ಹೈದರಾಬಾದ್: ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲು ಅರ್ಜುನ್ ಅವರನ್ನು ಶುಕ್ರವಾರ ಬಂಧಿಸಲಾಗಿದ್ದು, ಕೆಲವೇ ತಾಸುಗಳ ಬಳಿಕ ಜಾಮೀನು ಬಿಡುಗಡೆ ಗೊಂಡಿದ್ದಾರೆ. ಶುಕ್ರ ವಾರ ಬೆಳಗ್ಗೆ ಅರ್ಜುನ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ನಾಂಪಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಅವರಿಗೆ ನ್ಯಾಯಾಧೀಶರು 14 ದಿನಗಳ ರಿಮಾಂಡ್ ಬಂಧನ ವಿಧಿಸಿದರು. ಬಳಿಕ ಪ್ರಕರಣವನ್ನು ರದ್ದು ಪಡಿಸುವಂತೆ ಕೋರಿ ನಟನ ವಕೀಲರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದರು.
ಅರ್ಜಿಯನ್ನು ಕೈಗೆತ್ತಿಕೊಂಡು ಆಲಿಕೆಯನ್ನು ಮುಂದೂಡಿದ ನ್ಯಾಯಾಧೀಶರು, ಅಲ್ಲು ಅರ್ಜುನ್ ಅವರಿಗೆ ತಕ್ಷಣವೇ ಮಧ್ಯಂತರ ಜಾಮೀನು ಬಿಡುಗಡೆ ನೀಡಿದರು.
ಇದೊಂದು ತುರ್ತು ಆಲಿಕೆಯ ಪ್ರಕರಣವಲ್ಲವಾದ್ದರಿಂದ ಅರ್ಜಿಯ ಆಲಿಕೆಯನ್ನು ಸೋಮವಾರ ನಡೆಸಬೇಕೆಂದು ಸರಕಾರದ ಪರ ವಕೀಲರು ವಾದಿಸಿದ್ದರು ಮತ್ತು ನಟನಿಗೆ ಜಾಮೀನು ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು.
ಅಲ್ಲು ಅರ್ಜುನ್ ಅವರ ವಕೀಲ ನಿರಂಜನ್ ರೆಡ್ಡಿ ಅವರು ವಾದ ಮಂಡಿಸುತ್ತಾ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 118 (1), ತನ್ನ ಕಕ್ಷಿದಾರನಿಗೆ ಅನ್ವಯಿ ಸುವುದಿಲ್ಲವೆಂದು ಹೇಳಿದರು. ಇದೊಂದು ಉದ್ದೇಶಪೂರ್ವಕವಾಗಿ ನಡೆದ ಘಟನೆಯಲ್ಲ ಹಾಗೂ ಇದಕ್ಕೂ ನಟನಿಗೆ ಯಾವುದೇ ಸಂಬಂಧವಿಲ್ಲವೆಂದು ಹೇಳಿ ದರು. ಅಲ್ಲು ಅರ್ಜುನ್ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ತಳ್ಳಿಹಾಕಬೇಕೆಂದು ಕೋರುವ ಮನವಿಯ ಆಲಿಕೆಯನ್ನು ತಕ್ಷಣವೇ ನಡೆಸಲು ಸಾಧ್ಯವಿಲ್ಲವೆಂದು ನ್ಯಾಯಾಲಯ ತಿಳಿಸಿದಾಗ ಅವರ ವಕೀಲರು ಮಧ್ಯಂತರ ಜಾಮೀನಿಗೆ ಮನವಿ ಸಲ್ಲಿಸಿದರು.
ಉಭಯ ಕಕ್ಷಿದಾರರ ವಾದವನ್ನು ಆಲಿಸಿದ ಬಳಿಕ ನ್ಯಾಯಾಧೀಶರು ಅಲ್ಲು ಅರ್ಜುನ್ ಅವರಿಗೆ ಮಧ್ಯಂತರ ಜಾಮೀನು ನೀಡಿ ಬಿಡುಗಡೆಗೊಳಿಸಿದರು.
ಡಿಸೆಂಬರ್ 4ರಂದು ತನ್ನ ಅಭಿನಯದ ಪುಷ್ಪಾ 2 ಚಿತ್ರದ ಪ್ರೀಮಿಯರ್ ಪ್ರದರ್ಶನವನ್ನು ವೀಕ್ಷಿಸಲು ಅಲ್ಲು ಅರ್ಜುನ್ ಹೈದರಾಬಾದ್ನ ಸಂಧ್ಯಾ ಥಿಯೇಟರ್ಗೆ ಆಗಮಿಸಿದ ಸಂದರ್ಭ ಉಂಟಾದ ನೂಕು ನುಗ್ಗಲಿನಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿ ಹೈದರಾಬಾದ್ ಪೊಲೀಸರು ಅಲ್ಲು ಅರ್ಜುನ್, ಥಿಯೇಟರ್ನ ಮ್ಯಾನೇ ಜ್ಮೆಂಟ್ ಮತ್ತಿತರರ ವಿರುದ್ದ ಎಫ್ಐ ಆರ್ ದಾಖಲಿಸಿದ್ದರು.