ದುಬೈ, ನವೆಂಬರ್ 30: ‘ನಿಮ್ಮ ಉದ್ಯೋಗದ ಒಪ್ಪಂದವನ್ನು ರದ್ದು ಮಾಡಲಾಗಿದೆ. ನೀವಿನ್ನು ದುಬೈಗೆ ವಾಪಸ್ಸಾಗಬೇಡಿ. ಬಾಕಿಯಿರುವ ಹಣ, ನಿಮ್ಮ ಇತರ ವಸ್ತುಗಳನ್ನು ಅಂಚೆ ಮೂಲಕ ಕಳುಹಿಸಲಾಗುವುದು’.
ಹೀಗೆಂದು ಬರೆದಿರುವ ಎಸ್ಎಂಎಸ್ಗಳು ದುಬೈನಲ್ಲಿ ದುಡಿಯುತ್ತಿರುವ ಭಾರತೀಯ ನೌಕರರ ಮೊಬೈಲ್ಗಳಲ್ಲಿ ಹರಿದು ಬರಲಾರಂಭಿಸಿದೆ.
ಈದ್ ಹಬ್ಬಕ್ಕೆಂದು ರಜೆ ಪಡೆದು ದುಬೈಯಿಂದ ತವರಿಗೆ ಬಂದಿರುವ ಅನೇಕರು ಈಗ ತಮ್ಮ ಮೊಬೈಲ್ನಲ್ಲಿ ಸಂದೇಶ ಬಂದೊಡನೆ ಆತಂಕ ಪಡುವಂತಹ ಪರಿಸ್ಥಿತಿ ಎದುರಾಗಿದೆ.
ಹೌದು, ಹಲವು ಭಾರತೀಯರ ಕನಸಿನ ರಾಷ್ಟ್ರ ದುಬೈ ಈಗ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದು, ಬ್ಯಾಂಕ್ಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಗಳು ಪಾತಾಳಕ್ಕಿಳಿದಿವೆ. ಇದರ ಗಂಭೀರ ಪರಿಣಾಮ ಅಲ್ಲಿ ಉದ್ಯೋಗ ಅರಸಿ ಹೊರಟ ಭಾರತೀಯ ನೌಕರರ ಮೇಲಾಗುತ್ತಿದೆ. ಭಾರತ ಶೇ. ೩೩ ಭಾಗ ದುಬೈ ರಾಷ್ಟ್ರಗಳಲ್ಲಿ ದುಡಿಯುವ ಕಾರ್ಮಿಕರಿಂದಾಗಿ ಗಳಿಸುತ್ತದೆ ಎಂದು ವಿಶ್ವ ಬ್ಯಾಂಕ್ ವರದಿ ಮಾಡಿದೆ. ಆದರೆ ಭಾರತದ ಮೇಲೆ ದುಬೈ ಬಿಕ್ಕಟ್ಟು ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ಆರ್ಬಿಐ ಮಾಜಿ ಗರ್ವನರ್ ವೈ.ವಿ.ರೆಡ್ಡಿ ಹೇಳಿದ್ದಾರೆ.
ಸೌಜನ್ಯ: ಕನ್ನಡಪ್ರಭ