ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ವಿಶೇಷ ಪುಟ / ಬೆಂಗಳೂರು: ರೈತರ ಜಮೀನು ಸ್ವಾಧೀನ ಪಡಿಸದಿರಲು ಸಂಪುಟಸಭೆಯಲ್ಲಿ ಒತ್ತಾಯಿಸುವೆ - ಕೃಷಿ ಸಚಿವ ಎಸ್.ಎ. ರವೀಂದ್ರನಾಥ್

ಬೆಂಗಳೂರು: ರೈತರ ಜಮೀನು ಸ್ವಾಧೀನ ಪಡಿಸದಿರಲು ಸಂಪುಟಸಭೆಯಲ್ಲಿ ಒತ್ತಾಯಿಸುವೆ - ಕೃಷಿ ಸಚಿವ ಎಸ್.ಎ. ರವೀಂದ್ರನಾಥ್

Wed, 17 Feb 2010 16:11:00  Office Staff   S.O. News Service

ಬೆಂಗಳೂರು,ಫೆಬ್ರವರಿ 17: ರೈತರ ಫಲವತ್ತಾದ ಕೃಷಿ ಜಮೀನನ್ನು ಸ್ವಾಧೀನ ಮಾಡಿಕೊಳ್ಳಬಾರದು ಎಂದು ಬರುವ ಸಚಿವ ಸಂಪುಟ ಸಭೆಯಲ್ಲಿ ಒತ್ತಾಯ ಮಾಡುವುದಾಗಿ ಕೃಷಿ ಸಚಿವ ಎಸ್.ಎ. ರವೀಂದ್ರನಾಥ್ ಇಂದಿಲ್ಲಿ ತಿಳಿಸಿದ್ದಾರೆ.

 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಉದ್ದೇಶಿತ ಕೈಗಾರಿಕೆಗಳಿಗೆ ಭೂ ಸ್ವಾಧೀನ ಮಾಡಿಕೊಂಡು ಬಳಕೆಯಾಗದೇ ಉಳಿಯುವ ಜಾಗವನ್ನು ಮನೆ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವ ಮಸೂದೆಯನ್ನು ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ ಮಾಡಲು ಚಿಂತನೆ ನಡೆಸಿರುವುದಾಗಿ ಹೇಳಿದರು.

 

ಅನಗತ್ಯವಾಗಿ ಭೂ ಸ್ವಾಧೀನ ಬೇಡವೆಂದು ಹೋರಾಟ ಮಾಡುತ್ತಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಮ್ಮ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸುಮಾರು ೩೦೦೦ ಕ್ಕೂ ಹೆಚ್ಚು ಭೂಮಿಯನ್ನು ಸ್ವ್ವಾಧೀನ ಪಡಿಸಿಕೊಳ್ಳಲು ನಿನ್ನೆ ಅಂತಿಮ ಅಧಿಸೂಚನೆ ಹೊರಡಿಸಿರುವ ಕ್ರಮದ ಬಗ್ಗೆ ಚಕಾರ ಎತ್ತುತ್ತಿಲ್ಲ. ಹಾಸನಕ್ಕೆ ಒಂದು ಕಾನೂನು ಬೇರೆ ಪ್ರದೇಶಗಳಿಗೆ ಇನ್ನೊಂದು ಕಾನೂನು ಎಂಬ ರೀತಿಯಲ್ಲಿ ಅವರು ಪ್ರತಿಭಟನೆ ನಡೆಸಿದ್ದಾರೆ ಎಂದು ರವೀಂದ್ರನಾಥ್ ದೇವೇಗೌಡರ ಹೋರಾಟಕ್ಕೆ ತಿರುಗೇಟು ನೀಡಿದರು.

 

ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಅಕಾಲಿಕ ಮಳೆಯಿಂದ ಕೃಷಿ ಉತ್ಪಾದನೆಯಲ್ಲಿ ಶೇ. 10 ರಷ್ಟು ಕಡಿಮೆಯಾಗಲಿದೆ. ಕಳೆದ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಉತ್ತರ ಕರ್ನಾಟಕ ಸೇರಿದಂತೆ ೧೫ ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜಲಪ್ರಳಯದಿಂದಾಗಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಇಳಿಮುಖ ವಾಗಲಿದೆ ಎಂದರು.

 

 

ಈ ವರ್ಷ ೧೦೮.೩೫ ಲಕ್ಷ ಟನ್ ಆಹಾರ ಉತ್ಪಾದನೆಯ ಗುರಿ ಹಮ್ಮಿಕೊಳ್ಳಲಾಗಿತ್ತು. ಆದರೆ ಜಲಪ್ರಳಯದಿಂದ ಸುಮಾರು ೯೮ ಲಕ್ಷ ಟನ್ ಆಹಾರ ದಾನ್ಯ ಉತ್ಪಾಧನೆಯಾಗುವ ಸಾಧ್ಯತೆಗಳಿವೆ. ಹಿಂಗಾರಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಗುಲ್ಬರ್ಗಾ ಬೀದರ್ ಬಿಜಾಪುರ ಭಾಗಗಳಲ್ಲಿ ತೊಗರಿ ಬೆಳೆ ಉತ್ತಮವಾಗಿ ಬಂದಿದ್ದು, ಮಾರುಕಟ್ಟೆಯಲ್ಲಿ ತೊಗರಿ ಖರೀದಿಗೆ ತೊಗರಿ ಮಂಡಳಿಯಿಂದ ಖರೀದಿಸಲು ಸರ್ಕಾರ ನಿರ್ಧರಿಸಿದೆ ಇದಕ್ಕಾಗಿ ೧೫ ಕೋಟಿ ರೂ. ಹಣವನ್ನು ಬಿಡುಗಡೆಮಾಡಲಾಗಿದೆ ಎಂದರು.

 

ಖರೀದಿಸಿರುವ ತೊಗರಿಯನ್ನು ವಿವಿಧ ಜನತಾ ಬಜಾರ್ ಹಾಗೂ ಸಹಕಾರ ಸಂಘಗಳ ಮೂಲಕ ಕಡಿಮೆ ದರದಲ್ಲಿ ಗ್ರಾಹಕರಿಗೆ ಮಾರಾ ಮಾಡಲು ಸರ್ಕಾರ ನಿರ್ಧರಿಸಿದೆ.

ಏಪ್ರೀಲ್-ಮೇ ತಿಂಗಳಿನಿಂದ ತೊಗರಿ ಮಂಡಳಿಯಿಂದಲೇ ಗ್ರಾಹಕರಿಗೆ ಕಡಿಮೆ ದರದಲ್ಲಿ ತೊಗರಿ ಬೇಳೆಯನ್ನು ಮಾರಾಟಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದರು.

 

ಮುಂಗಾರು ಸಿದ್ಧತೆ:

ಮುಂಗಾರು ಹಂಗಾಮು ಮುಂದಿನ ಏಪ್ರೀಲ್-ಮೇ ತಿಂಗಳಲ್ಲಿ ಆರಂಭವಾಗಲಿದ್ದು, ಇದಕ್ಕೆ ಬೇಕಾಗುವ ರಸಗೊಬ್ಬರವನ್ನು ಸಂಗ್ರಹಮಾಡಲು ಸಹಕಾರ ಮಹಾಮಂಡಲಕ್ಕೆ ೪೦೦ ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

 

ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿಮಾಡಿದ್ದು, ಮುಂಗಾರು ಹಂಗಾಮಿನಲ್ಲಿ ೨೩ ಲಕ್ಷ ಟನ್ ರಸಗೊಬ್ಬರ ಅಗತ್ಯವಿದೆ. ಇದನ್ನು ತಕ್ಷಣವೇ ಬಿಡುಗಡೆಮಾಡುವಂತೆ ಕೇಂದ್ರ ಕೃಷಿ ಸಚಿವಾಲಯಕ್ಕೆ ಮನವಿ ಮಾಡಿರುವುದಾಗಿ ತಿಳಿಸಿದರು.

 

ಕಳೆದ ವರ್ಷ ನೀಡಿರುವ ಧಾಸ್ತಾನಿಗಿಂತ ಶೇ. ೧೫ ರಷ್ಟು ಹೆಚ್ಚು ರಸಗೊಬ್ಬರ ದಾಸ್ತಾನು ಮಾಡಿ ದಾವಣಗೆರೆ, ಹಾವೇರಿ, ಶಿವಮೊಗ್ಗ, ಮಂಡ್ಯ ಮೈಸೂರು, ಚಾಮರಾಜನಗರ ಜಿಲ್ಲೆಗಳಿಗೆ ಬೇಗನೆ ಬಿಡುಗಡೆ ಮಾಡುವ ಕಾರ್ಯಕ್ರಮವನ್ನು ಇಲಾಖೆಯ ಅಧಿಕಾರಿಗಳು ಸಿದ್ಧ ಪಡಿಸಿಕೊಂಡಿದ್ದಾರೆ ಎಂದು ಹೇಳಿದರು.

 

ಧಾರವಾಡದಲ್ಲಿ ೧೦ ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಸಂಗ್ರಹಮಾಡುವ ಗೋದಾಮ್ ನಿರ್ಮಾಣವಗುತ್ತಿದೆ. ಉಳಿದ ಪ್ರಮುಖ ಜಿಲ್ಲೆಗಳಲ್ಲಿ ಗೋದಾಮುಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

 

ಕಡಿಮೆ ದರದಲ್ಲಿ ಬೀಜ ಸಂಗ್ರಹಕ್ಕೂ ಇಲಾಖೆ ಮುಂದಾಗಿದ್ದು, ಎಲ್ಲ ರೈತಕೇಂದ್ರಗಳಲ್ಲಿ ಬೀಜ ಸಂಗ್ರಹದ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

 

ಚೀನಾ ಪ್ರವಾಸ:

ರಾಜ್ಯದ ಪ್ರಗತಿ ಪರ ರೈತರನ್ನು ಚೀನಾ ದೇಶಕ್ಕೆ ಪ್ರವಾಸ ಕಳುಹಿಸಲು ತೀರ್ಮಾನಿಸಿದ್ದು, ೨೫೦ ಪ್ರಗತಿ ಪರ ರೈತರ ೨ ತಂಡವನ್ನು ಇಸ್ರೇಲ್ ಮತ್ತು ಚೀನಾಕ್ಕೆ ಕರೆದೊಯ್ಯಲಾಗುವುದು ಎಂದರು.

ಪ್ರಗತಿ ಪರ ರೈತರು ಮಾಡಿರುವ ಸಾಧನೆ ಆಧರಿಸಿ ಆಯ್ಕೆ ಮಾಡಲಾಗುವುದು. ಈ ಭಾರಿ ಪ್ರವಾಸ ಕೈಗೊಂಡಿರುವ ರೈತರ ಅನುಭವವನ್ನು ಬೆಂಗಳೂರಿನಲ್ಲಿಯೇ ರೈತರ ವಿವರವನ್ನು ಪಡೆಯುವ ವ್ಯವಸ್ಥೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

 

ಇದಕ್ಕಾಗಿ ೫ ಕೋಟಿ ರೂ. ಹಣವನ್ನು ಮೀಸಲಿಟ್ಟುರುವುದಾಗಿ ಸಚಿವರು ಹೇಳಿದರು.

 

ವಾಣಿಜ್ಯ ಬ್ಯಾಂಕ್ ಸಾಲ :

ಏಪ್ರೀಲ್-ಡಿಸೆಂಬರ್ ವರೆಗೆ ೩೨ ಸಾವಿರ ರೈತರು ವಿವಿಧ ವಾಣಿಜ್ಯ ಬ್ಯಾಂಕ್‌ಗಳಲ್ಲಿ ೧೬೦೦ ಕೋಟಿ ರೂ. ಸಾಲ ಪಡೆದಿದ್ದು, ಮಾಚ್ ೩೧ ರ ಒಳಗಾಗಿ ಹಣ ಮರುಪಾವತಿ ಮಾಡಿದರೆ ಶೇ. ೪ ವ್ಯತ್ಯಾಸದ ಹಣವನ್ನು ರಾಜ್ಯ ಸರ್ಕಾರ ಪಾವತಿ ಮಾಡುತ್ತದೆ.

ವಿಳಂಬ ಮಾಡಿದರೆ ಪೂರ್ತಿ ಶೇ. ೭ ರಷ್ಟು ಬಡ್ಡಿಯನ್ನು ರೈತರೇ ಭರಿಸಬೆಕು ಎಂದು ಸಚಿವರು ತಿಳಿಸಿದರು.

 

ರೈತರಿಗೆ ಪರಿಹಾರ:

ರಾಜ್ಯ ಸರ್ಕಾರದ ಆದೇಶ ಉಲ್ಲಂಘಿಸಿ ರೈತರಿಗೆ ಕೈಕೊಳ ತೊಡಿಸಿದವರಿಗೆ ರಾಜ್ಯ ಸರ್ಕಾರ ೨೫ ಸಾವಿರ ರೂ. ಪರಿಹಾರ ನೀಡುತ್ತದೆ. ನಂತರ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಸೂಚನೆ ನೀಡಲಾಗುವುದು ಎಂದು ರವೀಂದ್ರನಾಥ್ ತಿಳಿಸಿದರು.  

 


Share: