ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಹಿಳೆ ಅಪಹರಣ ಪ್ರಕರಣ; ಭವಾನಿ ರೇವಣ್ಣ ಪತ್ತೆಗೆ ಮುಂದುವರಿದ ಶೋಧ

ಮಹಿಳೆ ಅಪಹರಣ ಪ್ರಕರಣ; ಭವಾನಿ ರೇವಣ್ಣ ಪತ್ತೆಗೆ ಮುಂದುವರಿದ ಶೋಧ

Mon, 03 Jun 2024 16:27:07  Office Staff   Vb

ಬೆಂಗಳೂರು: ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ (ಸಿಟ್) ವಿಚಾರಣೆಗೆ ಗೈರಾಗಿರುವ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರ ಪತ್ತೆಗೆ ತನಿಖಾಧಿಕಾರಿಗಳು ಶೋಧ ಆರಂಭಿಸಿದ್ದಾರೆ.

ಭವಾನಿ ಅವರಿಗಾಗಿ ಮೈಸೂರು, ಹಾಸನ, ಬೆಂಗಳೂರು, ಮಂಡ್ಯ, ರಾಮನಗರ ಸೇರಿದಂತೆ ವಿವಿಧೆಡೆ ಸಿಟ್ ಶೋಧ ನಡೆಸಿದೆ. ಭವಾನಿ ಅವರ ಸಂಬಂಧಿಕರ ಮನೆಗಳಲ್ಲಿಯೂ ಹುಡುಕಾಟ ನಡೆಸಲಾಯಿತು. ಆದರೆ, ಅವರು ಪತ್ತೆಯಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. ಅವರ ಪತ್ತೆಗೆ ಎಸ್‌ಐಟಿ ವಿವಿಧ ತಂಡಗಳನ್ನು ರಚಿಸಿದೆ ಎಂದೂ ಹೇಳಲಾಗುತ್ತಿದೆ. ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5ರ ವರೆಗಿನ ಅವಧಿಯಲ್ಲಿ ಹಾಸನದ ಹೊಳೆನರಸೀಪುರದಲ್ಲಿರುವ ಚೆನ್ನಾಂಬಿಕ ನಿವಾಸದಲ್ಲಿ ಹಾಜರಿರುವಂತೆ ಸಿಟ್ ಅಧಿಕಾರಿಗಳು ಸೂಚಿಸಿದ್ದರು. ಆದರೆ ಅಧಿಕಾರಿಗಳು ಹೋಗಿ ಏಳು ಗಂಟೆಗಳ ಕಾಲ ಕಾದರೂ ಭವಾನಿ ರೇವಣ್ಣ ಮಾತ್ರ ಅಜ್ಞಾತವಾಗಿಯೇ ಉಳಿದಿದ್ದರು. ಮತ್ತೊಂದೆಡೆ, ಭವಾನಿ ನಾಪತ್ತೆ ಕುರಿತು ವರದಿ ಸಿದ್ದಪಡಿಸಿಕೊಂಡಿರುವ ಸಿಟ್ ತಂಡ, ಭವಾನಿ ರೇವಣ್ಣ ತನಿಖೆಗೆ ಅಸಹಕಾರ ತೋರಿದ್ದಾರೆ ಎಂಬುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡುವ ಮೂಲಕ ಜಾಮೀನು ನೀಡದಂತೆ ಕೋರಲು ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಭವಾನಿ ಬಂಧನಕ್ಕೆ ಹುಡುಕಾಟ: ಡಾ.ಜಿ.ಪರಮೇಶ್ವರ್
ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ಅವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಶೋಧ ಕಾರ್ಯ ನಡೆದಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭವಾನಿ ಅವರು ಸಿಕ್ಕ ತಕ್ಷಣ ಕಾನೂನು ಪ್ರಕ್ರಿಯೆಗಳನ್ನು ಮುಂದುವರಿಸಲಾಗುವುದು. ಈವರೆಗೂ ಅವರು ಎಲ್ಲಿದ್ದಾರೆ ಎಂದು ಗೊತ್ತಿಲ್ಲ, ತಪ್ಪಿಸಿಕೊಂಡಿದ್ದಾರೆ. ಅವರಾಗಿಯೇ ಬಂದರೆ ಅಥವಾ ಹುಡುಕಿದಾಗ ಸಿಕ್ಕರೆ ಬಂಧಿಸುವುದು ಖಚಿತ ಎಂದರು.


Share: