ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ದುಬೈ: ಆರ್ಥಿಕ ಕುಸಿತ - ಹಲವರಿಗೆ ಕಹಿ-ಕೆಲವರಿಗೆ ಮಾತ್ರ ಸಿಹಿ

ದುಬೈ: ಆರ್ಥಿಕ ಕುಸಿತ - ಹಲವರಿಗೆ ಕಹಿ-ಕೆಲವರಿಗೆ ಮಾತ್ರ ಸಿಹಿ

Thu, 10 Dec 2009 08:12:00  Office Staff   S.O. News Service
 ಆರ್ಥಿಕ ಕುಸಿತದಿಂದಾಗಿ ಉದ್ಯೋಗ ಕಳೆದುಕೊಂಡವರು ಹಲವಾರು ಜನರು. ಇದು ಈಗ ಎಲ್ಲರಿಗೂ ತಿಳಿದ ವಿಷಯ. ಅದರಲ್ಲೂ ಈ ಅರ್ಥಿಕ ಕುಸಿತ ಹೆಚ್ಚಿನವರಿಗೆ ಕಹಿ ಅನುಭವವನ್ನು ನೀಡಿದೆಯಾದರೂ ಕೆಲವರ ಪಾಲಿಗೆ ವರವಾಗಿ ಪರಿಣಮಿಸಿದೆ.

10-dxb2.jpg
 
 
ಅಹ್ಮದ್ ದುಬೈಯಲ್ಲಿ ಒಂದು ರಿಯಲ್ ಎಸ್ಟೇಟ್ ಸಂಸ್ಥೆಯಲ್ಲಿ ಲೆಕ್ಕ ಪರಿಶೋಧಕನಾಗಿ ಉದ್ಯೋಗ ಪ್ರಾರಂಭಿಸಿ ಮೂರು ವರ್ಷ ಕಳೆದಿದೆ. ಓರ್ವ ಅಣ್ಣ ಅಮೇರಿಕಾದಲಿದ್ದುಕೊಂಡು ಡಾಲರುಗಳಲ್ಲಿ ಹಣ ಎಣಿಸುತ್ತಿದ್ದರೆ ಅಹ್ಮದ್ ವೇತನ ಭಾರತದ ಲಕ್ಷಕ್ಕಿಂತಲೂ ಹೆಚ್ಚು. ಇಬ್ಬರು ತಂಗಿಯರಿಗೂ ಮದುವೆಯಾಗಿ ಸುಖವಾಗಿದ್ದಾರೆ. ತಂದೆತಾಯಿಯರಿಗೆ ಊರಿನಲ್ಲಿಯೇ ಆದಾಯಮೂಲವಿರುವುದರಿಂದ ಊರಿಗೆ ಹಣ ಕಳುಹಿಸಬೇಕಾದ ಅಗತ್ಯವಿಲ್ಲ. ಆದರೆ ಕಳೆದ ಸೆಪ್ಟೆಂಬರ್ ನಲ್ಲಿ ಎರಗಿದ ಆರ್ಥಿಕ ಕುಸಿತದ ಪರಿಣಾಮವಾಗಿ ಅಹ್ಮದ್ ಕೆಲಸ ಕಳೆದುಕೊಳ್ಳಬೇಕಾಯಿತು. ಸಾಮಾನ್ಯರಾಗಿದ್ದರೆ ಹಿಂದಿರುಗಿ ಬರುತ್ತಿದ್ದರು. ಆದರೆ ಅಹ್ಮದ್ ಸ್ವಂತ ಅಂಗಡಿಯೊಂದನ್ನು ತೆರೆಯುವ ನಿಟ್ಟಿನಲ್ಲಿ ಹುಡುಕಾಟ ಪ್ರಾರಂಭಿಸಿದರು. ಆರ್ಥಿಕ ಕುಸಿತದ ಭಯದಿಂದ ಮುಚ್ಚುವ ಹಂತದಲ್ಲಿದ್ದ ಅಂಗಡಿಯೊಂದನ್ನು ಪಡೆದು ವ್ಯಾಪಾರವನ್ನು ಒಂದು ಸವಾಲನ್ನಾಗಿ ಸ್ವೀಕರಿಸಿ ಮುನ್ನಡಿಯಟ್ಟ ಅಹ್ಮದ್ ಇಂದು ಒಂದು ವರ್ಷದ ಬಳಿಕ ಓರ್ವ ಖ್ಯಾತ ವಣಿಕ. ಹೆಚ್ಚಿನ ವಹಿವಾಟು ವಹಿಸಿಕೊಳ್ಳಲು ಕರೆದುಕೊಂಡು ಬಂದ ಅಕ್ಕನ ಮಗನಿಗೂ ಒಂದು ಉದ್ಯೋಗಾಸರೆಯಾಯಿತು. 

ಇದೇ ವೇಳೆ ಇನ್ನೊಂದು ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಕಬೀರ್ ಸಹಾ ಆರ್ಥಿಕ ಕುಸಿತದ ಪರಿಣಾಮಕ್ಕೆ ಒಳಗಾಗಿ ಉದ್ಯೋಗ ಕಳೆದುಕೊಂಡರು.  ತಂದೆತಾಯಿಗೆ ಒಬ್ಬನೇ ಮಗನಾಗಿದ್ದ ಅವರಿಗೆ ಮನೆಯ ನಿರ್ವಹಣೆಯೇ ಬದುಕಿನ ಉದ್ದೇಶವಾಗಿ ಪರಿಣಮಿಸಿತ್ತು.  ತಂಗಿಯಂದಿರ ಮದುವೆಗಾಗಿ ಬರುವ ಆದಾಯದ ಅಲ್ಪಮೊತ್ತ ಕೂಡಿಡುತ್ತಾ ಬಂದಿದ್ದಾರಾದರೂ ಈಗ ಉದ್ಯೋಗ ಕಳೆದುಕೊಂಡು ಊರಿಗೆ ಹಿಂದಿರುಗಿದ ಬಳಿಕ ಯಾವುದೇ ಉದ್ಯೋಗವಿಲ್ಲದೇ ಅನಿವಾರ್ಯವಾಗಿ ಕೂಡಿಟ್ಟ ಹಣ ಕರಗುತ್ತಿದೆ.  ಹೊಸ ಉದ್ಯೋಗ ಸಿಗುತ್ತಿಲ್ಲ, ಹಾಸಿಗೆ ಹಿಡಿದಿರುವ ತಂದೆಯ ಚಿಕಿತ್ಸೆಗೆ ಖರ್ಚು ಮಾಡದೇ ವಿಧಿಯಿಲ್ಲ. ಬಂಧು ಬಳಗ ಹತ್ತಿರ ಬರುತ್ತಿಲ್ಲ, ಯಾರ ಬಳಿಯೂ ಹಣಕ್ಕಾಗಿ ಕೈಚಾಚುವುದು ಅಭಿಮಾನಕ್ಕೆ ಧಕ್ಕೆಯಾಗುತ್ತಿದೆ. ಮುಂದೇನು ಎಂಬ ಚಿಂತೆಯಲ್ಲಿದ್ದಾರೆ ಕಬೀರ್.

ಸುಮಾರು ಹದಿನೈದು ವರ್ಷಗಳಿಂದ ದುಬೈಯಲ್ಲಿ ಉತ್ತಮ ವೇತನದಲ್ಲಿ ಕೆಲಸಕ್ಕಿದ್ದವರು ಕುಮಾರ್. ತಮ್ಮ ಉದ್ಯೋಗಕ್ಕೆ ಯಾವುದೇ ಚ್ಯುತಿಯಿಲ್ಲ ಎಂಬ ಭರವಸೆಯಿಂದ ಬರುವ ವೇತನಕ್ಕೆ ಅನುಗುಣವಾಗಿ ತಮ್ಮ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದರು. ತತ್ಪರಿಣಾಮವಾಗಿ ಅಂಟಿಕೊಂಡ ಕೆಲವು ವ್ಯಸನಗಳು ಚಟವಾಗಿ ಅಂಟಿಕೊಂಡವು. ಉಳಿತಾಯ ಮರೀಚಿಕೆಯಾಯಿತು. ವೇತನಕ್ಕಿಂತಲೂ ಹೆಚ್ಚಾದ ವೆಚ್ಚ ಸಾಲಕ್ಕೆ ದಾರಿಮಾಡಿಕೊಟ್ಟಿತು. ಕಳೆದ ಸೆಪ್ಟೆಂಬರ್ ನಲ್ಲಿ ಹಠಾತ್ತಾಗಿ ಉದ್ಯೋಗ ಕಳೆದುಕೊಂಡ ಕುಮಾರ್ ಇಂದು ಬಹಳ ಸಂದಿಗ್ಧದಲ್ಲಿದ್ದಾರೆ. ಮಾಡಿದ ಸಾಲ ಬೆಟ್ಟದಷ್ಟಿದ್ದು ದಿನೇ ದಿನೇ ಏರುತ್ತಿದೆ. ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ ಸಾಲ ತೀರಿಸದ ಕಾರಣ ಬ್ಯಾಂಕಿನವರು ಪಾಸ್ ಪೋರ್ಟ್ ನಂಬರ್ ಬ್ಲಾಕ್ ಮಾಡಿರುವುದರಿಂದ ಊರಿಗೆ ಹೋಗುವ ಧೈರ್ಯವಿಲ್ಲ. ಏನು ಮಾಡಬೇಕು ಎಂದು ತೋಚದ ಸ್ಥಿತಿಯಲ್ಲಿದ್ದಾರೆ ಕುಮಾರ್.

ಈ ಮೂರೂ ಸನ್ನಿವೇಶಗಳು ಭಿನ್ನವಾದರೂ ಮೂಲಕಾರಣ ಆರ್ಥಿಕ ಕುಸಿತವೇ ಆಗಿದೆ. ಕೆಲವರ ಪಾಲಿಗೆ ಮಾತ್ರ ಇದು ಸಿಹಿಯಾಗಿ ಪರಿಣಮಿಸಿದ್ದರೂ ಹೆಚ್ಚಿನವರ ಪಾಲಿಗೆ ಕಹಿಯನ್ನೇ ನೀಡಿದೆ. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬಂತೆ ಜೀವನ ನಡೆಸಿದ್ದಲ್ಲಿ ಸಂಕಷ್ಟದ ಕಾಲದಲ್ಲೂ ಹೆಚ್ಚಿನ ತೊಂದರೆ ಎದುರಾಗದು. ಯಾವುದಕ್ಕೂ ಪರಿಸ್ಥಿತಿಯನ್ನು ಅರಿತು ಸಾಧ್ಯವಾದಷ್ಟು ಸರಳ ಜೀವನ ನಡೆಸುವ ಮೂಲಕ ಉತ್ತಮ ಜೀವನ ನಡೆಸಬಹುದಾಗಿದೆ.
 10-dxb3.jpg
ಸಿ.ಎಚ್ ಅಬ್ದುಲ್ ಹಮೀದ್, ದುಬೈ.
 
 
 

Share: