ಭಟ್ಕಳ: ಇಲ್ಲಿನ ಹೆಬಳೆ ಗ್ರಾಮಪಂಚಾಯತ್ ವ್ಯಾಪ್ತಿಯ ಹನೀಫಾಬಾದ್ ಪ್ರದೇಶದಲ್ಲಿ ಇಬ್ರಾಹೀಮ್ ಖಲೀಲ್ ಎಂಬುವವರಿಗೆ ಸೇರಿದ ಮನೆಯು ಸಂಪೂರ್ಣವಾಗಿ ಜಲಾವೃತಗೊಂಡಿದ್ದು ಈ ಕುರಿತು ತನಗಾದ ನಷ್ಟವನ್ನು ತುಂಬಿಕೊಡುವಂತೆ ಕೋರಿ ಪಂಚಾಯತ್ ಅಧಿಕಾರಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಕಳೆದ ಎರಡು ಮೂರುದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಹನೀಫಾಬಾದ್ ನಲ್ಲಿರುವ ಮನೆಯಲ್ಲಿ ಮಳೆ ನೀರು ಪ್ರವಾಹದಂತೆ ಹರಿದು ಬರುತ್ತಿದ್ದು ಮನೆ ಕಂಪೌಂಡ್ ಒಳಗೆ ನುಗ್ಗಿ ಬಹಳಷ್ಟು ಅನಾಹುತವನ್ನುಂಟು ಮಾಡಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ (ಕರ), ನೀರಿನ ಕರ, ಕಸದ ಮಜೋರಿ ಇತ್ಯಾದಿಗಳನ್ನು ತಪ್ಪದೆ ಭರಣ ಮಾಡುತ್ತಿದ್ದು ಅದರ ಪಾವತಿಯೂ ಕೂಡ ನನ್ನ ಬಳಿ ಇದೆ. ಕಳೆದ ೧೫ ವರ್ಷಗಳಿಂದ ಮನೆ ಮುಂದೆ ಕಚ್ಚಾ ರಸ್ತೆ ಇದ್ದು ಯಾವುದೇ ದುರಸ್ತೆಯನ್ನು ಮಾಡಿರುವುದಿಲ್ಲ. ಅಲ್ಲದೆ ಸರಿಯಾದ ಚರಂಡಿ ನಿರ್ಮಾಣವಾಗದ ಕಾರಣ ರಸ್ತೆಯಲ್ಲಿ ಹರಿಯುವ ಮಳೆ ನೀರು ನನ್ನ ಮನೆಯೊಳಗೆ ನುಗ್ಗಿ ಪ್ರತಿ ವರ್ಷ ಅಪಾರ ನಷ್ಟವನ್ನುಂಟು ಮಾಡುತ್ತಿದೆ. ಈ ಕುರಿತಂತೆ ಪಂಚಾಯತ್ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜವಾಗಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನಮ್ಮ ಮನೆಯ ಪಕ್ಕದಲ್ಲಿರುವ ಚರಂಡಿಯನ್ನು ಮುಚ್ಚಿ ಅದರಲ್ಲಿ ಮನೆಯೊಂದು ನಿಮಾರ್ಣಗೊಂಡಿದ್ದು ಆ ಕಾರಣಕ್ಕಾಗಿ ಚರಂಡಿಯಲ್ಲಿ ಹರಿದು ಹೋಗುವ ನೀರು ಈಗ ನಮ್ಮ ಮನೆಯ ಕಂಪೌಂಡ್ ಒಳಗೆ ನುಗ್ಗಿ ಕುಡಿಯುವ ಬಾವಿ ಕಲೂಷಿತಗೊಳ್ಳಲು ಕಾರಣವಾಗಿದೆ. ಮನೆಯಲ್ಲಿ ಕುಡಿಯಲು ನೀರು ಸಹ ಇಲ್ಲ. ಇದರಿಂದಾಗಿ ನಮ್ಮ ಕುಟುಂಬ ತೀವ್ರ ಸಮಸ್ಯೆಯಲ್ಲಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇವರ ಮನವಿಗೆ ಸ್ಪಂಧಿಸಿದ ಹೆಬಳೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಗೊಂಡ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಹಾಗೂ ಸಮಾಜ ಸೇವಕ ಇಕ್ಬಾಲ್ ಸಿಟಿ ಮೆಡಿಕಲ್ ಇದ್ದರು.