ದುಬೈ, ಡಿ.೧೪ : ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ದುಬೈಗೆ ಸಂಯುಕ್ತ ಅರಬ್ ರಾಷ್ಟ್ರಗಳ ಅತಿ ದೊಡ್ಡ ಸದಸ್ಯ ರಾಷ್ಟ್ರ ಅಬುಧಾಬಿ ಸಹಾಯ ಹಸ್ತ ಚಾಚಿದ್ದು, ೪೬,೪೭೦ ಕೋಟಿ ರು. ಆರ್ಥಿಕ ಪ್ಯಾಕೇಜನ್ನು ಘೋಷಿಸಿದೆ.
ಸೋಮವಾರ ದುಬೈನ ಪ್ರಧಾನ ಆರ್ಥಿಕ ಸಮಿತಿ ಅಧ್ಯಕ್ಷರು ಈ ವಿಚಾರವನ್ನು ಬಹಿರಂಗಪಡಿಸಿದ್ದು, ಈ ಆರ್ಥಿಕ ಪ್ಯಾಕೇಜ್‌ನಲ್ಲಿ ೧೯,೦೫೩ ಕೋಟಿ ರುಪಾಯಿಗಳನ್ನು ದುಬೈ ವರ್ಲ್ಡ್‌ನ ಪುನಶ್ಚೇತನಕ್ಕಾಗಿ ಮೀಸಲಿಡಲಾಗಿದೆ.
-ಅನಿರೀಕ್ಷಿತ ಪ್ಯಾಕೇಜ್: ದುಬೈನ ಪ್ರಮುಖ ಹಣಕಾಸು ಸಂಸ್ಥೆ ದುಬೈ ವರ್ಲ್ಡ್ ದಿವಾಳಿಯಾದ ಬಳಿಕ ಅದರ ಪುನಶ್ಚೇತನಕ್ಕೆ ಇಂಥದ್ದೊಂದು ಪ್ಯಾಕೇಜ್ ದೊರೆಯುತ್ತದೆ ಎಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಆದರೆ, ಪೆಟ್ರೋಲಿಯಂ ರಫ್ತು ಮಾಡುವ ಜಗತ್ತಿನ ಅತಿ ದೊಡ್ಡ ರಾಷ್ಟ್ರ ಅಬುಧಾಬಿ ದುಬೈ ನೆರವಿಗೆ ಧಾವಿಸಿದೆ. ಅಬುಧಾಬಿ ನೀಡಿರುವ ಭಾರೀ ಮೊತ್ತದ ಪ್ಯಾಕೇಜ್ ಈಗ ದುಬೈನಲ್ಲಿನ ಹೂಡಿಕೆದಾರರು, ವ್ಯಾಪಾರಿಗಳು ಮತ್ತು ಉದ್ಯೋಗಿಗಳಲ್ಲಿ ಮತ್ತೆ ಆಶಾಭಾವನೆ ಚಿಗುರಿಸಿದೆ. ಈ ಮಧ್ಯೆ, ದುಬೈ ಆರ್ಥಿಕ ವೈವಿಧ್ಯ ಮತ್ತು ಬಲಿಷ್ಠ ಕೇಂದ್ರವಾಗಿ ಹೊರ ಹೊಮ್ಮಲಿದೆ. ದುಬೈನ ಸಂಭ್ರಮದ ದಿನಗಳು ಇನ್ನಷ್ಟೇ ಬರಬೇಕಿದೆ. ಅಂತಾರಾಷ್ಟ್ರೀಯ ವ್ಯಾಪಾರ ಮಾರುಕಟ್ಟೆ ನಿಯಮಗಳಿಗೆ ತಕ್ಕಂತೆ ಆರ್ಥಿಕ ನೀತಿಗಳನ್ನು ರೂಪಿಸಲು ದುಬೈ ಸರ್ಕಾರ ಸಜ್ಜಾಗಿದೆ ಎಂದು ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ಅಲ್ ಮಕ್ತೂಮ್ ಹೇಳಿದ್ದಾರೆ.
ಸೌಜನ್ಯ : ಕನ್ನಡಪ್ರಭ