ಬೆಂಗಳೂರು, ಫೆಬ್ರವರಿ ೨: ಸಾರ್ವಜನಿಕರಿಗೆ ವಂಚನೆಮಾಡಿರುವ ಆರೋಪದ ಮೇರೆಗೆ ಮಾನವ ಪರಿಷತ್ ಅಧ್ಯಕ್ಷ ಹಾಗೂ ಸಮಾಜಸೇವಕ ಕಾರವಾರ ಮೂಲದ ವಿವೇಕಾನಂದ ಅವರನ್ನು ನಗರದಲ್ಲಿಂದು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ವಿವೇಕಾನಂದ ಪ್ರಿಯಾಂಕ ಮತ್ತು ವೀಣಾ ಪ್ರಕರಣದಲ್ಲಿ ನೀರಿಕ್ಷಣಾ ಜಾಮೀನು ಪಡೆದಿದ್ದು, ಆದರೂ ನಿಯಮಾವಳಿಗಳ ಹಿನ್ನೆಲೆಯಲ್ಲಿ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಹಾಜರಾಗಿದ್ದಾನೆ.
ಈತನ ಮೇಲೆ ಇತರ ೩ ಪ್ರಕರಣಗಳು ದಾಖಲಾಗಿದ್ದು, ಬಮಧನಕ್ಕೆ ವಾರಂಟ್ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಉಪ್ಪಾರಪೇಟೆ ಠಾಣಾ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಈತ ಕೆ.ಎಸ್. ಆರ್.ಟಿ.ಸಿ.ಯ ೫೦೦ ಮಂದಿ ಸಿಬ್ಬಂದಿಗಳಿಂದ ಕೆಲಸ ಮಾಡಿಕೊಡುವುದಕ್ಕೆ ತಲಾ ೧ ಸಾವಿರ ರೂ. ನಂತೆ ತೆಗೆದುಕೊಂಡು ವಂಚನೆಗೈದಿದ್ದ. ಈ ಸಂಬಂಧ ಅರುಣ್ ಪಾಟೀಲ್ ಎಂಬುವವರು ಉಪ್ಪಾರಪೇಟೆ ಠಾಣೆಯಲ್ಲಿ ದೂರು ನೀಡಿದ್ದರು.
ಹೊಸಕೋಟೆಯ ನಾಗರಾಜ್ ಎಂಬುವವರು ಜಮೀನಿನ ವಿಷಯದಲ್ಲಿ ಆರೋಪಿ ವಿವೇಕಾನಂದ ವಂಚನೆಮಾಡಿದ್ದಾರೆ. ಎಂದು ಇದೇ ಠಾಣೆಯಲ್ಲಿ ದೂರು ದಾಖಾಲಿಸಿದ್ದರು.
ವೆಂಕಟಾಚಲಯ್ಯ ಅವರು ಲೋಕಾಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ನರೇಂದ್ರ ಶರ್ಮ ಹಾಗೂ ವಿವೇಕಾನಂದರ ನಡುವಿನ ಜಗಳವನ್ನು ರಾಜಿಯಲ್ಲಿ ಮುಕ್ತಾಯಗೊಳಿಸಿದ್ದರು. ಆದರೆ, ಆರೋಪಿ ವಿವೇಕಾನಂದ ನರೇಂದ್ರ ಶರ್ಮಾ ಅವರ ಮೇಲೆ ಹಲ್ಲೆ ನಡೆಸಿ ಕ್ಷಮೆ ಕೇಳಿಸಿ ಆ ಘಟನೆಯನ್ನು ವಿಡಿಯೋ ಚಿತ್ರೀಕರಣ ಮಾಡಿದ್ದ ಎನ್ನಲಾಗಿದೆ.
ಈ ಸಂಬಂಧ ನರೇಂದ್ರ ಶರ್ಮಾ ಎಂಬುವವರು ತಮಗೂ ವಿವೇಕಾನಂದ ಅವರು ವಂಚನೆ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಈ ದೂರುಗಳನ್ನು ದಾಖಲುಮಾಡಿಕೊಂಡಿದ್ದ ಉಪ್ಪಾರಪೇಟೆ ಠಾಣಾ ಪೊಲೀಸರು ವಿವೇಕಾನಂದನನ್ನು ಬಂಧಿಸಿದ್ದಾರೆ.