ಇಂದು ವಿಕೃತಿ ನಾಮ ಸಂವತ್ಸರ ಬಿದಿಗೆ ಬುಧವಾರ ಕರ್ನಾಟಕದಲ್ಲಿ ಭಯಂಕರ ದೊಡ್ಡ ಹಬ್ಬ. ನಿನ್ನೆಯ ಪಾಡ್ಯದ ದಿನ ಬೇವು ಬೆಲ್ಲ ಸವಿದು, ದೇವಸ್ಥಾನಗಳಿಗೆ ಪ್ರದಕ್ಷಿಣೆ ಹಾಕಿ ಹೋಳಿಗೆ ಚಿತ್ರಾನ್ನ ತಿಂದು ಸಪ್ಪಗೆ ಮಲಗಿದವರು ಇಂದು ಕೋಳಿ ಕೂಗುವ ಮುಂಚೆಯೇ ಎದ್ದು ಚುರುಕಾಗಿದ್ದಾರೆ. ಸಿಹಿ ತಿಂದು ಟೇಸ್ಟ್ ಬಡ್ಸುಗಳ ಜಾತಿ ಕೆಡಿಸಿಕೊಂಡ ಮಾಂಸಾಹಾರಿ ನಾಲಗೆಗಳು ಇವತ್ತು ಖಾರಾ ಅಡುಗೆಗಳ ರುಚಿ ನೋಡಲು ಹಾತೊರೆಯುತ್ತಿವೆ.
ಮಟನ್ ಬಿರಿಯಾನಿಗಳೇನು, ಚಿಕನ್ ಡ್ರೈಗಳೇನು, ಪಿಶ್ ಫ್ರೈಗಳೇನು, ಬೇಯಿಸಿದ ಕೋಳಿಮೊಟ್ಟೆಗಳೇನು, ನಾನ್ ವೆಜ್ ಪದಾರ್ಥಗಳನ್ನು ಹೊಟ್ಟೆಯೊಳಗೆ ಯಥಾನುಶಕ್ತಿ ಇಳಿಸುತ್ತಿದ್ದಾರೆ. ಖಾರಾ ಮಸಾಲೆ ಅರೆದು ಹಳ್ಳಿಮನೆ ಹೆಂಗಸರ ರಟ್ಟೆಗಳು ಬಿದ್ದು ಹೋಗಿವೆ. ಮಟನ್ ಪೀಸುಗಳ ಜತೆಗೆ ಒಂದೆರಡು ಶೀಶೆ ಬೀರು, ಬ್ರಾಂದಿ, ವಿಸ್ಕಿ ಅಥವಾ ದೇವರು ಇವತ್ತು ಏನು ಕರುಣಿಸಿದ್ದಾನೋ ಅದರ ಸೇವೆ ಅಬಾಧಿತವಾಗಿ ಸಾಗಿದೆ. ಎಷ್ಟೋ ಜನಕ್ಕೆ ಪಾಡ್ಯದ ದಿನದಂದು ಬಿದ್ದ ಬಿದಿಗೆಯ ಕನಸುಗಳು ಇವತ್ತು ನನಸಾಗುತ್ತಿವೆ.
ಇಂದು ಆಚರಿಸುವ ಹಬ್ಬದ ಹೆಸರು ತಡಕು ಅಥವಾ ಹೊಸ ತಡಕು ಅಥವಾ ಹೊಸವರ್ಷದ ತಡಕು. ಯುಗಾದಿ ಹಬ್ಬದ ಮಾರನೆ ದಿನ ಬೀಳುವ ಹಬ್ಬ. ಈ ಹಬ್ಬಕ್ಕೆ ಹೇಳಿಕೊಳ್ಳುವಂತಹ ಯಾವ ಪುರಾಣ, ಇತಿಹಾಸದ ಸಪೋರ್ಟಿಂಗ್ ಡಾಕ್ಯೂಮೆಂಟುಗಳಿಲ್ಲ. ಕೆಲವರು ಈ ದಿನವನ್ನು ವರ್ಷದ ತೊಡಕು ಎಂದು ಹೇಳುವುದೂ ಉಂಟು. ಸಸ್ಯಾಹಾರಿ ಪರಂಪರೆ ಇರುವ ಮನೆಗಳಲ್ಲೂ ತಡಕು ಆಚರಿಸುತ್ತಾರೆ. ಇಂದು ನಾವು ಮಾಡುವ ಯೋಚನೆಗಳು, ಕೆಲಸ ಕಾರ್ಯಗಳು ಉತ್ತಮ ರೀತಿಯಲ್ಲಿದ್ದರೆ ವರ್ಷ ಪೂರ್ತಿ ಅವು ಹಾಗೇ ನಮ್ಮನ್ನು ಕೈ ಹಿಡಿದು ನಡೆಸುತ್ತವೆ ಎಂಬ ನಂಬಿಕೆ ನೆಲೆಯಾಗಿದೆ.
ನಾನು ಇಂದು ಕರೆ ಮಾಡಿದ ಹತ್ತು ಜನರ ಪೈಕಿ ಸರಾಸರಿ ಆರು ಜನ ವರ್ಷದ ತಡಕು ಆಚರಿಸುತ್ತಿದ್ದಾರೆ. ಫೋನುಗಳು ನಾಟ್ ರೀಚಬಲ್ ಅಥವಾ ಸ್ವಿಚ್ ಆಫ್ ಆಗಿವೆ. ಸರಕಾರಿ ಕಚೇರಿಗಳಲ್ಲಿ ಹಾಜರಾತಿ ಪ್ರತೀ ವರ್ಷದಂತೆ ಇವತ್ತೂ ತೀರಾ ಕಡಿಮೆ. ಕೆಲವರು ಕಚೇರಿಗೆ ನಾಮಕಾವಾಸ್ಥೆ ಹೋಗಿ ಅಟೆಂಡೆನ್ಸ್ ಹಾಕಿ ನಾಪತ್ತೆಯಾದರೆ ಇನ್ನು ಕೆಲವರು ನಿನ್ನೆ ರಾತ್ರಿಯೇ ನಗರ ಬಿಟ್ಟು ಹಳ್ಳಿ ಜೀವನ ಶೈಲಿಯ ವಾಸನೆ ಹಿಡಿದು ಬಸ್ಸು ಕಾರು ಹತ್ತಿ ಹೊರಟುಹೋಗಿದ್ದಾರೆ.
ಮಾಂಸ ತಿನ್ನುವುದಕ್ಕೆ, ಹೆಂಡ ಕುಡಿಯುವುದಕ್ಕೆ ಮತ್ತು ಇಸ್ಪೀಟು ಆಟ ಆಡುವುದಕ್ಕೇ ಇರುವ ಹಬ್ಬ ಇದು ಎಂದು ಅನೇಕರು ನಂಬುತ್ತಾರೆ. ಯುಗಾದಿಯ ಸಂಜೆಯೇ ಅನೇಕ ಕಡೆಗಳಲ್ಲಿ ರಸ್ತೆರಸ್ತೆಗಳಲ್ಲಿ ಗುಂಪುಗುಂಪಾಗಿ ಇಸ್ಪೀಟು ಆಟವಾಡಿದ್ದಾರೆ. ಬಡವರ ಮನೆಗಳಲ್ಲಿ ಕಾಲು ಕೇಜಿ ಲಿವರ್ ಮಾಂಸದಿಂದ ಅಡುಗೆ ಶಾಸ್ತ್ರ ಮುಗಿದರೆ ಶ್ರೀಮಂತರ ಮನೆಗಳಲ್ಲಿ ಬಾಡೂಟದ ಮಾರಣ ಹೋಮಗಳೇ ನಡೆಯುತ್ತವೆ. ಊರ ಹೊರಗಿರುವ ತೋಟ, ರೆಸಾರ್ಟುಗಳಲ್ಲಿ ನಿನ್ನೆ ರಾತ್ರಿಯಿಂದಲೇ ಅಹೋರಾತ್ರಿ ಪಾರ್ಟಿಗಳು ನಡೆಯುತ್ತಿವೆ. ರಾಜರಾಜೇಶ್ವರಿ ನಗರದಲ್ಲಿ ವಾಸವಾಗಿರುವ ಒಬ್ಬ ಶಾಸಕರು ಕನಕಪುರದಂಚಿನಲ್ಲಿ ಹೊಂದಿರುವ ಎರಡು ಎಕರೆ ಫಾರಂ ಹೌಸಿನಲ್ಲಿ ನಿನ್ನೆ ರಾತ್ರಿಯಿಂದ ನಾಲಕ್ಕು ಯಾಮದ ಬಾಡೂಟ, ಡ್ರಿಂಕ್ಸ್ ಪಾರ್ಟಿ ಮತ್ತು ಹೈ ಸ್ಟೇಕ್ಸ್ ಇಸ್ಪೀಟು ಆಟಗಳನ್ನು ಮುತವರ್ಜಿಯಿಂದ ವ್ಯವಸ್ಥೆ ಮಾಡಿದ್ದಾರೆ.
ಈ ವರ್ಷದ ತಡಕು ಹಬ್ಬಕ್ಕೆ ಚುನಾವಣೆಯ ರಂಗು ಬೇರೇ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ ಮೊನ್ನೆ ಮಂಗಳವಾರ ಸಂಜೆಗೆ ಮುಕ್ತಾಯ ಕಂಡಿದೆ. ಆ ಕ್ಷಣದಿಂದಲೇ ಆರಂಭವಾದ ಕೆಲವು ಪಕ್ಷಗಳ ಅಭ್ಯರ್ಥಿಗಳ ತಡಕು ಪಾರ್ಟಿಗಳು ಗುರುವಾರ ಬೆಳಗಿನ ಜಾವದವರೆಗೂ ನಡೆಯುತ್ತವೆ. ವಾರ್ಡಿನಲ್ಲಿ ಗೆಲ್ಲಲೇಬೇಕೆಂದು ಪಣತೊಟ್ಟ ಅಭ್ಯರ್ಥಿಯೊಬ್ಬ ಕನಿಷ್ಠ 5 ಕೋಟಿ ರು.ಗಳನ್ನು ನಂದಲ್ಲಾ ಎಂದು ತೆಗೆದಿಡಬೇಕಾಗಿರುವ ಪರಿಸ್ಥಿತಿ ಇರುವಾಗ ಪಾರ್ಟಿ ವರ್ಕರ್ಸ್ ಗೆ ಬಾಡೂಟ ಹಾಕಿಸುವ ಖರ್ಚೂ ಸೇರಿಕೊಂಡು ಜೇಬುಗಳು ಕಚ್ಚುತ್ತಿದೆ.
ಮಟನ್ ಮಾರ್ಕೆಟ್ಟಿನಲ್ಲಿ ರೇಟುಗಳು ಸಂಪ್ರದಾಯದ ಪ್ರಕಾರದಂತೆಯೇ ಜಾಸ್ತಿಯಾಗಿವೆ. ಕೆಜಿಗೆ 240 ರುಪಾಯಿ ಇದ್ದದ್ದು ತಡಕು ಹಬ್ಬದ ಪ್ರಯುಕ್ತ 280 ರಿಂದ 300 ರು.ಪಾಯಿವರೆಗೆ ದಾಟಿದೆ. ಮಾಂಸದ ರೇಟುಗಳು ಕುರಿಯ ವಯಸ್ಸು, ಆರೋಗ್ಯ ಮತ್ತು ಮಾಂಸದ ಕ್ಯಾರೆಟ್ ಮೇಲೆ ನಿಂತಿರುತ್ತದೆ. ಜುಜೂಬಿ ಫಾರಂ ಕೋಳಿ ರೇಟೇ 100 ರುಪಾಯಿ ಮುಟ್ಟಿದೆ ಎಂದರೆ ಇನ್ನು ಏನು ಹೇಳಕ್ಕಾಗತ್ತೆ?
ಒಟ್ಟಾರೆ ಅನೇಕರಿಗೆ ಇವತ್ತು ನಿಜವಾದ ಯುಗದ ಆದಿ, ಯುಗಾದಿ. ಅಬಕಾರಿ ಇಲಾಖೆಗೆ, ವೈನ್ ಸ್ಟೋರುಗಳಿಗೆ ವರ್ಷಾವರಿ ಹಬ್ಬದ ಬಂಪರ್ ಕಲೆಕ್ಷನ್. ಇದರ ಜತೆಗೆ, ಇವತ್ತಿನ ಮಾಂಸದ ಮಾರುಕಟ್ಟೆಯನ್ನು ಗಮನದಲ್ಲಿಟ್ಟೇ ಕೊಬ್ಬಿದ ಕುರಿಯನ್ನು ಹಲಾಲ್ ಅಂಗಡಿತನಕ ಹಳ್ಳಿಯಿಂದ ಹೊಡೆದುಕೊಂಡು ನಡೆದುಕೊಂಡು ಬಂದ ಕುರುಬ ನಾಲಕ್ಕು ಕಾಸು ಎಣಿಸುತ್ತಾನೆ. ಅಲ್ಲಿಗೆ ಎರಡು ದಿನದ ಚಾಂದ್ರಮಾನ ಯುಗಾದಿಯ ಕೊನೆ ಹಾಡು ಕೇಳಿಸುತ್ತದೆ. ನಾಳೆ ತದಿಗೆ. ಅಂಥ ವಿಶೇಷವೇನೂ ಇಲ್ಲ.
ಶಾಮಿ
ಸೌಜನ್ಯ ದಟ್ಸ್ ಕನ್ನಡ