ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಣಿಪುರದಿಂದ ಭಾರತ ಜೋಡೊ ನ್ಯಾಯ ಯಾತ್ರೆ' ಆರಂಭ; ಪ್ರಧಾನಿ ಮೋದಿ ವಿರುದ್ಧ ರಾಹುಲ್, ಖರ್ಗೆ ವಾಗ್ದಾಳಿ

ಮಣಿಪುರದಿಂದ ಭಾರತ ಜೋಡೊ ನ್ಯಾಯ ಯಾತ್ರೆ' ಆರಂಭ; ಪ್ರಧಾನಿ ಮೋದಿ ವಿರುದ್ಧ ರಾಹುಲ್, ಖರ್ಗೆ ವಾಗ್ದಾಳಿ

Tue, 16 Jan 2024 06:42:21  Office Staff   Vb

ಥೌಬಲ್‌: ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಮರುಸ್ಥಾಪಿಸುವ ಭರವಸೆಯೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ರವಿವಾರ ರಾಜ್ಯದ ಥ್‌ಬಾಲ್‌ನಿಂದ ತನ್ನ 'ಭಾರತ ಜೋಡೊ ನ್ಯಾಯ ಯಾತ್ರೆ 'ಯನ್ನು ಆರಂಭಿಸಿದರು.

ಇಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಪ್ರಧಾನಿ ನರೇಂದ್ರ ಮೋದಿ ವಿರುದ್ದವೂ ವಾಗ್ದಾಳಿ ನಡೆಸಿ, ಬಹುಶಃ ಬಿಜೆಪಿ ಮತ್ತು ಆರೆಸ್ಸೆಸ್ ಪಾಲಿಗೆ ಮಣಿಪುರವು ಭಾರತದ ಭಾಗವಾಗಿಲ್ಲ ಎಂದು ಹರಿಹಾಯ್ದರು.

ಲಕ್ಷಾಂತರ ಜನರು ನಷ್ಟವನ್ನು ಅನುಭವಿಸಿದ್ದಾರೆ. ಆದರೆ ನಿಮ್ಮ ಕಣ್ಣೀರು ಒರೆಸಲು, ನಿಮ್ಮ ಕೈಯನ್ನು ಹಿಡಿದುಕೊಳ್ಳಲು ಅಥವಾ ನಿಮ್ಮನ್ನು ಅಪ್ಪಿಕೊಂಡು ಸಂತೈಸಲು ಪ್ರಧಾನಿ ಇಲ್ಲಿಗೆ ಭೇಟಿ ನೀಡಲಿಲ್ಲ. ಬಹುಶಃ ನರೇಂದ್ರ ಮೋದಿ, ಬಿಜೆಪಿ ಮತ್ತು ಆರೆಸ್ಸೆಸ್ ಪಾಲಿಗೆ ಮಣಿಪುರವು ಭಾರತದ ಭಾಗವಲ್ಲ. ನಿಮ್ಮ ನೋವು ಅವರ ನೋವು ಅಲ್ಲ ಎಂದು ಹೇಳಿದ ರಾಹುಲ್ 'ಮಣಿಪುರದ ಜನರು ಅನುಭವಿಸಿರುವ ನೋವು ನಮಗೆ ತಿಳಿದಿದೆ. ಅವರ ಕಷ್ಟ, ಅವರ ದುಃಖಗಳ ಅರಿವು ನಮಗಿದೆ. ಈ ರಾಜ್ಯವು ಸಾಮರಸ್ಯ,ಶಾಂತಿ ಮತ್ತು ವಿಶ್ವಾಸಕ್ಕೆ ಹೆಸರಾಗಿತ್ತು. ನಾವು ಅದನ್ನು ಮರಳಿ ತರುತ್ತೇವೆ ಎಂದರು.

ಇದಕ್ಕೂ ಮುನ್ನ ಮೋದಿಯವರನ್ನು ತರಾಟೆಗೆತ್ತಿಕೊಂಡ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಮತಗಳನ್ನು ಕೇಳಲಷ್ಟೇ ಅವರು ಮಣಿಪುರಕ್ಕೆ ಬರುತ್ತಾರೆ, ರಾಜ್ಯದ ಜನರು ಕಷ್ಟದಲ್ಲಿದ್ದಾಗ ಅವರ ದುಃಖವನ್ನು ಹಂಚಿಕೊಳ್ಳಲು ಅಲ್ಲ ಎಂದು ಕಿಡಿಕಾರಿದರು.

ಸಾಗರದಲ್ಲಿ ವಿಹರಿಸಲು, ಸಾಗರದಲ್ಲಿ ಮುಳುಗು ಹಾಕಲು ಮೋದಿಯವರ ಬಳಿ ಸಮಯವಿದೆ,ಆದರೆ ಮಣಿಪುರಕ್ಕೆ ಬರಲು ಸಮಯವಿಲ್ಲ. ಮೋದಿ 'ರಾಮ,ರಾಮ' ಎಂದು ಪಠಿಸುತ್ತಿರುತ್ತಾರೆ, ಆದರೆ ಮತಗಳನ್ನು ಕೇಳಲು ಅವರು ಅದನ್ನು ಮಾಡಬಾರದು. ಬಿಜೆಪಿಯು ಧರ್ಮ ಮತ್ತು ರಾಜಕೀಯವನ್ನು ಬೆರೆಸುತ್ತದೆ ಹಾಗೂ ಜನರನ್ನು ಪ್ರಚೋದಿಸುತ್ತದೆ ಎಂದ ಖರ್ಗೆ, ಬಿಜೆಪಿಯ ತುಟಿಗಳಲ್ಲಿ 'ರಾಮ' ಪದವಿದೆ, ಆದರೆ ಬಗಲಲ್ಲಿ ಚೂರಿಯಿದೆ. ಅವರು ಜನರ ಬಗ್ಗೆ ಇಂತಹ ಧೋರಣೆಯನ್ನು ಹೊಂದಿರಬಾರದು ಎಂದರು.

ಕಾಂಗ್ರೆಸ್ ಪಕ್ಷವು ಸಾಮಾಜಿಕ ನ್ಯಾಯ,ಜಾತ್ಯತೀತತೆ ಮತ್ತು ಸಮಾನತೆಯ ಪರವಾಗಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತ್ತು ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ಹೋರಾಡಲು ರಾಹುಲ್ ಗಾಂಧಿಯವರ “ಭಾರತ ಜೋಡೊ ನ್ಯಾಯ ಯಾತ್ರೆ'ಯನ್ನು ನಡೆಸಲಾಗುತ್ತಿದೆ ಎಂದು ಖರ್ಗೆ ಹೇಳಿದರು.

ಯಾತ್ರೆಯು 67 ದಿನಗಳಲ್ಲಿ 110 ಜಿಲ್ಲೆಗಳ 100 ಲೋಕಸಭಾ ಕ್ಷೇತ್ರಗಳು ಮತ್ತು 337 ವಿಧಾನಸಭಾ ಕ್ಷೇತ್ರಗಳ ಮೂಲಕ 6,713 ಕಿ.ಮೀ.ದೂರವನ್ನು ಕ್ರಮಿಸಿ ಮಾ.20ರಂದು ಮುಂಬೈನಲ್ಲಿ ಅಂತ್ಯಗೊಳ್ಳಲಿದೆ.


Share: