ಜೆದ್ದಾ, ನವೆಂಬರ್ 26: ಹಿಜರಿ 1430 ನೇ ಇಸವಿಯ ಹಜ್ ಮುನ್ನಾದಿನ ನಿನ್ನೆ ಜೆದ್ದಾ ಹಾಗೂ ಮಕ್ಕಾ ನಗರಗಳಲ್ಲಿ ಭಾರೀ ಮಳೆಯಾಗಿದೆ.
ಮಳೆಯಿಂದಾಗಿ ನಗರದ ಬಹುತೇಕ ಎಲ್ಲಾ ರಸ್ತೆಗಳು ನೀರಿನಿಂದಾವೃತವಾಗಿದ್ದು ಸಂಚಾರಕ್ಕೆ ಅಡೆತಡೆಯಾಗಿದೆ. ನಿನ್ನೆ ನಗರದಿಂದ ಮಕ್ಕಾ ನಗರಕ್ಕೆ ಹೊರಟಿದ್ದ ಹಜ್ ಯಾತ್ರಿಗಳೂ ರಸ್ತೆಯಲ್ಲಿ ಟ್ರಾಫಿಕ್ ಜಾಂ ಗಳಲ್ಲಿ ಸಿಕ್ಕಿಕೊಂಡು ನಗರ ತಲುಪದಂತಾಯಿತು. ಜೆದ್ದಾ, ಮಕ್ಕಾ ಹಾಗೂ ಸುತ್ತಮುತ್ತಲ ಎಲ್ಲಾ ಪ್ರದೇಶಗಳಲ್ಲಿ ಮಳೆಯಾಗಿದ್ದರೂ ಜೆದ್ದಾ ನಗರದ ಆಸುಪಾಸಿನಲ್ಲಿ ಭಾರೀ ಮಳೆಯಾಗಿದೆ.





ಜೆದ್ದಾ ನಗರದಲ್ಲಿ ಮಳೆನೀರು ನೆಲ ಅಂತಸ್ತಿನ ಅಂಗಡಿ, ಮನೆಗಳಿಗೆ ನುಗ್ಗಿದ್ದು ವ್ಯಾಪಾರಕ್ಕೆ ಧಕ್ಕೆಯುಂಟಾಗಿದೆ. ನೀರಿನಿಂದ ನೆನೆದು ಸಾವಿರಾರು ರಿಯಾಲ್ ಮೌಲ್ಯದ ವಸ್ತುಗಳು ನಾಶವಾಗಿವೆ. ನಗರದಲ್ಲಿರುವ ಭಟ್ಕಳ ಮೂಲದ ವ್ಯಾಪಾರಿಗಳೂ ಭಾರೀ ನಷ್ಟ ಅನುಭವಿಸಿದ್ದಾರೆ.
ನಗರದಲ್ಲಿರುವ ಭಟ್ಕಳ ಮೂಲದ ಎಸ್. ಎಂ. ಮೀರಾ ರವರ ಕುಬಾ ಟೆಕ್ಸ್ ಅಂಗಡಿ ಇದಕ್ಕೊಂದು ಉದಾಹರಣೆ. ಅಂಗಡಿಯಲ್ಲಿದ್ದ ಅಪಾರಪ್ರಮಾಣದ ಬಟ್ಟೆ ನೀರಿನಿಂದ ತೊಯ್ದಿದೆ. ಹಜ್ ಸಮಯದಲ್ಲಿ ಹೆಚ್ಚಿನ ವ್ಯಾಪಾರವಾಗುವ ಕಾರಣದಿಂದ ಎಲ್ಲಾ ವ್ಯಾಪಾರಿಗಳು ಹೆಚ್ಚಿನ ಸಾಮಾಗ್ರಿಗಳನ್ನು ಸಂಗ್ರಹಿಸಿಕೊಳ್ಳುತ್ತಿದ್ದು ಈ ವರ್ಷ ಮಳೆ ಅವರ ಲಾಭದ ಕನಸನ್ನು ನುಚ್ಚುನೂರು ಮಾಡಿದೆ.
ಇತ್ತ ಮಕ್ಕಾ ನಗರದಲ್ಲಿಯೂ ಮಳೆ ಹಜ್ ಯಾತ್ರಿಗಳಿಗೆ ಭಾರೀ ತೊಂದರೆಯಾಗಿ ಪರಿಣಮಿಸಿದೆ. ಅಲ್ಲದೇ ಹಂದಿಜ್ವರ ಹರಡುವ ಭೀತಿಯೂ ಅಧಿಕವಾಗಿರುವುದರಿಂದ ಹೆಚ್ಚಿನವರು ಮುಖದ ಮಾಸ್ಕ್ ಗಳನ್ನು ಧರಿಸಿ ಮಕ್ಕಾ ನಗರಕ್ಕೆ ಆಗಮಿಸುತ್ತಿದ್ದಾರೆ. ಸೌದಿ ಸರ್ಕಾರದ ರಕ್ಷಣಾ ಪಡೆಗಳು ಸನ್ನದ್ದರಾಗಿದ್ದು ಯಾವುದೇ ಅಪಾಯಕಾರಿ ಸನ್ನಿವೇಶವನ್ನು ಎದುರಿಸಲು ಸಿದ್ಧವಾಗಿವೆ.






ಚಿತ್ರ, ವರದಿ: ಖಮರ್ ಸಾದಾ