ಜೆದ್ದಾ: (ಸೌದಿ ಅರೇಬಿಯಾ) ಜನವರಿ 22 : ಇಂಡಿಯಾ ಫ್ರಟೆರ್ನಿಟಿ ಫೋರಮ್ ಜಿದ್ದಾ ಘಟಕವು ಇಲ್ಲಿನ ಇಂಫಾಲ ಆವರಣದಲ್ಲಿ ಏರ್ಪಡಿಸಿದ್ದ ಅನಿವಾಸಿ ಭಾರತೀಯರ ಕುಟುಂಬ ಸಮ್ಮಿಲನಾ ಕಾರ್ಯಕ್ರಮ "ಪಿರ್ಸಪ್ಪಾಡ್ " ಜನಮನಸೂರೆಗೊಂಡು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಆ ಪ್ರಯುಕ್ತ ನಡೆದ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜನಾಬ್: ಕೆ.ಎಂ. ಶರೀಫ್ ಇಂಡಿಯಾ ಫ್ರಟೆರ್ನಿಟಿ ಫೋರಮ್ ಅನಿವಾಸಿ ಭಾರತೀಯರಿಗಾಗಿ ಜಾತಿ ಧರ್ಮಗಳ ಬೇಧವಿಲ್ಲದೆ ಕೈಗೊಳ್ಳುತ್ತಿರುವ ಸಾಮಾಜಿಕ ಕಾರ್ಯಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಶೋಷಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ಮತ್ತು ಭದ್ರತೆ ಕೊಡಲು ಇದುವರೆಗೆ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ವಿಫಲವಾಗಿವೆ .ಇವರನ್ನು ಕೇವಲ ಮತಬ್ಯಾಂಕ್ ರೀತಿಯಲ್ಲಿ ಉಪಯೋಗಿಸಿಕೊಂಡ ರಾಜಕೀಯ ಪಕ್ಷಗಳು ಆಯಾ ಸಮುದಾಯದ ಜನಸಂಖ್ಯೆಗನುಗುಣವಾಗಿ ಶಾಸಕಾಂಗ ಸಭೆಗಳಲ್ಲಿ ಪ್ರಾತಿನಿಧ್ಯ ಕೊಡುವಲ್ಲಿ ವಿಫಲವಾಗಿವೆ. ಆದ್ದರಿಂದ ಈ ಸಮುದಾಯಗಳು ರಾಜಕೀಯ ಜಾಗೃತಿ ಹೊಂದುವುದರ ಮೂಲಕ ಸಬಲೀಕರಣದತ್ತ ಮುನ್ನಡೆಯಬೇಕೆಂದು ಹೇಳಿದರು.
ಭಾರತದ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಅನೇಕ ಸಮಿತಿ ಮತ್ತು ಆಯೋಗಗಳು ರಚನೆಯಾಗಿವೆ. ಆದರೆ ಇವು ಇದುವರೆಗೆ ಕೇವಲ ವರದಿಗಳನ್ನು ನೀಡುವುದಕ್ಕೆ ಮಾತ್ರ ಸೀಮಿತವಾಗಿದ್ದು ಆನಂತರ ಸರ್ಕಾರಗಳು ಆ ವರದಿಗಳನ್ನು ಕಸದ ಬುಟ್ಟಿಗೆ ಹಾಕುತ್ತದೆ ಎಂದು ಹೇಳಿದರು. ಇತ್ತೀಚಿಗೆ ಬಾಬರಿ ಮಸ್ಜಿದ್ ಧ್ವಂಸ ಮಾಡಿದ ಆರೋಪಿಗಳ ಕುರಿತು ಲಿಬರ್ಹಾನ್ ಆಯೋಗ ಸ್ಪಷ್ಟ ವರದಿ ನೀಡಿದ್ದರೂ ಆ ವರದಿಯನ್ನು ಸಂಸತ್ತಿನಲ್ಲಿ ಚರ್ಚಿಸದೆ ಮತ್ತು ಆರೋಪಿಗಳ ವಿರುದ್ಧ ಆರೋಪ ಪಟ್ಟಿ ದಾಖಲಿಸದೆ ಕೇಂದ್ರ ಸರ್ಕಾರ ಭಾರತದ ಕೋಮು ಸೌಹಾರ್ದತೆಯನ್ನು ನಾಶಪಡಿಸಿದ ಫ್ಯಾಸಿಸ್ಟ್ ನಾಯಕರಿಗೆ ಪರೋಕ್ಷ ಬೆಂಬಲ ನೀಡುತ್ತಿದೆ ಎಂದು ಹೇಳಿದರು.
ರಾತ್ರಿ ೯ ಗಂಟೆಗೆ ಮಾಸ್ಟರ್ ಮುನೀರ್ ರವರ ಕಿರಾತ್ ಪಾರಾಯಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಜನಾಬ್: ಸುಹೇಲ್ ಕಂದಕ್ ಇಂಡಿಯಾ ಫ್ರಟೆರ್ನಿಟಿ ಫೋರಮಿನ ಸಾಮಾಜಿಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ನಂತರ ಆರೋಗ್ಯ ಜಾಗೃತಿ ಅಭಿಯಾನದ ಅಂಗವಾಗಿ ಆರೋಗ್ಯ ಜಾಗೃತಿಯ ಮಾಹಿತಿಯ ಜೊತೆಗೆ ಆವಶ್ಯಕ ವ್ಯಾಯಾಮದ ಬಗ್ಗೆ ಮಾಹಿತಿ ನೀಡಲಾಯಿತು. ಆನಂತರ ಮಕ್ಕಳಿಂದ ಧಾರ್ಮಿಕ ಗೀತೆಗಳ ಗಾಯನದ ಜೊತೆಗೆ ಸಾಂಪ್ರದಾಯಿಕ ದಫ್ ಪ್ರದರ್ಶನವೂ ನಡೆಯಿತು . ಕಿರಾತ್, ರಸಪ್ರಶ್ನೆ, ಚಿತ್ರ ಬಿಡಿಸುವ ಸ್ಪರ್ಧೆಯ ಜೊತೆಗೆ ಕೆಲವು ಒಳಾಂಗಣ ಕ್ರೀಡೆಗಳನ್ನೂ ಆಯೋಜಿಸಲಾಗಿತ್ತು. ಮಹಿಳೆಯರಿಗಾಗಿ ಪ್ರತ್ಯೇಕ ಸ್ಥಳಾವಕಾಶವನ್ನು ಏರ್ಪಡಿಸಲಾಗಿದ್ದು ಅವರಿಗಾಗಿಯೇ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಇಂಡಿಯಾ ಫ್ರಟೆರ್ನಿಟಿ ಫೋರಮ್ ಜಿದ್ದಾ ಘಟಕದ ಕರ್ನಾಟಕ ವಿಭಾಗದ ಅಧ್ಯಕ್ಷರಾದ ಜನಾಬ್ ಮಹಮ್ಮದ್ ಹುಸೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರೆ ದಕ್ಷಿಣ ಕನ್ನಡ ಸುನ್ನೀ ಸೆಂಟರ್ ಅಧ್ಯಕ್ಷರಾದ ಜನಾಬ್ ಅಶ್ರಫ್ ಮೈನಾ , ಬಾಮಾ ಅಧ್ಯಕ್ಷರಾದ ಜನಾಬ್: ಹಿದಾಯತ್ ,ಇಂಡಿಯಾ ಫ್ರಟೆರ್ನಿಟಿ ಫೋರಮ್ ಸಂಚಾಲಕರಾದ ಜನಾಬ್: ಪಿ.ಕೆ. ಬಷೀರ್ ಮುಖ್ಯ ಅತಿಥಿಗಳಾಗಿದ್ದರು .
ಜನಾಬ್ ಮಹಮ್ಮದ್ ಅಲಿ ಸ್ವಾಗತಿಸಿದರೆ ಜನಾಬ್ ಅಬ್ದುಲ್ ಮಜೀದ್ ಧನ್ಯವಾದ ಸಮರ್ಪಿಸಿದರು. ಜನಾಬ್ ಎ.ಎಂ.ಆರೀಫ್ ಜೋಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.
ವರದಿ: ಅಶ್ರಫ್ ಮಂಜ್ರಾಬಾದ್. ಸೌದಿ ಅರೇಬಿಯಾ.