ಬೆಂಗಳೂರು: ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಪದೇ ಪದೇ ಸಂಭವಿಸುತ್ತಿರುವ ಕೊಲೆ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಿ ಕೂಡಲೇ ವರದಿ ಸಲ್ಲಿಸುವಂತೆ ಎಡಿಜಿಪಿ ಅವರಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಶುಕ್ರವಾರ ಇಲ್ಲಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡದಲ್ಲಿ ಪದೇ ಪದೇ ಕೊಲೆ ಪ್ರಕರಣಗಳು ನಡೆಯುತ್ತಿವೆ. ಇದಕ್ಕೆ ಕಾರಣ ಏನು? ಯಾವ ಕಾರಣಕ್ಕೆ ಎಂಬುದನ್ನು ಗುರುತಿಸಿ ವರದಿ ಸಲ್ಲಿಸಲಿದ್ದಾರೆ. ಆ ಬಳಿಕ ಸಾಧ್ಯವಾದರೆ ನಾನು ಹೋಗಿ ಪರಿಶೀಲಿಸಲಿದ್ದೇನೆ ಎಂದು ಹೇಳಿದರು.
ಅಂಜಲಿ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಕಾನೂನು ಪ್ರಕಾರ ಏನು ಕಠಿಣ ಶಿಕ್ಷೆ ಆಗಬೇಕು, ಅದನ್ನು ಮಾಡುತ್ತೇವೆ.
ಇದರಲ್ಲಿ ಯಾವುದೇ ಮುಲಾಜಿಲ್ಲ. ಪೊಲೀಸರ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಅಮಾನತು ಮಾಡಲಾಗಿದೆ. ಮುಂದೆ ಏನೆಲ್ಲ ಕಾನೂನು ಕ್ರಮ ತೆಗೆದುಕೊಳ್ಳಬೇಕು ಅದೆಲ್ಲವನ್ನು ಮಾಡುತ್ತೇವೆ ಎಂದು ಅವರು ತಿಳಿಸಿದರು.
ಯುವತಿ ತನಗೆ ಬೆದರಿಕೆ ಇದೆ ಎಂದು ದೂರು ನೀಡಿರಲಿಲ್ಲ. ಆದರೆ, ಸ್ಥಳೀಯ ಪೊಲೀಸರಿಗೆ ಹೇಳಿದ್ದರು ಎಂದು ಗೊತ್ತಾಗಿದೆ. ಹೀಗಾಗಿಯೇ ಇನ್‌ಸ್ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ. ಪೋಷಕರು ನಿಜವಾಗಿಯೂ ಹೇಳಿದ್ದರೇ? ಅಥವಾ ಇಲ್ಲವೇ ಎಂಬುದರ ಕುರಿತು ತನಿಖೆ ನಡೆಯುತ್ತದೆ. ಇದರಲ್ಲಿ ಅಧಿಕಾರಿಗಳ ತಪ್ಪು ಕಂಡು ಬಂದರೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಅವರು ನುಡಿದರು.
ಸಿಟ್ ವರದಿ ಮಂಡ್ಯ ಶಾಸಕರಿಗೆ ಹೋಗುತ್ತಿದೆ. ಗೃಹ ಸಚಿವರಿಗೆ ಹೋಗುತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಇಂತಹ ವಿಚಾರಗಳನ್ನು ಸಾರ್ವಜನಿಕ ವಲಯಕ್ಕೆ ತರುವುದು ಸರಿಯಲ್ಲ ಎಂಬುದು ಕುಮಾರಸ್ವಾಮಿಯವರಿಗೂ ಗೊತ್ತಿದೆ. ತನಿಖೆ ನಡೆಯುತ್ತಿದೆ. ಮಂಡ್ಯ ಶಾಸಕರಿಗೆ ಯಾರು ಬೀಫಿಂಗ್ ಮಾಡುತ್ತಾರೆ?' ಎಂದು ಅವರು ಪ್ರಶ್ನಿಸಿದರು.
ಸುಮ್ಮನೆ ಇದೆಲ್ಲ ಹೇಳೋದು ಸುಲಭ. ನಮಗೆಲ್ಲ ತುಂಬಾ ಜವಾಬ್ದಾರಿ ಇದೆ. ಜವಾಬ್ದಾರಿಯಿಂದ ಕೆಲಸ ಮಾಡುತ್ತೇವೆ. ಯಾವ ಮುಲಾಜಿಗೂ ಒಳಪಡುವುದಿಲ್ಲ. ಇದನ್ನು ಕುಮಾರಸ್ವಾಮಿಯವರಿಗೂ ಹೇಳಲು ಬಯಸುತ್ತೇನೆ ಎಸ್‌ಐಟಿ ಅಧಿಕಾರಿಗಳು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ನನಗಾಗಲಿ ಅಥವಾ ಮುಖ್ಯಮಂತ್ರಿಯವರಿಗಾಗಲಿ ಯಾವುದನ್ನು ಬೀಫಿಂಗ್ ಮಾಡಬೇಕೋ ಅದನ್ನು ಸಿಟ್ ಮಾಡುತ್ತದೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.
ಸಂಸದ ಪ್ರಜ್ವಲ್ ರೇವಣ್ಣರನ್ನು ವಿದೇಶದಿಂದ ಕರೆ ತರುವ ಪ್ರಕ್ರಿಯೆ ನಡೆಯುತ್ತಿದೆ. ಅವರನ್ನು ಕರೆತಂದು, ಏನೆಲ್ಲ ಕಾನೂನು ಕ್ರಮ ಕೈಗೊಳ್ಳಬೇಕೋ ಅಲ್ಲಿಯವರೆಗೂ ನಡೆಯುತ್ತಿರುತ್ತದೆ. ಸರಕಾರಕ್ಕೆ ಜವಾಬ್ದಾರಿ ಇದೆ. ಇಂತಹ ಪ್ರಕರಣವನ್ನು ಹಗುರವಾಗಿ ತೆಗೆದುಕೊಳ್ಳಲು ಆಗುತ್ತದೆಯೇ? ವಿಪಕ್ಷದಲ್ಲಿರುವವರು ಸರಕಾರ ಒಳ್ಳೆ ಕೆಲಸ ಮಾಡುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ. ಅದು ನನಗೂ ಅರಿವಿದೆ. ನಾವು ಮಾಡಬೇಕಾದ ಕೆಲಸವನ್ನು ಮಾಡುತ್ತೇವೆ ಎಂದು ಅವರು ಹೇಳಿದರು.