ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ಶಾರ್ಜಾ:"ಮಯೂರ" ಪ್ರಶಸ್ತಿಯ ಗರಿ ಮೂಡಿಸಿಕೊಂಡ ಗಣೇಶ್ ರೈ

ಶಾರ್ಜಾ:"ಮಯೂರ" ಪ್ರಶಸ್ತಿಯ ಗರಿ ಮೂಡಿಸಿಕೊಂಡ ಗಣೇಶ್ ರೈ

Fri, 13 Nov 2009 02:10:00  Office Staff   S.O. News Service
ಶಾರ್ಜಾ, ನವೆಂಬರ್ 13: ಈ ಬಾರಿಯ ಮಯೂರ ಪ್ರಶಸ್ತಿಯ ಗರಿಯು ಗಣೇಶ್ ರೈ ಅವರ ಕಿರೀಟಕ್ಕೆ ಏರಿಕೊಂಡಿದೆ. ಸಾಧನೆಯ ವ್ಯಕ್ತಿತ್ವದ ಓರ್ವ ಮಹನೀಯನಿಗೆ ಇಂತಹ ಪ್ರಶಸ್ತಿಯು ಅರ್ಪಿಸಿದಾಗ ಅದು ಸಾರ್ಥಕವೂ ಅನ್ನಿಸುತ್ತದೆ. ಆ ಪ್ರಶಸ್ತಿಗೂ ಮೆರಗು ಮೂಡುತ್ತದೆ.

ಗಣೇಶ್ ರೈ ಅವರು ಅರಬ್ ಸಂಯುಕ್ತ ಸಂಸ್ಥಾನಕ್ಕೆ ಕಾಲಿರಿಸಿ ಒಂದುವರೆ ದಶಕಗಳು ಕಳೆದವು. ಕೊಡಗಿನ ಆ ಹಸಿರಿನ ವನ ಸಿರಿಯನ್ನು ಕಾವೇರಿ ನದಿಯ ಜುಳು ಜುಳು ಶಬ್ಧವನ್ನು, ಚಿಲಿಪಿಲಿ ಹಕ್ಕಿಗಳ ಇಂಚರವನ್ನು ತ್ಯಜಿಸಿ ಅವರು ಕಾಡೆ ಇಲ್ಲದೆ ಈ ನಾಡಿಗೆ ಕಾಲಿರಿಸ್ಸಿದ್ದು ನಿಜಕ್ಕೂ ಆಶ್ಚರ್ಯ! ಕೊಡಗಿನ ಜನರು ಯುದ್ಧ ಭೂಮಿಯನ್ನು ಬಿಟ್ಟರೆ ಹೊರನಾಡಿಗೆ ಕಾಲಿರಿಸುವುದು ಬಲು ಅಪರೂಪ ಅವರು ನಾಡು ನುಡಿ- ಸಂಸ್ಕೃತಿಯೊಂದಿಗೆ ಒಂದಾಗಿ ಬೆರೆತು ಪ್ರಕೃತಿಯೊಂದಿಗೆ ಅನ್ಯೊನ್ಯವಾಗಿ ಬಾಳಿ ಬದುಕುವುದೇ ಅವರ ವಿಶೇಷ.

ಆದರೆ ಗಣೇಶ್ ರೈ ಈ ಬಿಸಿಲಧಾರೆಯ ಮರುಭೂಮಿಗೆ ಕಾಲಿರಿಸಿ ಮೋಸಮಾಡಲಿಲ್ಲ ಅದು ಇಲ್ಲಿ ನೆಲೆಸಿರುವ ಕನ್ನಡದ ಜನತೆಗೆ ಪ್ರಯೋಜನವೇ ಆಯಿತು.ಕಳೆದ ಹತ್ತಾರು ವರ್ಷಗಳಲ್ಲಿ ನಾವು ಯು. ಎ. ಇ. ಯ ಯಾವುದೇ ಸಭೆ ಸಮಾರಂಭಗಳ ವೇಧಿಕೆಯಾಗಲಿ, ನಾಟಕದ ರಂಗಭೂಮಿಯಾಗಲಿ, ನಾಟ್ಯದ ಮಂಟಪವಾಗಲಿ, ಪೂಜಾ ಮಂದಿರದ ಪೀಠವಾಗಲಿ ಅಲ್ಲಿ ಗಣೇಶ್ ರೈ ಅವರ ಕೈಚಳಕ ಎದ್ದು ಕಾಣುತ್ತದೆ.

ಪ್ರತಿಬಾರಿಯೂ ಹೊಸತನ ಹುಡುಕುವ ಇವರ ಸೃಜನಶೀಲತೆಯಲ್ಲಿ ಭವ್ಯ ಕೊಡುಗೆ ಇದ್ದೆ ಇರುತ್ತದೆ. ಹಿಂದೂ, ಮುಸ್ಲಿಮ್, ಕ್ರೈಸ್ತ ಸಂಘ ಸಂಸ್ಥೆಗಳಲ್ಲಿ ಲಾಂಛನ, ಸೃಷ್ಠಿ ಕಂಡಿರುವುದು ರೈ ಅವರ ಕಲೆಯಲ್ಲಿ. ಕರ್ನಾಟಕದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅವರ ಬ್ಯಾನರುಗಳು ವೇದಿಕೆಯಲ್ಲಿ ಅಲಂಕರಿಸಿಕೊಂಡಾಗ ಆ ವೇಧಿಕೆಯೂ ಗಲ್ಫ್ ನಾಡಿನ ವೇಧಿಕೆ ಅನ್ನುವುದಕ್ಕೆ ಅನುಮಾನ ಪಡಬೇಕು. ೨೦೦೪ರಲ್ಲಿ ನಡೆದ ಕರ್ನಾಟಕೋತ್ಸವದಲ್ಲಿ  ನಟ ವಿಷ್ಣುವರ್ಧನ್ ಸಂಗೀತ ಸಂಜೆ ಕಾರ್ಯಕ್ರಮ ನೀಡಲು ದುಬೈಗೆ ಆಗಮಿಸಿದಾಗ ಅಲ್ಲಿಯ ವೇದಿಕೆಯನ್ನು ಕಂಡು ದಂಗಾದರು. ಮೈಸೂರು ಅರಮನೆಯ ಬೃಹತ್ ಸೆಟ್ಟಿಂಗ್ಸ್ ಅವರನ್ನು ಮಾತ್ರವಲ್ಲ ನೆರೆದಿದ್ದ ಪ್ರೇಕ್ಷರನ್ನು ಬೆರಗು ಮೂಡಿಸಿತ್ತು.

ಪ್ರತಿಬಾರಿಯೂ ತುಳುಕೂಟದ ಹಬ್ಬವಾಗಲಿ ಅಥವಾ ಕನ್ನಡ ಸಾಹಿತ್ಯ ಸಮ್ಮೇಳನವೇ ಜರುಗಲಿ ಅಲ್ಲಿಯ ವೇಧಿಕೆಯನ್ನು ಕರ್ನಾಟಕದ ಕಲೆ ಸಂಸ್ಕೃತಿಯನ್ನು ಅಳವಡಿಸಿಕೊಂಡು ನಿರ್ಮಿಸುವ, ಅದಕ್ಕೊಂದು ಮಹಾಧ್ವಾರವನ್ನು ವಿನ್ಯಾಸ ಗೊಳಿಸುವುದು ಗಣೇಶ್ ರೈ ಅವರ ಪರಿಪಾಠ. ಎಲ್ಲೂ, ಯಾರಲ್ಲೂ, ಈ  ಶ್ರಮಕ್ಕೆ ಪ್ರತಿಪಲವನ್ನು ಅಪೇಕ್ಷಿಸದ ಅವರು ಇದು ನನ್ನ ತಾಯಿ ನಾಡಿನ ಸಂಸ್ಕೃತಿಗೆ ಕಿರು ಕಾಣಿಕೆಯೆಂದು ನಮೃತೆಯಿಂದ ನುಡಿಯುತ್ತಾರೆ.

ಸೂಕ್ಷ್ಮವಾಗಿ ಕಂಡಾಗ, ಮರು ಭೂಮಿಯಲ್ಲಿ ಈ ಬಿಸಿಲಿಗೆ ರೈ ಅವರ ಕಲಾ ನೈಪುಣ್ಯತೆಯ ಸೊಗಸು ಒಂದಿಷ್ಟು ಬಾಡಿದೆ. ಅದು ಇಲ್ಲಿಯ ಯಾಂತ್ರಿಕ ಬದುಕಿನ ಜಂಜಾಟವಾಗಿರಬಹುದು, ಅಥವಾ ಉದ್ಯೋಗದ ಒತ್ತಡವು ಆಗಿರಬಹುದು, ಅವರ ಕಲೆಯ ನಿಜವಾದ ಪ್ರತಿಭೆಯನ್ನು ಕಾಣಬೇಕಾದರೆ ನಾವು ಮತ್ತೆ ಕೊಡಗಿನತ್ತ ಹಿಂತಿರುಗಿ ನೋಡಬೇಕು. ಅಲ್ಲಿ ಅವರು ರಚಿಸಿದ ನೂರಾರು ಕಲಾಕೃತಿಗಳು ಶಿಲೆ, ಸಿಮೆಂಟ್, ಕಾಷ್ಠ ಶಿಲ್ಪಗಳು, ಪ್ಲಾಸ್ಟರ್ ಅಫ್ ಪ್ಯಾರಿಸ್ ಪೇಪರ್ ಪಲ್ಪ್ ಕಲಾಕೃತಿಗಳು, ಅನೇಕ ದೇವಾಲಯಗಳಲ್ಲಿ, ಇಗರ್ಜಿಗಳಲ್ಲಿ ಪೂಜಿಸಲ್ಪಡುತ್ತದೆ. ಮಡಿಕೇರಿ ದಸರ ಉತ್ಸವದಲ್ಲಿ ವಿವಿಧ ಭಂಗಿಗಳಲ್ಲಿ ದೇವತಾ ಮೂರ್ತಿಗಳು ಲಕ್ಷಾಂತರ ಜನರನ್ನು ಆಕರ್ಷಿಸಿವೆ. ಮಡಿಕೇರಿಯ ಹೃದಯ ಭಾಗದಲ್ಲಿ ಅನಾವರಣಗೊಂಡಿರುವ ಕಾವೇರಿ ಮಾತೆಯ ಶಿಲ್ಪ ಗಣೇಶ್ ರೈ ಯವರ ಕಲಾ ಪ್ರೌಡಿಮೆಗೆ ಸಾಕ್ಷಿಯಾಗಿದೆ.

ಕೊಡಗಿನಲ್ಲಿ ಪ್ರಥಮ ಬಾರಿಗೆ ವರ್ಣರಂಜಿತ ಅಫ್ ಸೆಟ್ ಮುದ್ರಣದಲ್ಲಿ ಕಾವೇರಿ ಮಾತೆಯ ಚಿತ್ರವನ್ನು ಶಿವಕಾಶಿಯಲ್ಲಿ ಮುದ್ರಿಸಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ನವರಿಂದ ಬಿಡುಗಡೆ ಮಾಡಿಸಿದ್ದು, ತಲಕಾವೇರಿ, ತೀರ್ಥಕುಂಡಿಕೆ, ಕೊಡಗಿನ ರಮಣೀಯ ದೃಶ್ಯಗಳ ಪಿಕ್ಚರ್ ಕಾರ್ಡ್, ಗ್ರೀಟಿಂಗ್ಸ್, ಪೋಸ್ಟರುಗಳನ್ನು ಕೊಡಗಿಗೆ ಬರುವ ಪ್ರವಾಸಿಗರಿಗೆ ಲಭ್ಯವಾಗಿದೆ. ಜಯಪ್ರಕಾಶ್ ನಾರಾಯಣ ರವರ ತೈಲವರ್ಣ ಚಿತ್ರ ಇಂದಿಗೂ ಮಾಜಿ ಪ್ರಧಾನಿ ವಾಜಪೇಯಿಯವರ ಸಂಗ್ರಹದಲ್ಲಿದೆ. ಇನ್ನು ಹಲವಾರು ತೈಲವರ್ಣ ಜಲವರ್ಣ ಚಿತ್ರಗಳು ಅಮೇರಿಕಾ, ಪ್ರಾನ್ಸ್, ಅಸ್ಟ್ರೇಲಿಯಾ ಹಾಗೂ ಗಲ್ಫಿನಲ್ಲಿದೆ. ಈ ಕಾರಣಕ್ಕಾಗಿಯೇ ಗಣೇಶ್ ರೈ ಯವರಿಗೆ ಅನೇಕ ಪ್ರಶಸ್ತಿಗಳು, ಸನ್ಮಾನಗಳು ಕೈ ಬೀಸಿ ಕರೆದಿದೆ. ಅದರಲ್ಲಿ ಪ್ರಥಮಬಾರಿಗೆ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪನವರಿಂದ ಪಡೆದ ಸನ್ಮಾನ ಕಲಾ ಜೀವನದಲ್ಲಿ ಪಡೆದ ಪ್ರಥಮ ಸನ್ಮಾನವಾಗಿದೆ. ಶ್ರೀ ಕ್ಶೇತ್ರ ಧರ್ಮಸ್ಥಳದಿಂದ ಚಿನ್ನದ ಪಧಕ, ಕರ್ನಾಟಕ ಪೋಲಿಸ್ ಇಲಾಖೆ, ಕರ್ನಾಟಕ ವಿದ್ಯುತ್ಚಕ್ತಿ ಮಂಡಲಿ, ಲಲಿತಕಲಾ ಅಕಾಡೆಮಿ, ಮಡಿಕೇರಿ ದಸರಾ ಉತ್ಸವ ಸಮಿತಿ, ಇನ್ನು ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ, "ಶಿಲ್ಪಕಲಾ ರತ್ನ" "ಕಲಾ ಪ್ರವೀಣ" "ಕಲಾ ಕಿರಣ" ಮುಂತಾದ ಬಿರುದನ್ನು ಪಡೆದಿದ್ದಾರೆ.


ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ, ಕೊಡಗು ಕಲಾ ಪರಿಷತ್ ನ ಅಧ್ಯಕ್ಷರಾಗಿ, ಇನ್ನಿತರ ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಅಪಾರ ಅನುಭವ ಹೊಂದಿದ್ದ ವ್ಯಕ್ತಿತ್ವ ರೈ ಯವರದು. ಉತ್ತಮ ಭಾಷಣಕಾರ ಹಾಗೂ ಸಂಘಟಕನೂ ಹೌದು.

ಶ್ರೀ ಕೃಷ್ಣಪ್ಪ ರೈ ಮತ್ತು ಶ್ರೀಮತಿ ತುಳಸಿಯಮ್ಮ ದಂಪತಿಗಳ ಸುಪುತ್ರರಾದ ಗಣೇಶ್ ರೈ ಅವರು ಕಲೆಯ ಕುರಿತು ಬಾಲ್ಯದಲ್ಲೇ ಆಸಕ್ತಿ ಬೆಳೆಸಿ ಬೆಳೆದವರು. ಮುಂದೆ ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಮುಗಿಸಿ, ಚಿತ್ರಕಲೆಯಲ್ಲಿ  ಮಾಸ್ಟರ್ ಅಫ್ ಫೈನ್ ಆರ್ಟ್ಸ್ ಪದವಿಯನ್ನು ಪಡೆದು, ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು, ಶಿಕ್ಷಣ ಕ್ಷೇತ್ರದಲ್ಲಿಯೂ ಸಾಧನೆ ಮಾಡಿ ಕರ್ನಾಟಕ ರಾಜ್ಯ "ಅತ್ಯುತ್ತಮ ಶಿಕ್ಷಕ ಪ್ರಶಸ್ತಿ" ಪಡೆದು ಜನ ಮಾನ್ಯರಾಗಿದ್ದಾರೆ.

ಗಣೇಶ್ ರೈಯವರು ವೃತ್ತಿಯಲ್ಲಿ ಕ್ರಿಯಾತ್ಮಕ ಕಲಾ ನಿರ್ದೇಶಕರಾಗಿ, ಪ್ರವೃತಿಯಲ್ಲಿ ಎಲ್ಲಾ ಸಂಘ ಸಂಸ್ಥೆಗಳೊಂದಿಗೆ ಉತ್ತಮ ಭಾಂದವ್ಯ ಇಟ್ಟುಕೊಂಡಿದ್ದಾರೆ. ಸ್ವಯಂ ಶಾರ್ಜಾ ಕರ್ನಾಟಕ ಸಂಘದಲ್ಲಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅನೇಕ ಹೊಸ ಮಾದರಿಯನ್ನು ಹಾಕಿಕೊಟ್ಟವರು. ಅದೇ ರೀತಿ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಸಾಧನೆ ಮಾಡಿರುವ ಕನ್ನಡಿಗರ ಸಂದರ್ಶನ ಮತ್ತು ಕರ್ನಾಟಕ ಪರ ಎಲ್ಲಾ ಸಂಘಟನೆಗಳ ಪೂರ್ಣ ಮಾಹಿತಿಯನ್ನು ಒಳಗೊಂಡಿರುವ ಸುಂದರ ಸ್ಮರಣ ಸಂಚಿಕೆ "ಸಾಧನೆ" ಕನ್ನಡ ಭಾಷೆಯಲ್ಲಿ ಶಾರ್ಜಾದಲ್ಲಿ ಮುದ್ರಿಸಿ ಪ್ರಕಟಿಸಿದ್ದಾರೆ.

ಶ್ರೀಮತಿ ಮಂಜುಳಾ ರೈ ಇವರ ಧರ್ಮ ಪತ್ನಿ, ಮೋನಿಶ್ ರೈ ಮತ್ತು ಐಶ್ವರ್ಯ ರೈ ಇವರ ಪ್ರೀತಿಯ ಬಳ್ಳಿಯ ಹೂವುಗಳು.ಈ ಪುಟ್ಟ ಕುಟುಂಬಕ್ಕೆ ಇದೀಗ "ಮಯೂರ ಪ್ರಶಸ್ತಿ" ಸಿಕ್ಕಿರುವುದು ಅವರಿಗೆ ಮಾತ್ರವಲ್ಲ ಅವರ ಅಪಾರ ಸ್ನೇಹಿತರು, ಬಂದು ಮಿತ್ರರು ಮತ್ತು ಎಲ್ಲಾ ಕನ್ನಡಿಗರಿಗೆ ಸಂತೋಷದ ಸುದ್ದಿ. ನವಂಬರ್ ೧೩ ನೇ ತಾರೀಕು ಅಜ್ಮಾನ್ ಏಶ್ಯನ್ ಪ್ಯಾಲೇಸ್ ಸಭಾಂಗಣದಲ್ಲಿ ಕರ್ನಾಟಕ ಸಂಘ ಶಾರ್ಜದ ೭ನೇ ವಾರ್ಷಿಕೋತ್ಸವ, ರಾಜ್ಯೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ "ಮಯೂರ ಪ್ರಶಸ್ತಿ" ಸ್ವೀಕರಿಸುವ ಗಣೇಶ್ ರೈ ಯವರಿಗೆ ಗಲ್ಫ್ ಕನ್ನಡ ದ ಪರವಾಗಿ ಶುಭ ಹಾರೈಕೆಗಳು.

Share: