ಮಕ್ಕಾ:(ಸೌದಿ ಅರೇಬಿಯಾ) ನವೆಂಬರ್ ೩೦: ಹಜ್ ಯಾತ್ರಾರ್ಥಿಗಳು ದೇಶದ ಏಕತೆ ಮತ್ತು ಅಭಿವೃದ್ದಿಗಾಗಿ ಪವಿತ್ರ ಕಾಬಾ ಮಸೀದಿಯಲ್ಲಿ ಪ್ರಾರ್ಥಿಸುವಂತೆ ಮುಸ್ಲಿಂ ಲೀಗ್ ಕೇರಳ ಘಟಕದ ರಾಜ್ಯಾಧ್ಯಕ್ಷ ಜನಾಬ್ ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಗಲ್ ಭಾರತೀಯ ಹಜ್ ಯಾತ್ರಾರ್ಥಿಗಳಿಗೆ ಕರೆ ನೀಡಿದರು.
ಭಾರತೀಯ ಹಜ್ ಸೌಹಾರ್ದ ಸಮಿತಿಯ ನಿಯೋಗದಲ್ಲಿ ಇಲ್ಲಿಗೆ ಆಗಮಿಸಿದ್ದ ಅವರು ಭಾರತೀಯ ಯಾತ್ರಾರ್ಥಿಗಳನ್ನು ಭೇಟಿ ಮಾಡಿ ಮಾತನಾಡುತಿದ್ದರು. ಸೌದಿ ಸರ್ಕಾರ ಮತ್ತು ಭಾರತೀಯ ದೂತಾವಾಸ ಹಜ್ ಯಾತ್ರಿಕರಿಗೆ ಕೈಗೊಂಡ ಕಾರ್ಯಕ್ರಮಗಳನ್ನು ಶ್ಲಾಘಿಸಿದ ಅವರು ಯಾವುದೇ ಅಡೆತಡೆಗಳಿಲ್ಲದೆ ಹಜ್ ಕರ್ಮವನ್ನು ಯಶಸ್ವಿಯಾಗಿ ನಿಭಾಯಿಸಿದ್ದಕ್ಕಾಗಿ ಇಲ್ಲಿನ ಆಡಳಿತ ವರ್ಗವನ್ನು ಅಭಿನಂದಿಸಿದರು.
ಈ ಮಧ್ಯೆ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಸೌದಿ ಅರೇಬಿಯಾದ ಆಡಳಿತಾಧಿಕಾರಿ ಕಿಂಗ್ ಅಬ್ದುಲ್ಲಾ ಹಜ್ ಕರ್ಮಗಳು ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗಿ ನಡೆದುದಕ್ಕಾಗಿ ಅಲ್ಲಾಹನಿಗೆ ಸ್ತುತಿ ಅರ್ಪಿಸಿದರು. ಈ ಕಾರ್ಯದಲ್ಲಿ ಕೈಜೋಡಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ ಅವರು ಮುಂಬರುವ ದಿನಗಳಲ್ಲಿ ಹಜ್ ಯಾತ್ರಿಕರ ಅನುಕೂಲಕ್ಕಾಗಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.
ಈ ಮಧ್ಯೆ ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದ ಗುಜರಾತ್ ಮೂಲದ ವಯೋವೃದ್ಧ ಹಜ್ ಯಾತ್ರಾರ್ಥಿ ಮೊಹಮ್ಮದ್ ಯೂಸುಫ್ ರವರನ್ನು ಮೀನಾ ಸಮೀಪದ ಕಿಂಗ್ ಖಾಲಿದ್ ಸೇತುವೆಯ ಕೆಳಭಾಗದ ನಡುವೆ ಅರೆಪ್ರಜ್ಞಾವಸ್ಥೆಯಲ್ಲಿ ಇಂಡಿಯಾ ಫ್ರಟೆರ್ನಿಟಿ ಫೋರಮಿನ ಸದಸ್ಯರು ಪತ್ತೆ ಹಚ್ಚಿದರು. ಕೂಡಲೇ ಅವರಿಗೆ ಭಾರತೀಯ ಹಜ್ ಮಿಶನಿನ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿದ ಈ ಸ್ವಯಂ ಸೇವಕರು ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಕ್ಕಾ ಆಸ್ಪತ್ರೆಗೆ ಕಳುಹಿಸಿಕೊಟ್ಟರು.
ವರದಿ : ಅಶ್ರಫ್ ಮಂಜ್ರಾಬಾದ್.