ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ವಕ್ಫ್ ಜೆಪಿಸಿಯ ಸಭೆಗಳಿಗೆ ಪ್ರತಿಪಕ್ಷ ಸದಸ್ಯರಿಂದ ಬಹಿಷ್ಕಾರ; ಸಂಸದ ಕಲ್ಯಾಣ್ ಬ್ಯಾನರ್ಜಿ ಘೋಷಣೆ

ವಕ್ಫ್ ಜೆಪಿಸಿಯ ಸಭೆಗಳಿಗೆ ಪ್ರತಿಪಕ್ಷ ಸದಸ್ಯರಿಂದ ಬಹಿಷ್ಕಾರ; ಸಂಸದ ಕಲ್ಯಾಣ್ ಬ್ಯಾನರ್ಜಿ ಘೋಷಣೆ

Sat, 09 Nov 2024 00:23:30  Office Staff   Vb

ಹೊಸದಿಲ್ಲಿ: ವಕ್ಫ್ ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಮುಂದಿನ ಸುತ್ತಿನ ಸಭೆಗಳನ್ನು ಪ್ರತಿಪಕ್ಷಗಳ ಸದಸ್ಯರು ಬಹಿಷ್ಕರಿಸುತ್ತಾರೆ ಎಂದು ಜೆಪಿಸಿ ಸದಸ್ಯರೂ ಆಗಿರುವ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಗುರುವಾರ ಘೋಷಿಸಿದ್ದಾರೆ.ಮುಂದಿನ ಸುತ್ತಿನ ಸಭೆಗಳು ನವೆಂಬರ್ 9ರಿಂದ ಆರಂಭಗೊಳ್ಳಲಿವೆ.

ಪ್ರತಿಪಕ್ಷ ಸದಸ್ಯರ ಈ ನಿರ್ಧಾರಕ್ಕೆ ಜೆಪಿಸಿ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಜಗದಂಬಿಕಾ ಪಾಲ್‌ರ 'ದುರಹಂಕಾರ' ಮತ್ತು 'ನಿರಂಕುಶ ವರ್ತನೆ'ಯೇ ಕಾರಣ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ.

“ಸಭೆಗಳನ್ನು ಬಹಿಷ್ಕರಿಸಲು ಎಲ್ಲಾ ಪ್ರತಿಪಕ್ಷ ಸದಸ್ಯರು ನಿರ್ಧರಿಸಿದ್ದಾರೆ. ಅಧ್ಯಕ್ಷರು ಸ್ಟೇಚ್ಛೆ ಮತ್ತು ದುರಹಂಕಾರದೊಂದಿಗೆ ಕೆಲಸ ಮಾಡುತ್ತಿದ್ದಾರೆ? ಎಂದು ಕೋಲ್ಕತಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಯಾನರ್ಜಿ ಹೇಳಿದರು.

ಶನಿವಾರದಿಂದ ಮುಂದಿನ ಆರು ದಿನಗಳವರೆಗೆ ಜಂಟಿ ಸಂಸದೀಯ ಸಮಿತಿಯು ಗುವಾಹಟಿ, ಭುವನೇಶ್ವರ, ಕೋಲ್ಕತಾ, ಪಟ್ನಾ ಮತ್ತು ಲಕ್ನು ಲಕ್ನೋಗಳಲ್ಲಿ ಸಭೆಗಳನ್ನು ನಡೆಸಲಿದೆ. ರವಿವಾರ ರಜೆ ಇರುತ್ತದೆ.

“ಪ್ರತಿಪಕ್ಷ ಸದಸ್ಯರು ನವೆಂಬರ್ 5ರಂದು ಲೋಕಸಭಾ ಸ್ಪೀಕರ್‌ರನ್ನು ಭೇಟಿಯಾಗಿ ಪ್ರವಾಸ ವೇಳಾಪಟ್ಟಿಯನ್ನು ಮುಂದೂಡುವಂತೆ ಕೋರಿದ್ದಾರೆ. ಜೆಪಿಸಿ ಸಭೆಯ ದಿನಗಳನ್ನು ವಾರಕ್ಕೆ ಎರಡು ದಿನಗಳಿಂದ ವಾರಕ್ಕೆ ಒಂದು ದಿನಕ್ಕೆ ಇಳಿಸುವಂತೆ ಅಥವಾ 15 ದಿನಗಳಿಗೊಮ್ಮೆ ಸತತ ಎರಡು ದಿನ ಸಭೆಗಳನ್ನು ನಡೆಸುವಂತೆಯೂ ನಾವು ಕೋರಿದ್ದೇವೆ' ಎಂಬುದಾಗಿಯೂ ಅವರು ಹೇಳಿದರು.

ಈ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸುವುದಾಗಿ ಮತ್ತು ಜೆಪಿಸಿ ಅಧ್ಯಕ್ಷರೊಂದಿಗೆ ಮಾತನಾಡುವುದಾಗಿ ಸ್ಪೀಕರ್ ಓಂ ಬಿರ್ಲಾ ಭರವಸೆ ನೀಡಿದ್ದಾರೆ ಎಂದು ಹೇಳಿದ ಅವರು, ಆದರೆ, ಆ ಬಳಿಕ ಏನೂ ಆಗಿಲ್ಲ ಎಂದರು.

ವೇಳಾಪಟ್ಟಿಯನ್ನು ಮರುನಿಗದಿಪಡಿಸಲು ಪ್ರತಿಪಕ್ಷ ಸಂಸದರು ಯಾಕೆ ಬಯಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಈ ವೇಳಾಪಟ್ಟಿ ರಚನೆಗೆ ಮೊದಲು ನಮ್ಮೊಂದಿಗೆ ಅವರು ಮಾತನಾಡಿಲ್ಲ. ಸಂಸದರಿಗೆ ಅವರ ಕ್ಷೇತ್ರಗಳಲ್ಲಿ ಮಹತ್ವದ ಅಧಿಕೃತ ಕೆಲಸ ಇರುತ್ತದೆ. ಅವರು ಜನರನ್ನು ಭೇಟಿಯಾಗಬೇಕಾಗುತ್ತದೆ'' ಎಂದು ಹೇಳಿದರು.

“ಆಡಳಿತಾರೂಢ ಪಕ್ಷದ ಸದಸ್ಯರು ತಮ್ಮ ಸ್ವಂತ ಕಾರ್ಯಸೂಚಿಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದಾರೆ, ಅವರು ದೇಶದ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿಲ್ಲ'' ಎಂದು ಬ್ಯಾನರ್ಜಿ ಅಭಿಪ್ರಾಯಪಟ್ಟರು.


Share: