ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ವಿಚಾರಣೆಗೆ ಎತ್ತಿಕೊಂಡಿರುವ ಸುಪ್ರೀಂ ಕೋರ್ಟ್, ಅರ್ಜಿಗಳಿಗೆ ಮೂರು ವಾರಗಳೊಳಗೆ ಪ್ರತಿಕ್ರಿಯಿಸುವಂತೆ ಸೂಚಿಸಿ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಬಳಿಕ, ಪ್ರಕರಣದ ಮುಂದಿನ ವಿಚಾರಣೆಯನ್ನು ಎಪ್ರಿಲ್ 9ಕ್ಕೆ ನಿಗದಿಪಡಿಸಿದೆ.
ಅದೇ ವೇಳೆ, ಕೆಲವು ಅರ್ಜಿದಾರರು ಕೋರಿರುವಂತೆ, ಈ ಅವಧಿಯಲ್ಲಿ ಪೌರತ್ವ ನೀಡುವುದಕ್ಕೆ ತಡೆಯಾಜ್ಞೆ ನೀಡಲು ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠವೊಂದು ನಿರಾಕರಿಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆ, 2019ರ ಸಂವಿಧಾನ ಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸುವವರೆಗೆ, ಅದರ ನಿಯಮಾವಳಿಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ 20 ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ಈ ಅರ್ಜಿಗಳಿಗೆ ಪ್ರತಿಕ್ರಿಯಿಸಲು ತನಗೆ ನಾಲ್ಕು ವಾರಗಳ ಸಮಯಾವಕಾಶ ಬೇಕು ಎಂದು ಸರಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ಹೇಳಿದರು.
'ಅದು (ಸಿಎಎ) ಯಾವುದೇ ವ್ಯಕ್ತಿಯ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ'' ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೂ ಒಳಗೊಂಡಿರುವ ನ್ಯಾಯಪೀಠಕ್ಕೆ ಮೆಹ್ರಾ ತಿಳಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆಯು ಸಂಸತ್‌ನಲ್ಲಿ ಅಂಗೀಕಾರಗೊಂಡ ನಾಲ್ಕು ವರ್ಷಗಳ ಬಳಿಕ, ಮಾರ್ಚ್ 11ರಂದು ಕೇಂದ್ರ ಸರಕಾರವು ಸಿಎಎ ನಿಯಮಗಳನ್ನು ಒಳಗೊಂಡ ಅಧಿಸೂಚನೆಯನ್ನು ಹೊರಡಿಸಿದೆ. ಕಿರುಕುಳಕ್ಕೆ ಒಳಗಾಗಿ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ 2014 ಡಿಸೆಂಬರ್ 31ರೊಳಗೆ ಭಾರತಕ್ಕೆ ಬಂದಿರುವ ಹಿಂದೂಗಳು, ಸಿಬ್ಬರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರೈಸ್ತರು ಸೇರಿದಂತೆ ಮುಸ್ಲಿಮೇತರ ಅಲ್ಪಸಂಖ್ಯಾತ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ಉದ್ದೇಶವನ್ನು ಸಿಎಎ ಹೊಂದಿದೆ. ಈ ಕಾಯ್ದೆಯು 'ತಾರತಮ್ಯದಿಂದ ಕೂಡಿದೆ', 'ಕೋಮುವಾದಿಯಾಗಿದೆ' ಮತ್ತು 'ಸಂವಿಧಾನ ವಿರೋಧಿಯಾಗಿದೆ' ಎಂಬುದಾಗಿ ಹಲವು ಪ್ರತಿಪಕ್ಷಗಳು ಅಭಿಪ್ರಾಯಪಟ್ಟಿವೆ.