ದುಬೈ, ಡಿಸೆಂಬರ್ 4: ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ನೆರೆಯಿಂದ ಸಂತ್ರಸ್ತರಾದವರಿಗೆ ನೆರವಾಗುವ ನಿಟ್ಟಿನಲ್ಲಿ ನಗರದ ನಾವು ನಮ್ಮ ಕನ್ನಡ ಸಂಘಟನೆ ಹಾಸ್ಯ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು.
ಈ ಕಾರ್ಯಕ್ರಮಕ್ಕಾಗಿ ಖ್ಯಾತ ನಗೆಭಾಷಣಾಕಾರ - ಗಂಗಾವತಿ ಬೀಚಿ ಪ್ರಾಣೇಶ್ ಹಾಗೂ ಅವರ ಶಿಷ್ಯರಾದ ಶ್ರೀ ರವಿ ಭಜಂತ್ರಿಯವರು ಆಗಮಿಸಿದ್ದರು.

ನಗರದ ಅಲ್ ಬರ್ಶಾದಲ್ಲಿರುವ ಜೆ.ಎಸ್.ಎಸ್. ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಹತ್ತು ಘಂಟೆಗೆ ಕಾರ್ಯಕ್ರಮ ಆಯೋಜಿತವಾಗಿತ್ತು. ಕೇವಲ ಮಿಂಚಂಚೆ ಹಾಗೂ ಅಂತರ್ಜಾಲ ಮಾಧ್ಯಮದ ಮೂಲಕ ಈ ಕಾರ್ಯಕ್ರಮದ ಬಗ್ಗೆ ಪ್ರಚಾರ ನೀಡಿದ್ದರೂ ನಾನೂರಕ್ಕೂ ಹೆಚ್ಚು ಅಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ, ದುಬೈ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸಿ.ಆರ್. ಶೆಟ್ಟಿ, ಕಾರ್ಯದರ್ಶಿ ಕೃಷ್ಣರಾಜ ತಂತ್ರಿ, ಧ್ವನಿ ಪ್ರತಿಷ್ಠಾನದ ಸಂಚಾಲಕ ಹಾಗೂ ಈ ವರ್ಷದ ಮಯೂರ ಪ್ರಶಸ್ತಿ ವಿಜೇತ ಶೀ ಪ್ರಕಾಶ್ ರಾವ್ ಪಯ್ಯಾರ್, ಇನ್ನೋರ್ವ ಮಯೂರ ಪ್ರಶಸ್ತಿ ವಿಜೇತ ಹಾಗೂ ಶಾರ್ಜಾ ಕರ್ನಾಟಕ ಸಂಘದ ಪೂರ್ವ ಅಧ್ಯಕ್ಷ ಶ್ರೀ ಗಣೇಶ್ ರೈ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ನೋಯಲ್ ಆಲ್ಮೆಡಾ, ೧೦೬.೫ ರೇಡಿಯೋ ಸ್ಪೈಸ್ ಮಾಲಿಕರಾದ ಶ್ರೀ ಹರ್ಮನ್ ಲೂವಿಸ್, ಕನ್ನಡ ಧ್ವನಿ .ಕಾಂ ತಾಣದ ಶ್ರೀ ಗೋಪಿನಾಥ ರಾವ್ ಸಹಿತ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.




ನಾವು ನಮ್ಮ ಕನ್ನಡ ಸಂಘಟನೆಯ ಕಾರ್ಯದರ್ಶಿ ಶ್ರೀ ಶ್ರೀನಾಥ್ ರಾಜಣ್ಣನವರು ಸ್ವಾಗತವನ್ನು ಬಯಸಿ ಕಾರ್ಯಕ್ರಮದ ನಿರೂಪಣೆಯನ್ನೂ ನೀಡಿದರು.

ಕು.ಮೇಘಾ ಜ್ಯೋತಿ ಹಾಗೂ ಕುಮಾರಿ ರಶ್ಮಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸರಳವಾಗಿ ಪ್ರಾರಂಭಗೊಂಡಿತು.

ಶ್ರೀಮತಿ ಆಶಾ ರಮೇಶ್ ರವರು ಪ್ರಾಣೇಶ್ ರವರನ್ನು ಸಭೆಗೆ ಪರಿಚಯಿಸಿದರೆ ಶ್ರೀಮತಿ ಸುಮಾ ಗಾಜರೆಯವರು ರವಿ ಭಜಂತ್ರಿಯವರನ್ನು ಸಭೆ ಪರಿಚಯಿಸಿದರು.

ಬಳಿಕ ಮಾತನಾಡಿದ ಪ್ರಾಣೇಶ್ ತಮಗೆ ವಿದೇಶದಲ್ಲಿ ಮೊತ್ತ ಮೊದಲು ಅವಕಾಶ ನೀಡಿದ ಶ್ರೀ ಈರಣ್ಣ ಮೂಲಿಮನಿ ಹಾಗೂ ಅರುಣ ಮುತ್ತುಗದೂರ್ ರವರ ನೆರವನ್ನು ಕೃಜಜ್ಞತೆಯಿಂದ ನೆನೆಸಿಕೊಂಡು ಆ ಬಳಿಕ ತಮಗೆ ಹನ್ನೊಂದು ದೇಶಗಳಲ್ಲಿ ಕಾರ್ಯಕ್ರಮ ನೀಡಲು ಸಾಧ್ಯವಾಯಿತು ಎಂದು ತಿಳಿಸಿದರು. ಹಾಸ್ಯ ಭಾಷಣ ಕಾರ್ಯಕ್ರಮವನ್ನು ಅವರು ತಮ್ಮ ಶಿಷ್ಯರಾದ ಶ್ರೀ ರವಿ ಭಜಂತ್ರಿಯವರಿಗೆ ಪ್ರಾರಂಭಿಸಲು ಅವಕಾಶ ನೀಡಿದರು.
ಇದೇ ಮೊದಲ ಬಾರಿ ವಿದೇಶದಲ್ಲಿ ಕನ್ನಡ ಕಾರ್ಯಕ್ರಮ ನೀಡುತ್ತಿರುವ ರವಿ ಭಜಂತ್ರಿಯವರು ತಮ್ಮ ಎಂದಿನ ಲವಲವಿಕೆಯಿಂದ ನೆರೆದವರನ್ನು ತಮ್ಮ ಮಾತುಗಳ ಮೂಲಕ ಮಂತ್ರಮುಗ್ಧಗೊಳಿಸಿದರು.
ಭಾಷಣದ ನಡುವೆ ಸಮಯೋಚಿತವಾಗಿ ನುಸುಳಿದ ಹಾಸ್ಯಹನಿಗಳು ನೆರೆದವರನ್ನು ನಗೆಗಡಲಲ್ಲಿ ಮುಳುಗಿಸಿದವು.
ಉದಾಹರಣೆಗೆ: ಓರ್ವ ತನ್ನ ಸ್ನೇಹಿತನಿಗೆ ಫೋನಿನಲ್ಲಿ ಹೇಳುತ್ತಾನೆ " ನೋಡಪ್ಪಾ ಜೂನ್ 2 ನೇ ತಾರೀಖಿಗೆ ನನ್ನ ಮದುವೆ ಇದೆ. ಫರ್ಸ್ಟ್ ನೈಟಿಗೇ ಬಂದು ಬಿಡು" ಇಲ್ಲಿ ಫರ್ಸ್ಟ್ ನೈಟ್ ಅಂದರೆ ಮಧುಚಂದ್ರ ಎಂದರ್ಥವಲ್ಲ, ಜೂನ್ ಒಂದನೆಯ ತಾರೀಖಿನಂದೇ ಬಂದುಬಿಡು ಎಂದರ್ಥ.
ಸುಮಾರು ಮುಕ್ಕಾಲು ಘಂಟೆ ಹರಿದ ಅವರ ವಾಗ್ಝರಿ ನೆರೆದವರನ್ನು ಹಾಸ್ಯಹನಿಗಳಿಂದ ತೋಯಿಸಿತು.




ಬಳಿಕ ವೇದಿಕೆಯನ್ನಲಂಕರಿಸಿದ ಗಂಗಾವತಿ ಬೀಚಿ ಪ್ರಾಣೇಶ್ ರವರು ತಮ್ಮ ಸುಮಾರು ಒಂದು ಘಂಟೆಯ ಹಾಸ್ಯಭಾಷಣದಲ್ಲಿ ಕನ್ನಡ ಭಾಷೆಗೆ ಕನ್ನಡಿಗರು ನೀಡಬೇಕಾದ ಪ್ರಾಮುಖ್ಯತೆಗೆ ಒತ್ತು ನೀಡಿದರು. ವಿದೇಶದಲ್ಲಿ ಕನ್ನಡಿಗರ ಹುಮ್ಮಸ್ಸಿಗೆ ತಮ್ಮ ಸಂತೋಷ ವ್ಯಕ್ತಪಡಿಸಿದ ಅವರು ವಿದೇಶದಲ್ಲಿ ಎಷ್ಟೇ ವರ್ಷ ನೆಲೆಸಿದ್ದರೂ ನಮ್ಮ ಬೇರುಗಳು ಕರ್ನಾಟಕದಲ್ಲಿ ಬೇರೂರಿರುವುದನ್ನು ನವಿರು ಹಾಸ್ಯದ ಮೂಲಕ ವಿಶದಪಡಿಸಿದರು.
ಕನ್ನಡ ಭಾಷೆಯಲ್ಲಿ ಕೇವಲ ಒಂದಕ್ಷರವನ್ನು ಆಚೀಚೆ ಮಾಡಿದಾಗ ಆಗುವ ಪ್ರಮಾದಗಳನ್ನು ನಗೆಹನಿಯ ಮೂಲಕ ಅವರು ತಿಳಿಸಿದರು.
ಉದಾಹರಣೆಗೆ: ಹಿರಿಯರಿಗೆ- ಜಾತ್ರೆಯಲ್ಲಿ ಎಳೆಯುವ ತೇರು ಚೆನ್ನ
ಕಿರಿಯರಿಗೆ: ಜಾತ್ರೆಯಲ್ಲಿ ಎಳೆ-ಯುವತಿಯರು ಚೆನ್ನ
ವಾಲ್ಮೀಕಿ ಬರೆದ ರಾಮಾಯಣ ಬೇಕು
ಆದರೆ ಅಂವ ಬೇಡ
ಇಲ್ಲಿ ಬೇಡ ಅಂದರೆ ಬೇಡರವ ಎಂದರ್ಥ.
ತಮ್ಮ ಶಾಲಾಜೀವನದಲ್ಲಿ ಸಹಪಾಠಿಯಾಗಿದ್ದ ಅಶೋಕ್ ಗುಡಿಕೋಟಿ ಎಂಬುವರ ಕವನವನ್ನೂ ಅವರು ಉಲ್ಲೇಖಿಸಿ ಭಾಷಾ ಪ್ರಜ್ಞೆ ಎಲ್ಲರಲ್ಲಿಯೂ ಇರುತ್ತದೆ, ಹೊರತೆಗೆಯುವ ಪ್ರಯತ್ನವಾಗಬೇಕು ಎಂದು ತಿಳಿಸಿದರು.
ಗುಡಿಕೋಟೆಯವರ ಕವನ ಹೀಗಿದೆ:
ಸ್ಟೇಜ್ ಮೇಲೆ ಹುಡುಗಿಯರ ಕೋಲಾಟ ನಡೆತೈತೆ
ನನ್ನ ಹುಡುಗಿಯ ಮಾತಾಡಬೇಕೆನಿಸಿತೈತೆ
ಆದರೇನು ಮಾಡಲಿ ಆಕಿಯ ಕೈಯಾಗ ಕೋಲೈತೆ
ಕನ್ನಡ ಸಿನೇಮಾಗಳಲ್ಲಿ ಕೇವಲ ವ್ಯಾಪಾರದೃಷ್ಟಿಯಿಂದ ಬಳಸಿಕೊಳ್ಳುವ ಕನ್ನಡ ಭಾಷೆಯ ಸೂಕ್ತ ಬಳಕೆಯಿಲ್ಲದೇ ಆಗುವ ಪ್ರಮಾದಗಳನ್ನು ಅವರು ಹಲವು ಉದಾಹರಣೆಗಳೊಂದಿಗೆ ಸಾದರಪಡಿಸಿದರು.
ಕನ್ನಡ ಚಿತ್ರನಟ ರವಿಚಂದ್ರನ್ ನಾಲ್ಕಾರು ಕೋಟಿ ಖರ್ಚು ಮಾಡಿ ಚಿತ್ರಮಾಡುವ ಜೊತೆಗೇ ನಾಲ್ಕು ರೂಪಾಯಿ ಕೊಟ್ಟು ಅಂಕಲಿಪಿ ಕೊಂಡು ತಮ್ಮ ಕನ್ನಡ ಉಚ್ಛಾರವನ್ನು ಸರಿಪಡಿಸಿಕೊಳ್ಳುವುದು ಉತ್ತಮ ಎಂದು ಅವರು ತಿಳಿಸಿದರು.
ಹಲವು ನಗೆಹನಿಗಳೂ ಕಾರ್ಯಕ್ರಮದುದ್ದಕ್ಕೂ ನಗೆಬಾಂಬುಗಳನ್ನು ಸಿಡಿಸುತ್ತಿದ್ದವು.

ಕಾಲೇಜಿನ ಮುಂದೆ ಎರೆಡು ಕತ್ತೆಗಳು ಕಣ್ಣಿರಿಡುತ್ತಿದ್ದವು.
ಯಾರ್‍ಯಾರಿಗೋ ಪ್ರವೇಶ ಸಿಗುತ್ತಿದೆ,
ನಮಗೆ ಮಾತ್ರ ಸಿಗುತ್ತಿಲ್ಲವಲ್ಲ ಎಂದು ಅವಲತ್ತುಕೊಳ್ಳುತ್ತಿದ್ದವಂತೆ.
ಹಲವೆಡೆ ತಮಗಾದ ಅನುಭವಗಳನ್ನೇ ಹಾಸ್ಯದ ರೂಪದಿಂದ ಪ್ರಸ್ತುತಪಡಿಸುವ ಅವರ ಶೈಲಿ ಎಲ್ಲರ ಮನಗೆದ್ದಿತು. ಸಭಾಭವನದ ಹೊರಗೆ ಒಂದು ಕುರ್ಚಿಯಲ್ಲಿ ಕುಳಿತಿದ್ದ ಪ್ರಾಣೇಶ್ ರವರನ್ನು ಒಂದು ಮಗು "ಅಂಕಲ್, ನೀವು ಆ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೀರಾ, ನಮಗಿಲ್ಲಿ ಆಟ ಆಡಬೇಕು" ಎಂದು ಕೇಳಿತಂತೆ. ಆಗ ಅಲ್ಲೇ ಇದ್ದ ಮಗುವಿನ ತಾಯಿ ತನ್ನ ಮಗುವನ್ನು ಗದರಿಸುತ್ತಾ, ಕೊಂಚ ತಡಿ, ಈಗ ಆ ಅಂಕಲ್ ಮ್ಯಾಲ ಹೋಗ್ತಾರ, ಆಮೇಲೆ ಆಟಾಡಿಕೊಳ್ಳುವಂತಿ ಎಂದರಂತೆ. ಇಲ್ಲಿ ಮ್ಯಾಲ ಹೋಗುವುದು ಎಂದರೆ ವೇದಿಕೆ ಮೇಲೆ ಹೋಗುವುದು ಎಂದರ್ಥ ಆದರೆ ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ ಅಪಾರ್ಥವಾಗುತ್ತದೆ ಎಂದು ಅವರು ತಿಳಿಸಿದರು.
ಕನ್ನಡಿಗರನ್ನು ನಿಧಾನವಾಗಿ ಆವರಿಸುತ್ತಿರುವ ಪರಭಾಷೆಗಳ ಆರ್ಭಟವನ್ನು ತಡೆಯಲು ಅವರು ಸೂಚ್ಯವಾಗಿ
ಮನೆಯ ಮುಂಬಾಗಿಲು ಕನ್ನಡವಾಗಿರಲಿ
ಬೇರೆ ಕಿಟಕಿಗಳು ಬೇಕಾದರೆ ಬೇರೆ ಭಾಷೆಗಳಾಗಲಿ
ಎಂದು ಎಚ್ಚರಿಸಿದರು.
ಮದುವೆಯ ನಂತರ ಹುಡುಗಿಯರು ಆಗುತ್ತಾರೆ ದಪ್ಪ
ಅದೇ ಹುಡುಗರು? ಹೌದಪ್ಪ, ಹೌದಪ್ಪಾ, ಹೌದಪ್ಪಾ....
ಅವರ ಸಹಪಾಠಿಯಾಗಿದ್ದ ಗುರುವ ಎಂಬ ಯುವಕ ನೋಡುತ್ತಿದ್ದ ದೃಷ್ಟಿಯಿಂದ ಹೆಣೆದ ಕವಿತೆಗಳನ್ನೂ ಅವರು ಅರುಹಿ ಸಭೆಯಲ್ಲಿ ನಗೆಯುಕ್ಕಿಸಿದರು.
ಮುಂಗಾರು ಮಳೆ ಬೀಳುವಲ್ಲಿ
ತಣ್ಣನೆಯ ಗಾಳಿ ಸುಳಿಯುತ್ತಿದ್ದು
ಇಲ್ಲ ಇಲ್ಲ ಸಾಧ್ಯವಿಲ್ಲ
ಅಂಡರ್ ವೇರ್ ಒಣಗುವುದಿಲ್ಲ
ಇಂದಿನ ಶಿಕ್ಷಣಾಪದ್ದತಿಯಿಂದ ಮಕ್ಕಳು ಕೇವಲ ರ್‍ಯಾಂಕ್ ಪಡೆಯುವ ಯಂತ್ರಗಳಾಗುತ್ತಿದ್ದಾರೆಯೇ ವಿನಃ ಸಾಮಾನ್ಯಜ್ಞಾನವಿಲ್ಲದ ಪ್ರಜೆಗಳಾಗಿ ಬೆಳೆಯುವ ಅಪಾಯವನ್ನು ಅವರು ಕಿರು ಹಾಸ್ಯ ಚಟಾಕಿಯೊಂದಿಗೆ ವಿಷದಪಡಿಸಿದರು.
ಕೋಣೆಯ ಕೂಸು ಕೊಳೀತು
ಬೀದಿ ಕೂಸು ಬೆಳೇತು
ಎಲ್ಲಾ ಕಾಲದಲ್ಲಿಯೂ ಹಾಸ್ಯಪ್ರಜ್ಞೆಯಿಂದ ಕಾರ್ಯಕೈಗೊಳ್ಳುವುದರಿಂದ ಆರೋಗ್ಯಕರ ಸಮಾಜ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು. ತಮ್ಮ ಅತಿ ಉದ್ದನೆಯ ಹೆಸರಿನ ಬಗ್ಗೆ ಅತೀವ ಅಭಿಮಾನವಿದ್ದ ಬ್ರಾಹ್ಮಣರೊಬ್ಬರು ಸಾಮಾನ್ಯ ಪ್ರಜೆಯೊಬ್ಬನ ನಾಲಗೆಯಲ್ಲಿ ಬೇರೆಯೇ ಅರ್ಥ ಪಡೆದುಕೊಂಡ ಬಳಿಕ ತಮ್ಮ ಹೆಸರನ್ನು ಹೃಸ್ವಗೊಳಿಸಿಕೊಂಡ ಪ್ರಸಂಗವನ್ನೂ ಅವರು ತಿಳಿಸಿ ನೆರೆದವರಲ್ಲಿ ನಗೆಯುಕ್ಕಿಸಿದರು.
ಓರ್ವ ಬ್ರಾಹ್ಮಣನಿದ್ದನಂತೆ, ಹೆಸರು ಶ್ರೀ ತ್ರಿವಿಕ್ರಮಾದ್ವೈತಪಾಯಾನಾಚಾರ್ಯ ಅಂತ. ಚಿಕ್ಕಂದಿನಲ್ಲಿ ಪೋಲೀಸರೂ ಹೆಸರು ಬರೆದುಕೊಳ್ಳಲಿಕ್ಕಾಗದೇ ಬಿಟ್ಟುಬಿಡುತ್ತಿದ್ದ ಪ್ರಸಂಗಗಳಿಂದ ಅವರಿಗೆ ತಮ್ಮ ಹೆಸರಿನ ಬಗ್ಗೆ ಭಾರೀ ಅಭಿಮಾನವಿತ್ತು. ಒಮ್ಮೆ ನ್ಯಾಯಾಲಯದಲ್ಲಿ ಮುಸ್ಲಿಂ ಜವಾನನಿಗೆ ಇವರನ್ನು ಕರೆಯಲು ತಿಳಿಸಲಾಯ್ತು. ತಿಪ್ಪರಲಾಗ ಹಾಕಿದರೂ ಹೆಸರನ್ನು ಉಚ್ಚರಿಸಲಾಗದ ಆತ ಕಡೆಗೆ ’ ತೇರಿ ಮಾಂ ಕಾ ದೋ ಪಾವೋಂ ಕಾ ಆಚಾರಿ" ಎಂದು ಕರೆದಿದ್ದ.
ಅಂದೇ ಶ್ರೀ ತ್ರಿವಿಕ್ರಮಾದ್ವೈಪಾಯಾನಾಚಾರ್ಯ ಟಿ.ಪಿ. ಆಚಾರ್ಯ ಆದರಂತೆ.
ಸುಮಾರು ಒಂದು ಘಂಟೆಗೂ ಹೆಚ್ಚಿನ ಕಾಲ ಅವರು ನೆರೆದವರನ್ನು ತಮ್ಮ ಹಾಸ್ಯಹೊಳೆಯಲ್ಲಿ ಮೀಯಿಸಿದರು.
ಕಾರ್ಯಕ್ರಮದ ಬಳಿಕ ಶ್ರೀ ಶಿವಾನಂದರವರು ಪ್ರಾಣೇಶ್ ರವರಿಗೂ ಶ್ರೀ ಮುರುಗೇಶ್ ಗಾಜರೆಯವರು ರವಿ ಭಜಂತ್ರಿಯವರಿಗೂ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿದರು.


ಸಂಘದ ಇನ್ನೋರ್ವ ಲವಲವಿಕೆಯ ಕಾರ್ಯಕರ್ತೆಯಾಗಿರುವ ಡಾ. ಆಶಾರಾಣಿಯವರು ವಂದನಾರ್ಪಣೆ ಸಲ್ಲಿಸಿದರು. ಹೆಚ್ಚಿನ ಕಾರ್ಯಕ್ರಮಗಳಲ್ಲಿ ವಂದನಾರ್ಪಣೆ ಸಮಯದಲ್ಲಿ ಕೆಲವೇ ಜನರು ಉಳಿದಿರುವುದು ವಾಡಿಕೆಯಾಗಿದ್ದರೂ ಇಂದು ಸಭೆಯ ಪ್ರಾರಂಭದಲ್ಲಿದ್ದಷ್ಟೇ ಜನರು ವಂದನಾರ್ಪಣೆಯಲ್ಲೂ ಉಪಸ್ಥಿತರಿರುವುದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಧ್ಯಮ ಪ್ರತಿನಿಧಿಗಳಾಗ ಆಗಮಿಸಿದ್ದ106.5 ರೇಡಿಯೋ ಸ್ಪೈಸ್ ನ ಶ್ರೀ ಹರ್ಮನ್ ಲೂವಿಸ್ ಹಾಗೂ ಸಾಹಿಲ್ ಆನ್ಲೈನ್.ಆರ್ಗ್ ತಾಣದ ಅರ್ಶದ್ ಹುಸೇನ್ ರವರಿಗೆ ಪುಷ್ಪಗುಚ್ಛ ನೀಡಿ ಸನ್ಮಾನಿಸಲಾಯಿತು.


ಈ ಕಾರ್ಯಕ್ರಮದಲ್ಲಿ ಸಂಗ್ರಹವಾಗುವ ದೇಣಿಗೆಯನ್ನು ಮೈಸೂರಿನ ’ದ ಮೈಸೂರು ಸಿಟಿಜನ್ ಫೋರಂ’ ಸಂಸ್ಥೆಗೆ ನೀಡಲಿದ್ದು ಸಕಲ ಸಂಗ್ರಹ ಉತ್ತರ ಕರ್ನಾಟಕದ ನೆರೆಸಂತ್ರಸ್ತರಿಗೆ ನೆರವಾಗಲಿದೆ. ನಗರದ ಬಸವ ಸಮಿತಿ ಸಂಘಟನೆಯಿಂದ ಸುಮಾರು ಐದು ಲಕ್ಷ ರೂಪಾಯಿ ಸಂಗ್ರಹವಾಗಿದ್ದು ’ದ ಮೈಸೂರು ಸಿಟಿಜನ್ ಫೋರಂ’ ಸಂಸ್ಥೆಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಆಗಮಿಸಿದ ಹಲವರು ಉದಾರಮನಸ್ಸಿನಿಂದ ತಮ್ಮ ಹೆಸರುಗಳನ್ನು ಹೇಳಲಿಚ್ಛಿಸದೇ ದೇಣಿಗೆ ನೀಡಿದ್ದು ಆ ಮೊತ್ತವೇ ಸುಮಾರು ಎಂಟೂ ಕಾಲು ಲಕ್ಷವಾಗಿದೆ. ಕಾರ್ಯಕ್ರಮದ ಪ್ರವೇಶ ಧನ ಹಾಗೂ ದಾನಿಗಳ ದೇಣಿಗೆಗಳ ಮೊತ್ತ ವರದಿ ಪ್ರಕಟವಾಗುವವರೆಗೆ ಅಲಭ್ಯವಾಗಿದ್ದು ಎಷ್ಟೇ ಮೊತ್ತವಾಗಿದ್ದರೂ ’ದ ಮೈಸೂರು ಸಿಟಿಜನ್ ಫೋರಂ’ ಸಂಸ್ಥೆಗೆ ನೀಡಲಾಗುವುದು ಎಂದು ನಾವು ನಮ್ಮ ಕನ್ನಡ ಸಂಘಟನೆಯ ಕಾರ್ಯಕರ್ತರಾದ ಶ್ರೀ ವಾಸುದೇವ ಎಸ್. ದೇವಗಿರಿ ಹಾಗೂ ಶ್ರೀ ಗಿರೀಶ್ ಪಾಟೀಲ್ ತಿಳಿಸಿದ್ದಾರೆ.



ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ದತ್ತಕನಿಧಿಯನ್ನು ಸಂಗ್ರಹಿಸುವಲ್ಲಿ ನಾವು ನಮ್ಮ ಕನ್ನಡ ಸಂಘಟನೆಯ ಸದಸ್ಯರೆಲ್ಲರೂ ಶ್ರಮಿಸಿದ್ದು ಇಂದಿನ ಸಂಗ್ರಹ ಈ ಶ್ರಮದ ಫಲವಾಗಿದೆ.
ನಾವು ನಮ್ಮ ಕನ್ನಡ ಸಂಘಟನೆಯ ಈ ಕೆಳಕಂಡ ಕಾರ್ಯಕರ್ತರು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ್ದಾರೆ.
ಶ್ರೀ ವಾಸುದೇವ ಎಸ್. ದೇವಗಿರಿ
ಶ್ರೀ ಮಹದೇವ ಕೆ. ಜೋಶಿ
ಶ್ರೀ ಗಿರೀಶ್ ಪಾಟೀಲ್
ಶ್ರೀ ಆರ್. ಕೆ. ಕುಲಕರ್ಣಿ
ಶ್ರೀ ಸೂರಜ್ ಪಲ್ಲೇದ್
ಶ್ರೀ ಮುರುಗೇಶ್ ಗಾಜರೆ
ಶ್ರೀ ಶಿವಾನಂದ ಚಳ್ಳಮರದ
ಶ್ರೀ ಸತೀಶ್ ಹಿಂದರ್
ಶ್ರೀ ಚಂದ್ರಶೇಖರ ಲಿಂಗದಳ್ಳಿ
ಶ್ರೀ ಕಲ್ಲೂರು ಗುರುಸ್ವಾಮಿ
ಶ್ರೀ ಮಲ್ಲಿಕಾರ್ಜುನ ಮುಳ್ಳೂರು
ಡಾ. ಆಶಾ ರಾಣಿ
ಶ್ರೀ ಮಹಾಂತೇಶ ಬಡ್ಡಿ
ಶ್ರೀ ರವಿ ಪುಗಶೆಟ್ಟಿ
ಶ್ರೀ ಸುನಿಲ್ ಹೊರಗಿನಮನಿ
ಚಿತ್ರ, ವರದಿ: ಅರ್ಶದ್ ಹುಸೇನ್ ಎಂ.ಹೆಚ್, ದುಬೈ.