ದುಬೈ, ಜನವರಿ ೧೯: ಜನಪ್ರಿಯ ಪೇಯಗಳಾದ ಪೆಪ್ಸಿ ಹಾಗೂ ಇನ್ನಿತರ ಪೇಯಗಳ ಬೆಲೆ ಶೇ. ಐವತ್ತರಷ್ಟು ಹೆಚ್ಚುವ ಸಂಭವಗಳಿವೆ. ಪೇಯಗಳನ್ನು ಉತ್ಪಾದಿಸುವ ವೆಚ್ಚದಲ್ಲಿ ಗಣನೀಯವಾದ ಹೆಚ್ಚಳವಾಗಿದ್ದು ಬೆಲೆ ಏರಿಸದೇ ನಿರ್ವಾಹವಿಲ್ಲವಾಗಿದೆ, ಈ ನಿಟ್ಟಿನಲ್ಲಿ ಬೆಲೆ ಏರಿಸುವ ಪ್ರಸ್ತಾವನೆಯನ್ನು ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದ್ದು ಫಲಿತಾಂಶಕ್ಕಾಗಿ ಎದುರು ನೋಡಲಾಗುತ್ತಿದೆ ಎಂದು ದುಬೈ ರಿಫ್ರೆಶ್ಮೆಂಟ್ ಕಂ (ಪೆಪ್ಸಿ ಉತ್ಪಾದಕಾ ಸಂಸ್ಥೆ) ಯ ಮುಖ್ಯ ನಿರ್ದೇಶಕರಾದ ತಾರೆಕ್ ಅಲ್ಲ್ ಸಾಖಾರವರು ತಿಳಿಸಿದ್ದಾರೆ.
ಒಂದು ವೇಳೆ ಸರ್ಕಾರದ ಅನುಮೋದನೆ ದೊರೆತಲ್ಲಿ ಪ್ರಸ್ತುತ ಒಂದು ದಿರ್ಹಾಂ ಗೆ ಸಿಗುತ್ತಿರುವ ಪೆಪ್ಸಿ ಸಂಸ್ಥೆಯ ಎಲ್ಲಾ ಪೇಯಗಳು ಒಂದೂವರೆ ದಿರ್ಹಾಂ ಅಗಲಿವೆ.
ಪೇಯದ ಉತ್ಪಾದನೆಗೆ ಅಗತ್ಯವಾಗಿರುವ ಸಕ್ಕರೆಯ ಬೆಲೆ ಏರಿರುವುದು ಉತ್ಪಾದನಾ ವೆಚ್ಚ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ. ಈಗಾಗಲೇ ಸೌದಿ ಅರೇಬಿಯಾ, ಬಹರೇನ್ ಗಳಲ್ಲಿ ಪೇಯಗಳ ಬೆಲೆ ಸುಮಾರು ಐವತ್ತು ಪ್ರತಿಶತ ಏರಿದ್ದು ಅಲ್ಲಿನ ನಾಗರಿಕರ ಕೆಂಗಣ್ಣಿಗೆ ಕಾರಣವಾಗಿದೆ. ವಾಸ್ತವವಾಗಿ ಕಳೆದ ಇಪ್ಪತ್ತು ವರ್ಷಗಳಿಂದಲೂ ಈ ಪೇಯಗಳ ಬೆಲೆ ಮಾರುಕಟ್ಟೆಯಲ್ಲಿ ಸ್ಥಿರವಾಗಿದೆ.
ಈ ಕ್ರಮವನ್ನು ಸೌದಿ ಅರೇಬಿಯಾದ ಗ್ರಾಹಕ ರಕ್ಷಣಾ ಸಂಸ್ಥೆ ಖಂಡಿಸಿದ್ದು ಬೆಲೆಏರಿಕೆಯನ್ನು ಕೂಡಲೇ ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿದೆ. ಬಹರೇನಿನಲ್ಲಿಯೂ ಪ್ರತಿರೋಧ ಕಂಡುಬಂದಿದ್ದು ಈ ಬಗ್ಗೆ ಸಂಸ್ಥೆಗಳಲ್ಲಿ ತನಿಖೆ ನಡೆಸುವಂತೆ ಬಹರೇನ್ ಸರ್ಕಾರ ಆದೇಶ ನೀಡಿದೆ.
ಆದರೆ ಇನ್ನೊಂದು ಜನಪ್ರಿಯ ಪೇಯವಾದ ಕೋಕಾ ಕೋಲಾ ದ ಬಗ್ಗೆ ಈವರೆಗೂ ಯಾವುದೇ ಪತ್ರಿಕಾ ಪ್ರಕಟನೆ ನೀಡಲಾಗಿಲ್ಲ. ಆದರೆ ಪೆಪ್ಸಿ ಬೆಲೆ ಹೆಚ್ಚಳವಾದರೆ ಅದಕ್ಕನುಣವಾಗಿ ಬೇರೆಲ್ಲಾ ಸಂಸ್ಥೆಗಳೂ ಬೆಲೆ ಏರಿಸಬಹುದಾದ ಸಂಭವಗಳಿವೆ.