ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ವಯನಾಡ್ ಭೂಕುಸಿತ; ಒಂದೇ ಕುಟುಂಬದ ನಾಲ್ವರ ರಕ್ಷಣೆ, 308ಕ್ಕೆ ತಲುಪಿದ ಸಾವುಗಳ ಸಂಖ್ಯೆ

ವಯನಾಡ್ ಭೂಕುಸಿತ; ಒಂದೇ ಕುಟುಂಬದ ನಾಲ್ವರ ರಕ್ಷಣೆ, 308ಕ್ಕೆ ತಲುಪಿದ ಸಾವುಗಳ ಸಂಖ್ಯೆ

Sat, 03 Aug 2024 17:43:41  Office Staff   Vb

ವಯನಾಡ್: ಭಾರೀ ಭೂಕುಸಿತಗಳು ಸಂಭವಿಸಿದ ಕೇರಳದ ವಯನಾಡ್ ಜಿಲ್ಲೆಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಾಲ್ಕನೇ ದಿನವಾದ ಶುಕ್ರವಾರವೂ ಮುಂದುವರಿದಿದ್ದು ಒಂದೇ ಕುಟುಂಬದ ನಾಲ್ವರನ್ನು ರಕ್ಷಿಸಲಾಗಿದೆ.

ವೆಳ್ಳರಿಮಲ ನಿವಾಸಿಗಳಾದ ಜಾನ್ ಕೆ.ಜೆ., ಜೋಮೊಲ್ ಜಾನ್, ಕ್ರಿಸ್ಟೀನ್ ಜಾನ್ ಮತ್ತು ಅಬ್ರಹಾಂ ಜಾನ್ ಅವರನ್ನು ರಕ್ಷಿಸಿ, ಸುರಕ್ಷಿತ ಮಾರ್ಗದ ಮೂಲಕ ಪರಿಹಾರ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ. ಭೂಕುಸಿತದಿಂದಾಗಿ ಸಿಕ್ಕಿಹಾಕಿಕೊಂಡಿದ್ದ ಕುಟುಂಬದ ಕುರಿತು ಸಂಬಂಧಿಕರು ಮಾಹಿತಿ ನೀಡಿದ ಬಳಿಕ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದವು. ಭೂಕುಸಿತದಿಂದ ಈ ಕುಟುಂಬದ ಮನೆಗೆ ಯಾವುದೇ ಹಾನಿಯಾಗಿರಲಿಲ್ಲ.

ಈ ನಡುವೆ ಸಾವುಗಳ ಸಂಖ್ಯೆ 308ಕ್ಕೆ ಏರಿದ್ದು, ಅಧಿಕೃತ ಎಣಿಕೆ 201ರಲ್ಲಿದೆ.

ಸುಮಾರು 300 ಜನರು ಈಗಲೂ ನಾಪತ್ತೆಯಾಗಿದ್ದಾರೆ ಎಂದು ಕೇರಳ ಎಡಿಜಿಪಿ ಎಂ.ಆರ್.ಅಜಿತ್‌ಕುಮಾರ್ ತಿಳಿಸಿದರು. ಭೂಕುಸಿತಗಳಿಂದ 348 ಮನೆಗಳಿಗೆ ಹಾನಿಯಾಗಿದೆ ಎನ್ನಲಾಗಿದೆ.

ಭಾರೀ ಮಳೆ ಮತ್ತು ಪ್ರದೇಶದಲ್ಲಿಯ ಕಠಿಣ ಸವಾಲುಗಳ ನಡುವೆಯೇ 40 ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆಗಳನ್ನು ಮುಂದುವರಿಸಿವೆ. ಜಂಟಿ ತಂಡಗಳು ಸೇನೆ, ಎನ್‌ಡಿಆರ್‌ಎಫ್, ಡಿಎಜಿ, ಕೋಸ್ಟ್‌ಗಾರ್ಡ್, ನೌಕಾಪಡೆ ಮತ್ತು ಎಂಇಜಿ ಸಿಬ್ಬಂದಿಗಳ ಜೊತೆಗೆ ಮೂವರು ಸ್ಥಳೀಯರು ಮತ್ತು ಓರ್ವ ಅರಣ್ಯ ಇಲಾಖೆ ಉದ್ಯೋಗಿಯನ್ನು ಒಳಗೊಂಡಿವೆ.

ಪೀಡಿತ ಪ್ರದೇಶಗಳಿಂದ ರಕ್ಷಿಸಲ್ಪಟ್ಟವರಿಗೆ ತೀವ್ರ ನಿಗಾದಲ್ಲಿರಿಸಲು ವಯನಾಡ್ ಆಸ್ಪತ್ರೆಗಳಲ್ಲಿ ಐಸಿಯುಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದರು.

ಮಂಜೇರಿ ಮೆಡಿಕಲ್ ಕಾಲೇಜು ಮತ್ತು ಕೋಝಿಕ್ಕೋಡ್ ಮೆಡಿಕಲ್ ಕಾಲೇಜು ಸೇರಿದಂತೆ ರಕ್ಷಿತ ಜನರನ್ನು ವಾಯುಮಾರ್ಗದ ಮೂಲಕ ಸಾಗಿಸಬಹುದಾದ ಆಸ್ಪತ್ರೆಗಳನ್ನೂ ಸಜ್ಜುಗೊಳಿಸಲಾಗಿದೆ.

ಈವರೆಗೆ 199 ಮೃತದೇಹಗಳ ಮರಣೋತ್ತರ ಪರೀಕ್ಷೆಗಳನ್ನು ಪೂರ್ಣಗೊಳಿಸಲಾಗಿದೆ. ಅಲ್ಲದೆ 130 ದೇಹದ ಭಾಗಗಳ ಮಾದರಿಗಳನ್ನು ಡಿಎನ್ಎ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ ಎಂದೂ ಜಾರ್ಜ್ ತಿಳಿಸಿದರು.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಗಮನವನ್ನು ಕೇಂದ್ರೀಕರಿಸಬಹುದಾದ ಸ್ಥಳಗಳನ್ನು ಗುರುತಿಸಲು ಏರಿಯಲ್ ಡೋನ್‌ಗಳು ಮತ್ತು ಸೆಲ್ ಫೋನ್‌ಗಳ ಮೂಲಕ ಜಿಪಿಎಸ್ ಸಮನ್ವಯವನ್ನು ಸಾಧಿಸಲಾಗುತ್ತಿದೆ ಎಂದು ತಿಳಿಸಿದ ವಯನಾಡ್ ಜಿಲ್ಲಾಧಿಕಾರಿ ಮೇಘಶ್ರೀ ಡಿ.ಆರ್.ಅವರು, ತೀವ್ರ ಹಾನಿಗೀಡಾಗಿರುವ ಮುಂಡಕೈ ಮತ್ತು ಚೂರಲ್‌ಲ ಗ್ರಾಮಗಳನ್ನು ಆರು ವಲಯಗಳನ್ನಾಗಿ ಗುರುತಿಸಿ 40 ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಡೋನ್‌ಗಳಿಂದ ವೈಮಾನಿಕ ಛಾಯಾಚಿತ್ರಗಳ ಮೂಲಕ ಜಿಪಿಎಸ್ ಬಳಸಿಕೊಂಡು ಶೋಧಕ್ಕಾಗಿ ಕೆಲವು ಸ್ಥಳಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಅಟ್ಟಮಲ ಮತ್ತು ಅರನಮಲ, ಮುಂಡಕ್ಕೆ, ಪುಂಜಿರಿಮಟ್ಟಂ, ವೆಳ್ಳರಿಮಲ ಗ್ರಾಮ, ಜಿವಿಎಚ್‌ಎಸ್ಎಸ್ ವೆಳ್ಳರಿಮಲ ಮತ್ತು ನದಿದಂಡೆ ಈ ಆರು ವಲಯಗಳಾಗಿವೆ.

ಕೆಸರಿನಲ್ಲಿ ಹೂತುಹೋಗಿರುವ ಶವಗಳನ್ನು ಪತ್ತೆ ಹಚ್ಚಲು ಡೋನ್ ಆಧರಿತ ರಾಡಾರ್ ಶನಿವಾರ ದಿಲ್ಲಿಯಿಂದ ಬರಲಿದೆ. ಪ್ರಸ್ತುತ ಆರು ಶ್ವಾನಗಳು ಶೋಧ ಕಾರ್ಯಾಚರಣೆಗಳಲ್ಲಿ ನೆರವಾಗುತ್ತಿದ್ದು, ತಮಿಳುನಾಡಿನಿಂದ ಇನ್ನೂ ನಾಲ್ಕು ಶ್ವಾನಗಳನ್ನು ತರಿಸಿಕೊಳ್ಳಲಾಗುತ್ತಿದೆ ಎಂದು ರಾಜ್ಯದ ಕಂದಾಯ ಸಚಿವ ಕೆ.ರಾಜನ್ ಗುರುವಾರ ತಿಳಿಸಿದ್ದರು.

ರಕ್ಷಣಾ ಪ್ರಯತ್ನಗಳನ್ನು ಸಮನ್ವಯಗೊಳಿಸುತ್ತಿರುವ ರಾಜನ್ ಪ್ರಕಾರ, 9,328 ಜನರನ್ನು ಜಿಲ್ಲೆಯಲ್ಲಿನ 91 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಈ ಪೈಕಿ ಚೂರಲ್‌ಲ ಮತ್ತು ಮೆಪ್ಪಾಡಿಗಳಲ್ಲಿ ಸಂಭವಿಸಿದ ಭೂಕುಸಿತಗಳಿಂದ ನಿರ್ವಸಿತರಾಗಿರುವ 578 ಕುಟುಂಬಗಳ 2,328 ಜನರನ್ನು ಒಂಭತ್ತು ಪರಿಹಾರ ಶಿಬಿರಗಳಿಗೆ ಸೇರಿಸಲಾಗಿದೆ.

ಬೇಲಿ ಸೇತುವೆಯ ನಿರ್ಮಾಣದಿಂದಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಬಿರುಸು ಪಡೆದುಕೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ.


Share: