ಕೋಲ್ಕತಾ: ಹೌರಾದಲ್ಲಿ ವೇಶ್ಯಾವಾಟಿಕೆ ಜಾಲವೊಂದನ್ನು ನಡೆಸುತ್ತಿದ್ದ ಆರೋಪದಲ್ಲಿ ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸವ್ಯಸಾಚಿ ಘೋಷ್ ಅವರನ್ನು ಪಶ್ಚಿಮಬಂಗಾಳ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಗಲಭೆ ಪೀಡಿತ ಸಂದೇಶಖಾಲಿಯಲ್ಲಿ ಟಿಎಂಸಿ ಕಾರ್ಯಕರ್ತರಿಂದ ಮಾನವಹಕ್ಕುಗಳ ಉಲ್ಲಂಘನೆ ಹಾಗೂ ಲೈಂಗಿಕ ಕಿರುಕುಳದ ಆರೋಪಗಳ ಪರಿಶೀಲನೆಗೆ ಆಗಮಿಸಿದ್ದ ಬಿಜೆಪಿಯ ಮಹಿಳಾ ತಂಡವನ್ನು ಪೊಲೀಸರು ತಡೆದು ನಿಲ್ಲಿಸಿದ ಘಟನೆಯ ಬೆನ್ನಲ್ಲೇ ಈ ಪ್ರಕರಣ ವರದಿಯಾಗಿದೆ.
ಸಂದೇಶಖಾಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ವಿರುದ್ದ ತೃಣಮೂಲ ಕಾಂಗ್ರೆಸ್‌ಪಕ್ಷವು (ಟಿಎಂಸಿ) ತನ್ನ ವಾಗ್ದಾಳಿಯನ್ನು ತೀವ್ರಗೊಳಿಸಿದ್ದು, ಹೌರಾದ ಹೊಟೇಲ್ ಒಂದರಲ್ಲಿ ಬಿಜೆಪಿ ಮುಖಂಡ ಸವ್ಯಸಾಚಿ ಘೋಷ್ ನಡೆಸುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಪಶ್ಚಿಮಬಂಗಾಳ ಪೊಲೀಸರು ಭೇದಿಸಿದ್ದಾರೆಂದು ಹೇಳಿದೆ. ಬಿಜೆಪಿಯು ತಲೆಹಿಡುಕರನ್ನು ರಕ್ಷಿಸುತ್ತಿದೆಯೇ ಹೊರತು ಮಹಿಳೆಯರನ್ನಲ್ಲವೆಂದು ಅದು ಟೀಕಾಪ್ರಹಾರನಡೆಸಿದೆ.
“ಬಿಜೆಪಿ ಮುಖಂಡ ಸವ್ಯಸಾಚಿ ಅವರು ಹೌರಾದ ಸಂಕ್ರಾಯಿಲ್‌ನಲ್ಲಿರುವ ತನ್ನ ಹೊಟೇಲ್‌ನಲ್ಲಿ ಅಪ್ರಾಪ್ತ ಬಾಲಕಿಯರ ವೇಶ್ಯಾವಾಟಿಕೆ ಜಾಲವನ್ನು ನಡೆಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಪೊಲೀಸರು 11ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಹಾಗೂ 6 ಮಂದಿ ಸಂತ್ರಸ್ತೆಯರನ್ನು ಸ್ಥಳದಿಂದ ರಕ್ಷಿಸಿದ್ದಾರೆ. ಇದುವೇ ಬಿಜೆಪಿ, ಅವರು 'ಬೇಟಿ'ಯರನ್ನು ರಕ್ಷಿಸುತ್ತಿಲ್ಲ, ಅವರು ತಲೆಹಿಡುಕರನ್ನು ರಕ್ಷಿಸುತ್ತಿದ್ದಾರೆ!'' ಎಂದು ಟಿಎಂಸಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್ ನಲ್ಲಿ ಹೇಳಿದೆ.
ಗಲಭೆ ಪೀಡಿತ ಪ್ರದೇಶವಾದ ಸಂದೇಶಖಾಲಿಯಲ್ಲಿ ಭೇಟಿ ನೀಡಲು ಬಿಜೆಪಿ ಮಹಿಳಾ ಮುಖಂಡರ ನಿಯೋಗವನ್ನು ಪೊಲೀಸರು ತಡೆದ ಘಟನೆಯ ಬೆನ್ನಲ್ಲೇ ಟಿಎಂಸಿ ಈ ಆರೋಪವನ್ನು ಮಾಡಿದೆ.