ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಜೂ.13ರಂದು ನಡೆಯಲಿರುವ ದೈವಾರ್ಷಿಕ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಹಿರಿಯರಿಗೆ ಹಾಗೂ ಹಾಲಿ ಸದಸ್ಯರೊಂದಿಗೆ ಹೊಸಬರಿಗೂ ಅವಕಾಶ ಕಲ್ಪಿಸಲಾಗಿದೆ.
ರವಿವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅನುಮೋದನೆ ನೀಡಿರುವ ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಬಿಡುಗಡೆ ಮಾಡಿದೆ. ಜೂ.3 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಎಲ್ಲ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ.
ಅಭ್ಯರ್ಥಿಗಳು: ಸಚಿವ ಎನ್. ಎಸ್.ಬೋಸರಾಜು, ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತ್ ಕುಮಾರ್, ಸಿಎಂ ಸಿದ್ದರಾಮಯ್ಯರ ಪುತ್ರ, ಮಾಜಿ ಶಾಸಕ ಡಾ.ಯತೀಂದ್ರ, ಸಿಎಂ ರಾಜಕೀಯ ಕಾರ್ಯದರ್ಶಿ-ಹಾಲಿ ಸದಸ್ಯ ಕೆ.ಗೋವಿಂದ ರಾಜು, ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ, ಅಲ್ಪ ಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷೆ ಬಿಲ್ಕಿಸ್ ಬಾನು, ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ್
ಗುತ್ತೇದಾರ್ ಅವರ ಹೆಸರನ್ನು ಪ್ರಕಟಿಸಲಾಗಿದೆ. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಹಾಗೂ ಪರಿಷತ್ ಸದಸ್ಯರಾಗಿದ್ದ ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ಹಿನ್ನೆಲೆಯಲ್ಲಿ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ರಾಯಚೂರಿನ ಕಾಂಗ್ರೆಸ್ ಮುಖಂಡ ಬಸನಗೌಡ ಬಾದರ್ಲಿ ಅವರನ್ನು ಅಭ್ಯರ್ಥಿಯನ್ನಾಗಿ ಪ್ರಕಟಿಸ ಲಾಗಿದೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ಬರೋಬ್ಬರಿ 300 ಮಂದಿ ಆಕಾಂಕ್ಷಿಗಳಿದ್ದರು. ಯಾರನ್ನು ಆಯ್ಕೆ ಮಾಡಬೇಕೆಂಬ ಗೊಂದಲ ಸೃಷ್ಟಿಯಾಗಿತ್ತು. ಇದೀಗ ಅಳೆದು ತೂಗಿ ಅಂತಿಮವಾಗಿ ಏಳು ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ರವಿವಾರ ಬಿಡುಗಡೆ ಮಾಡಿದೆ. ಕರ್ನಾಟಕ ವಿಧಾನಸಭೆಯಲ್ಲಿನ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಸಂಖ್ಯಾಬಲವನ್ನು ಆಧರಿಸಿದರೆ, ದೈವಾರ್ಷಿಕ ಚುನಾವಣೆ ನಡೆಯಲಿರುವ ವಿಧಾನ ಪರಿಷತ್ತಿನ 11 ಸ್ಥಾನಗಳ ಪೈಕಿ ಏಳು ಸ್ಥಾನಗಳು ಕಾಂಗ್ರೆಸ್ ಪಾಲಾಗಲಿವೆ. ಬಿಜೆಪಿಗೆ ಮೂರು, ಜೆಡಿಎಸ್‌ಗೆ ಒಂದು ಸ್ಥಾನ ದೊರಕಲಿವೆ ಎಂದು ಗೊತ್ತಾಗಿದೆ.