಂದಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಇನ್ನೋರ್ವ ವಿಶೇಷ ಅತಿಥಿ ಭಾರತ ಕ್ರಿಕೆಟ್ ತಂಡದ ಜನಪ್ರಿಯ ಆಟಗಾರ ಯೂಸುಫ್ ಪಠಾಣ್ ಯುವಜನತೆಯ ಆಕರ್ಷಣೆಯಾಗಿದ್ದರು.
೧೬ ನೆ ಅಕ್ಟೋಬರ್ ಶುಕ್ರವಾರ ಸಂಜೆ ಎಂಟು ಘಂಟೆಗೆ ನಿಗದಿತ ಸಮಯಕ್ಕೆ ಪ್ರಾರಂಭವಾದ ಕಾರ್ಯಕ್ರಮ ಮೌಲನಾ ಖಾರಿ ಮುಸದ್ದಿಖ್ ಹಲ್ಲಾರೆಯವರ ಕುರಾನ್ ಪಠಣ ಹಾಗೂ ಅದರ ಅನುವಾದದೊಂದಿಗೆ ಪ್ರಾರಂಭವಾಯಿತು. ಮೌಲಾನಾ ಡಾ. ಅಬ್ದುಲ್ಲಾ ಸುಕ್ರಿಯವರು ನೆರೆದವರನ್ನು ಉದ್ದೇಶಿಸಿ ಮಾತನಾಡಿದರು. ಈದ್ ಮಿಲನ್ ಕಾರ್ಯಕ್ರಮದ ಕಾರ್ಯನಿರ್ವಾಹಕರಾದ ಫಜ್ಲುರ್ ರಹಮಾನ್ ಜುಕಾಕುರವರು ಸ್ವಾಗತಿಸಿದರು. ಜಮಾತಿನ ಹಿರಿಯ ಸದಸ್ಯ ಎಸ್.ಎಂ. ಖಲೀಲುರ್ರಹ್ಮಾನ್ ರವರು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.
ತಮ್ಮ ಭಾಷಣದಲ್ಲಿ ಮಾತನಾಡಿದ ಎಂ.ಪಿ. ಬ್ಯಾರಿಸ್ಟರ್ ಅಸಾದುದ್ದೀನ್ ಅವೇಸಿಯವರು ಭಾರತದ ಮುಸ್ಲಿಮರನ್ನು ದಮನಗೊಳಿಸಲಾಗುತ್ತಿದೆ, ಪೋಲೀಸರೂ ಸಹಾ ಒಂದು ಕಡೆಯ ನ್ಯಾಯ ತೋರುವ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆಲ್ಲಾ ಮುಸ್ಲಿಮರು ಶೈಕ್ಷಣಿಕವಾಗಿ ಹಿಂದುಳಿದಿರುವುದೇ ಕಾರಣವಾಗಿದ್ದು ಹೆಚ್ಚಿನ ಯುವಜನತೆ ವಿದ್ಯಾವಂತರಾಗಿ ಪ್ರಮುಖ ಹುದ್ದೆಗಳನ್ನು ಪಡೆಯುವ ಮೂಲಕ ಮುಸ್ಲಿಮರ ಮೇಲಿನ ದಬ್ಬಾಳಿಕೆಯನ್ನು ಕೊನೆಗೊಳಿಸಬಹುದು ಎಂದು ನುಡಿದರು.
ಬಳಿಕ ಮಾತನಾಡಿದ ಭಾರತೀಯ ಕ್ರಿಕೆಟ್ ತಂಡದ ಆಲ್ ರೌಂಡ್ ಆಟಗಾರ ಯೂಸುಫ್ ಪಠಾಣ್ ಪ್ರಸ್ತುತ ರಾಷ್ಟ್ರದಲ್ಲಿರುವ ಮೂವತ್ತು ಲಕ್ಷ ಮುಸ್ಲಿಮರಿಗೆ ಕ್ರಿಕೆಟ್ ಆಟದಲ್ಲಿ ಹೆಚ್ಚಿನ ಒಲವು ಅಥವಾ ಹೆಚ್ಚಿನ ಮಾಹಿತಿ ಇಲ್ಲದಿದ್ದು ಒಮ್ಮೆ ಮುಸ್ಲಿಂ ಆಟಗಾರನೊಬ್ಬ ಕ್ರಿಕೆಟ್ ತಂಡದಲ್ಲಿ ಸೇರ್ಪಡೆಯಾದೊಡನೇ ಇಡಿಯ ರಾಷ್ಟ್ರದ ಮುಸ್ಲಿಂ ಜನತೆ ಆತನ ಯಶಸ್ಸಿಗಾಗಿ ಪ್ರಾರ್ಥಿಸುವುದು ತಮಗೆ ಅತೀವ ಸಂತೋಷ ತಂದಿದೆ ಎಂದು ನುಡಿದರು.

ಬಳಿಕ ಅಸಾದುದ್ದೀನ್ ಆವೇಸಿಯವರು ಕ್ರೀಡಾಪಟುವಾಗಿ, ಕ್ರೀಡಾ ಪ್ರತಿನಿಧಿಯಾಗಿ ಯೂಸುಫ್ ಪಠಾಣ್ ರವರು ಸಮುದಾಯಕ್ಕೆ ಯಾವ ರೀತಿಯ ಸಹಾಯ ಮಾಡಬಹುದೆಂದು ಹಲವು ಸಲಹೆಗಳನ್ನು ನೀಡಿದರು.
ಬಳಿಕ ಮಾತನಾಡಿದ ಬಿ.ಎಂ.ಜೆ ಪ್ರಧಾನ ಕಾರ್ಯದರ್ಶಿ ಸೈಯದ್ ಹಾಶಿಂ ರವರು ಭಟ್ಕಳದ ರಾಬಿತಾ ಸೊಸೈಟಿ ಹಮ್ಮಿಕೊಂಡಿರುವ ಕಾರ್ಯಚಟುವಟಿಕೆಗಳ ಪಕ್ಷಿನೋಟ ನೀಡಿದರು. ಭಟ್ಕಳದಲ್ಲಿ ಹೆಚ್ಚಿನ ಪ್ರಗತಿಗೆ ಎಲ್ಲಾ ನಾಗರಿಕರ ಸಹಕಾರ ಅಗತ್ಯವಿದ್ದು ಸಂಘಟನೆಯ ಕಾರ್ಯಕಲಾಪಗಳಲ್ಲಿ ನೆರವಾಗುವ ಮೂಲಕ ಸಂಘಟನೆಯ ಬಲವನ್ನು ಹೆಚ್ಚಿಸಬೇಕೆಂದು ಕರೆನೀಡಿದರು.
ಇದೇ ಸಂದರ್ಭದಲ್ಲಿ ಬಾಂಬೇ ಶಾ ಎಂದೇ ಪ್ರಸಿದ್ಧರಾಗಿರುವ ಎಸ್.ಎಂ. ಸೈಯದ್ ಹಾಶಿಂ ರವರಿಗೆ ಬಿ.ಎಂ.ಜೆ. ಸಂಘಟನೆಯ ವತಿಯಿಂದ ಸಿಪಾಸ್ನಾಮಾ (ಅಪಾರವಾದ ಮೆಚ್ಚುಗೆ) ಯನ್ನು ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ಪ್ರದಾನಿಸಿದ ಮೌಲಾನಾ ಅಬ್ದುಲ್ ಮತೀನ್ ಮುನೀರಿಯವರು ಹಾಶಿಂ ರವರ ಸೇವೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.
ಬಳಿಕ ಮಾತನಾಡಿದ ಬಿ.ಎಮ್.ಜೆ ಅಧ್ಯಕ್ಷರಾದ ಮೊಹಮ್ಮದ್ ಗೌಸ್ ಖಲೀಫಾರವರು ಯುವಜನತೆ ಜಮಾತ್ ಕಾರ್ಯಕಲಾಪಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆನೀಡಿದರು. ಒಂಟಿಯಾಗಿ ಬೇರೆಲ್ಲೋ ತಮ್ಮ ಸಾಮರ್ಥ್ಯವನ್ನು ವ್ಯರ್ಥಮಾಡುವುದರ ಬದಲು ಸಂಘಟಿತರಾಗಿ ಜಮಾತ್ ಕಾರ್ಯಕಲಾಪಗಳಲ್ಲಿ ಭಾಗಿಯಾಗಿ ಜಮಾತ್ ಬಲವರರ್ಧಿಸಬೇಕೆಂದು ಅವರು ಕರೆನೀಡಿದರು. ಒಂದು ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಮಹಿಳೆಯರ ಸಹಕಾರವೂ ಅಗತ್ಯವಾಗಿದ್ದು ಮಹಿಳೆಯರಿಗೆ ಸಕಲ ರೀತಿಯ ನೆರವನ್ನು ನೀಡುವ ಭರವಸೆಯನ್ನು ಅವರು ನೀಡಿದರು.
ಜಮಾತ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಮಾನ್ ಸಿದ್ದೀಖಿಯವರು ವಂದನಾರ್ಪಣೆ ಸಲ್ಲಿಸಿ ಕಾರ್ಯಕ್ರಮದ ಪ್ರಾಯೋಜಕರಿಗೆ, ಸದಸ್ಯರಿಗೆ ಹಾಗೂ ಯುವಜನತೆಗೆ ಸಂಘದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದ ಬಳಿಕ ತಮ್ಮ ಅಭಿಮಾನಿಗಳೊಂದಿಗೆ ಮಾತನಾಡಿದ ಯೂಸುಫ್ ಪಠಾಣ್ ಕ್ರಿಕೆಟ್ ಬಗ್ಗೆ ಹೆಚ್ಚಿಗೆ ಮಾತನಾಡದೇ ತಮ್ಮ ಹಿರಿಯರು ನೀಡಿದ ಹಿತವಚನಗಳನ್ನು ಪಾಲಿಸುವಂತೆ ಆಗ್ರಹಿಸಿದರು.
ರಹಮತುಲ್ಲಾ ರಾಹಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ತಮ್ಮ ಸರಳ ನಗೆಚಟಾಕಿ ಮತ್ತು ಉರ್ದು ಕವನಗಳಿಂದ ಇಡಿಯ ಕಾರ್ಯಕ್ರಮಕ್ಕೆ ಅವರು ಕಳೆನೀಡಿದರು.
ಸೋನಿ ಮತ್ತು ಸ್ಟಾರ್ ಪ್ಲಸ್ ಟೀವಿ ವಾಹಿನಿಗಳಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡಿರುವ ಖ್ಯಾತಿಯ ಕಾಶಿಫ್ ಖಾನ್ ರವರ ಪ್ರಸ್ತುತಿ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ತಮ್ಮ ಹಾಸ್ಯಚಟಾಕು ಮತ್ತು ವಿನೋದಭರಿತ ಮಾತುಗಳಿಂದ ಅವರು ನೆರೆದವರನ್ನು ಇನ್ನಿಲ್ಲದಷ್ಟು ರಂಜಿಸಿದರು.


































ಈದ್ ಮಿಲನ್ ಕಾರ್ಯಕ್ರಮದ ಅಂಗವಾಗಿ ಅಬ್ದುಸ್ ಸಲಾಂ ದಾಂದಾ ಅಬೂ, ಜಿಯಾ ಜುಕಾಕು, ತಾಹಾ ಮುಅಲ್ಲಿಮ್, ಮೊಹ್ತೆಶಾಮ್ ನಜೀಬ್ ಮಾಂಡೆ ಮತ್ತು ಜಿಲಾನಿ ಮೊಹ್ತೆಶಾಂ ರವರು ರ್‍ಯಾಫೆಲ್ ಡ್ರಾ ಮೂಲಕ ಹಲವು ಬಹುಮಾನಗಳನ್ನು ಪ್ರಕಟಿಸಿದರು.
ರ್‍ಯಾಫೆಲ್ ಡ್ರಾ ಮೂಲಕ ರಹಮತುಲ್ಲಾ ರಾಹಿ ಮತ್ತು ಶಮ್ಸ್ ತಬರೇಜ್ ಚಂಪಾರವರು ಎರೆಡು ಹೀರೋ ಹೊಂಡಾ ಬೈಕ್ ಬಹುಮಾನಗಳಿಗೆ ಪಾತ್ರರಾದರು. ಜುಲ್ ಖುರ್ನೈನ್ ರವರು ಬಜಾಜ್ ಪಲ್ಸರ್ ಬೈಕ್ ಬಹುಮಾನಕ್ಕೆ ಪಾತ್ರರಾದರು. ವಸೀಮ್ ಕೆ.ಎಂ. ಒಂದು ಲ್ಯಾಪ್ ಟಾಪ್ ಕಂಪ್ಯೂಟರ್ ಗೆದ್ದರೆ ಅರಫಾತ್ ಕಾಸಿಂಜಿ ಮತ್ತು ಎಸ್.ಎಂ. ಸೈಯದ್ ಹಾಶಿಂ ರವರು ಚಿನ್ನದ ಗಟ್ಟಿ ಮತ್ತು ಚಿನ್ನದ ಕತ್ತಿನಹಾರದ ಬಹುಮಾನಗಳಿಗೆ ಪಾತ್ರರಾದರು.