ಹಾಸನ : ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಆಚಂಗಿ ಗ್ರಾಮದ ಬಳಿ ಗುಡ್ಡ ಕುಸಿತ ಉಂಟಾಗಿ ಕಾರವಾರ ದಿಂದ ಬೆಂಗಳೂರಿಗೆ ಪ್ರಯಾಣಿಸುವ ಕಾರವಾರ -ಯಶವಂತಪುರ ರೈಲನ್ನು ಸ್ಥಗಿತಗೊಳಿಸಲಾಗಿದ್ದು ಮಣ್ಣು ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ.
ಇಂದಿನ ಮಂಗಳೂರು- ವಿಜಯಪುರ ರೈಲು ರದ್ದಾಗಿದ್ದು, ಬೆಂಗಳೂರು-ಮಂಗಳೂರು ನಡುವಿನ ರೈಲುಗಳ ಸಂಚಾರ ಮೊಟಕಗೊಳಿಸಲಾಗಿದೆ. ಕೆಲವು ರೈಲುಗಳ ಮಾರ್ಗ ಬದಲಿಸಲಾಗಿದೆ. ಎರಡು ಜೆಸಿಬಿ, ಒಂದು ಹಿಟಾಚಿ ಹತ್ತಾರು ಕಾರ್ಮಿಕನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದ್ದು, ರೈಲ್ವೆ ಇಲಾಖೆ ಅಧಿಕಾರಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಮಾರ್ಗ ಮಧ್ಯೆ ನಿಂತಿರುವ ಯಶವಂತಪುರ-ಕಾರವಾರ ಎಕ್ಸ್ಪ್ರೆಸ್ ರೈಲಿನ ಪ್ರಯಾಣಿಕರು ಬಾಳ್ಳುಪೇಟೆ ನಿಲ್ದಾಣದಲ್ಲಿ ಊಟ, ನೀರಿಲ್ಲದೆ ಪ್ರಯಾಣಿಕರ ಪರದಾಡುತ್ತಿದ್ದರು. ರೈಲು ನಿಲುಗಡೆ ಸುದ್ದಿ ತಿಳಿದು ಖಾಸಗಿ ವಾಹನಗಳಲ್ಲಿ ನಿಲ್ದಾಣದ ಬಳಿ ಬಂದಿದ್ದ ಸ್ಥಳೀಯರ ನೆರವು ಪಡೆದು ಹಲವು ರೈಲು ಪ್ರಯಾಣಿಕರು ಬಾಳ್ಳುಪೇಟೆಗೆ ತೆರಳಿ ಅಲ್ಲಿಂದ ಬಸ್ ಏರಿದರು. ಪ್ರಯಾಣಿಕರಿಗೆ ತೀವ್ರ ತೊಂದರೆಯಾದ ಹಿನ್ನಲೆಯಲ್ಲಿ ರೈಲು ಹಾಸನಕ್ಕೆ ವಾಪಸ್ ಆಗಿದ್ದು, ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಜೊತೆಗೆ ಆಹಾರದ ಸರಬರಾಜು ಮಾಡಲಾಗಿದೆ.