ಹೊಸದಿಲ್ಲಿ: ಸರ್ವೇ ಆದೇಶವನ್ನು ಪ್ರಶ್ನಿಸಿ ಮಸೀದಿ ಸಮಿತಿಯು ಸಲ್ಲಿಸಿರುವ ಅರ್ಜಿಯನ್ನು ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಪಟ್ಟಿ ಮಾಡುವವರೆಗೆ ಸಂಭಲ್‌ನಲ್ಲಿಯ ಜಾಮಾ ಮಸೀದಿ ವಿರುದ್ಧದ ಮೊಕದ್ದಮೆಯನ್ನು ಮುಂದುವರಿಸದಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಉತ್ತರ ಪ್ರದೇಶದಲ್ಲಿಯ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ. ಇದೇ ವೇಳೆ, ಶಾಂತಿ ಮತ್ತು ಸೌಹಾರ್ದವನ್ನು ಕಾಪಾಡುವಂತೆ ಅದು ಉ.ಪ್ರದೇಶ ಸರಕಾರಕ್ಕೆ ತಿಳಿಸಿದೆ.
“ಅಡ್ವಕೇಟ್ ಕಮಿಷನರ್ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಇರಿಸುವಂತೆ ಮತ್ತು ಮಧ್ಯಂತರದಲ್ಲಿ ಅದನ್ನು ತೆರೆಯದಂತೆ ನಾವು ನಿರ್ದೇಶಿಸುತ್ತಿದ್ದೇವೆ. ಏನೇ ಆದರೂ ಶಾಂತಿ ಮತ್ತು ಸೌಹಾರ್ದವನ್ನು ಕಾಯ್ದುಕೊಳ್ಳಬೇಕು' ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾ.ಸಂಜಯ್ ಕುಮಾರ್ ಅವರ ಪೀಠವು ತಿಳಿಸಿತು.
ಮಸೀದಿಯ ಸರ್ವೆಗೆ ಆದೇಶಿಸಿರುವ ವಿಚಾರಣಾ ನ್ಯಾಯಾಲಯವು ಮುಂದಿನ ಯಾವುದೇ ಕ್ರಮವನ್ನು ಕೈಗೊಳ್ಳುವಂತಿಲ್ಲ ಎಂದು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿರುವ ಸರ್ವೋಚ್ಚ ನ್ಯಾಯಾಲಯವು, ಅವರು(ಮಸೀದಿ ಸಮಿತಿ) ಉಚ್ಚ ನ್ಯಾಯಾಲಯಕ್ಕೆ ಹೋಗುವವರೆಗೆ ಯಾವುದೇ ಅಹಿತಕರ ಘಟನೆ ನಡೆಯುವುದನ್ನು ನಾವು ಬಯಸುವುದಿಲ್ಲ. ವಿಚಾರಣಾ ನ್ಯಾಯಾಲಯವು ತನ್ನ ಆದೇಶವನ್ನು ಜಾರಿಗೊಳಿಸಬಾರದು' ಎಂದು ಹೇಳಿತು.
ಸಂಭಲ್ ಶಾಹಿ ಜಾಮಾ ಮಸೀದಿ ಸಮಿತಿಯು ನ.19ರ ಸಿವಿಲ್ ನ್ಯಾಯಾಧೀಶರ ಆದೇಶಕ್ಕೆ ತಡೆಯನ್ನು ಕೋರಿ ಗುರುವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದು, ಜಿಲ್ಲಾ ನ್ಯಾಯಾಲಯದ ಮುಂದಿರುವ ಪ್ರಕರಣವು ಮಸೀದಿಯು ಹಿಂದೆ ದೇವಸ್ಥಾನವಾಗಿತ್ತು ಎಂದು ಪ್ರತಿಪಾದಿಸಿದ ಬಳಿಕ 'ತರಾತುರಿ'ಯಲ್ಲಿ ಸರ್ವೇಗೆ ಆದೇಶಿಸಲಾಗಿದೆ ಎಂದು ಅರ್ಜಿಯು ವಾದಿಸಿದೆ.
ಮಸೀದಿ ಸಮಿತಿಯು ಅರ್ಜಿಯಲ್ಲಿ ತುರ್ತು ವಿಚಾರಣೆಯನ್ನು ಕೋರಿದ್ದು, ಶುಕ್ರವಾರ ಅದನ್ನು ಕೈಗೆತ್ತಿಕೊಳ್ಳಲು ಸರ್ವೋಚ್ಚ ನ್ಯಾಯಾಲಯವು ಒಪ್ಪಿಕೊಂಡಿತ್ತು.
ನ.19ರಂದು ತನ್ನ ಆದೇಶದಲ್ಲಿ ಸಂಭಲ್‌ನ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ಆದಿತ್ಯ ಸಿಂಗ್ ಅವರು ಪಟ್ಟಣದಲ್ಲಿಯ ಶಾಹಿ ಜಾಮಾ ಮಸೀದಿಯ ಸರ್ವೆ ನಡೆಸುವಂತೆ ಅಡ್ವಕೇಟ್ ಕಮಿಷನರ್‌ಗೆ ನಿರ್ದೇಶನ ನೀಡಿದ್ದರು. ರಮೇಶ್ ರಾಘವ್ ಅವರನ್ನು ಅಡ್ವಕೇಟ್ ಕಮಿಷನರ್ ಆಗಿ ನೇಮಕಗೊಳಿಸಿದ್ದ ನ್ಯಾಯಾಧೀಶರು ನ.29ರೊಳಗೆ ಸರ್ವೇ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದರು.
ವಕೀಲ ಹರಿಶಂಕರ್ ಜೈನ್ ಮತ್ತು ಇತರ ಏಳು ಜನರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬಳಿಕ ಸಿವಿಲ್ ನ್ಯಾಯಾಧೀಶರು ಆದೇಶವನ್ನು ಹೊರಡಿಸಿದ್ದರು. ಮೊಗಲರ ಕಾಲದಲ್ಲಿ ದೇವಸ್ಥಾನವನ್ನು ನೆಲಸಮಗೊಳಿಸಿ ಮಸೀದಿಯನ್ನು ನಿರ್ಮಿಸಲಾಗಿತ್ತು ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.
ನ್ಯಾಯಾಲಯದ ಆದೇಶದ ಬಳಿಕ ಮಸೀದಿಯ ಸರ್ವೇ ಸಂದರ್ಭದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಕನಿಷ್ಠ ಏಳು ಮುಸ್ಲಿಮ್ ಯುವಕರು ಮೃತಪಟ್ಟಿದ್ದಾರೆ.