ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ವಿಶೇಷ ಪುಟ / ರೆಡ್ಡಿ ಕೋರ್ಟಿಗೆ ಹಾಜರಾಗಲಿ : ಟಪಾಲ್ ಗಣೇಶ್ ಸವಾಲ್

ರೆಡ್ಡಿ ಕೋರ್ಟಿಗೆ ಹಾಜರಾಗಲಿ : ಟಪಾಲ್ ಗಣೇಶ್ ಸವಾಲ್

Thu, 29 Apr 2010 13:52:00  Office Staff   S.O. News Service
ಬಳ್ಳಾರಿ, ಏ. 29 : ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡುತ್ತಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ ಆಗಬೇಕು ಎಂದು ತುಮಟಿ ಮೈನಿಂಗ್ ಕಂಪನಿ ಗುತ್ತಿಗೆದಾರ ಟಪಾಲ್ ಗಣೇಶ್ ಅವರು ಆಗ್ರಹಿಸಿದ್ದಾರೆ.

ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ಅರಣ್ಯಾಧಿಕಾರಿ ಎನ್. ಮುತ್ತಯ್ಯ ಹಾಗೂ ಪೊಲೀಸ್ ಅಧಿಕಾರಿಗಳು ಐಬಿಎಂನ ಆದೇಶಗಳನ್ನು ಪಾಲಿಸದೇ ಅಕ್ರಮ ಗಣಿಗಾರಿಕೆಗೆ ಮುಕ್ತ ಅವಕಾಶವನ್ನು ಕಲ್ಪಿಸಿದ್ದಾರೆ. ಅಲ್ಲದೇ, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆ ಆಗಬೇಕು ಎಂದರು.

ಲೋಕಾಯುಕ್ತ ಅಧಿಕಾರಿ ಸಿ. ಪಾಣಿಗ್ರಹಿ ಮತ್ತು ಯು.ವಿ. ಸಿಂಗ್ ನೇತೃತ್ವದ ತಂಡ ಹೊಸಪೇಟೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೇಲೆ ಧಾಳಿ ನಡೆಸಿ, ಅನಧಿಕೃತ ಸ್ಟಾಕ್‌ಯಾರ್ಡ್‌ಗಳ ಮೇಲೆ ಧಾಳಿ ನಡೆಸಿದ್ದು ತಮ್ಮ ಸುಧೀರ್ಘ ಕಾಲದ ಹೋರಾಟಕ್ಕೆ ಸಂದ ಜಯ ಎಂದರು.

ಉಲ್ಲಂಘನೆ : 2006ರ ಗಡಿ ಧ್ವಂಸ ಪ್ರಕರಣ ಕುರಿತು ಸಂಡೂರು ಜೆಎಂಎಫ್‌ಸಿ ನ್ಯಾಯಾಲಯ ಸಚಿವ ಜಿ. ಜನಾರ್ಧನರೆಡ್ಡಿಗೆ ನೀಡಿದ ವಾರೆಂಟ್ ವಿಷಯದ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರ ಸಚಿವ ಸಂಪುಟ ಹಿಂಪಡೆದು ನ್ಯಾಯಾಂಗ ಉಲ್ಲಂಘನೆ ಮಾಡಿದ್ದರಿಂದ ಕಾನೂನು ವ್ಯವಸ್ಥೆಗೆ ಭಂಗವಾಗಿದೆ ಎಂದು ಆರೋಪಿಸಿದರು. ಸಚಿವ ಜಿ. ಜನಾರ್ಧನರೆಡ್ಡಿಗೆ ನ್ಯಾಯಾಂಗದ ಮೇಲೆ ಗೌರವಿದ್ದರೆ ಸಂಡೂರಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರಾಗಲಿ ಎಂದು ಸವಾಲು ಹಾಕಿದರು.

ಪತ್ತೆಯಾಗಿಲ್ಲ : ಸಚಿವ ಬಿ. ಶ್ರೀರಾಮುಲು ಅವರಿಗೆ ಜೀವಬೆದರಿಕೆ ಹಾಕಿದ ಆರೋಪಿಗಳನ್ನು ಪೊಲೀಸರು ಕೇವಲ ಎರಡೇ ದಿನಗಳಲ್ಲಿ ಬಂಧಿಸಿ ಕರ್ತವ್ಯ ಪ್ರಜ್ಙೆ ತೋರಿದ್ದಾರೆ. ಆದರೆ, ನನ್ನ ಮೇಲೆ ನಡೆದ ಹಲ್ಲೆಯ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಮೀನಮೇಷ ಎಣಿಸುತ್ತಿರುವುದು ನಾಚಿಗೇಡಿನ ಸಂಗತಿ ಎಂದು ದೂರಿದರು.

 



Share: