ಮಂಗಳೂರು: ಮಂಗಳೂರಿನಲ್ಲಿರುವ ದೇಶದ ಪ್ರಥಮ ಮೀನುಗಾರಿಕಾ ಕಾಲೇಜನ್ನು ವಿಶ್ವವಿದ್ಯಾನಿಲಯವಾಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದ್ದು, ಪೂರಕ ಕ್ರಮಗಳಿಗೆ ಚಾಲನೆ ನೀಡಲಾಗಿದೆ ಎಂದು ಮೀನುಗಾರಿಕಾ, ಒಳನಾಡು ಸಾರಿಗೆ ಮತ್ತು ಬಂದರು ಸಚಿವ ಮಂಕಾಳ ಎಸ್ ವೈದ್ಯ ಹೇಳಿದ್ದಾರೆ.
ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ಬೀದರ್, ಮೀನುಗಾರಿಕೆ ಇಲಾಖೆ, ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಹೈದರಾಬಾದ್, ಹಳೆ ವಿದ್ಯಾರ್ಥಿಗಳ ಸಂಘ, ಯಶಸ್ವಿ ಕಡಲ ಉತ್ಪನ್ನಗಳ ಕಂಪೆನಿ ಹಾಗೂ ಪಿಲ್ಲೆ ಅಕ್ವಾಕಲ್ಟರ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಮಂಗಳೂರಿನ ಎಕ್ಕೂರಿನ ಮೀನುಗಾರಿಕೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ: 2024 ಮತ್ತು ಬಿಗ್ ಫಿಶ್: 2.0 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
65 ಎಕರೆ ಜಾಗದಲ್ಲಿ ಹರಡಿರುವ ಮಂಗಳೂರಿನ ಮೀನುಗಾರಿಕಾ ಕಾಲೇಜು ವಿಶ್ವವಿದ್ಯಾನಿಲಯದ ಎಲ್ಲಾ ಅರ್ಹತೆಯನ್ನು ಹೊಂದಿದೆ. ಬೇರೆ ರಾಜ್ಯಗಳಿಗೆ ನಮ್ಮ ಕಾಲೇಜು ಮಾದರಿಯಾಗಿದ್ದು, ಇಲ್ಲಿ ಕಲಿತವರು ತಮ್ಮ ರಾಜ್ಯಗಳಿಗೆ ತೆರಳಿ ಹೊಸ ಕಾಲೇಜು, ವಿಶ್ವವಿದ್ಯಾನಿಲಯಗಳನ್ನು ರಚಿಸಿದ್ದು, ರಾಜ್ಯದಲ್ಲಿ ಈ ಪ್ರಯತ್ನದಲ್ಲಿ ನಾವು ಹಿಂದುಳಿದಿದ್ದೇವೆ. ಒಂದೇ ಕಾಲೇಜು ಹೊಂದಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವನ್ನಾಗಿಸಲು ಸಾಧ್ಯವಿಲ್ಲ ಎಂಬ ತಾಂತ್ರಿಕ ಕಾರಣದಿಂದ ಮಂಕಿಯಲ್ಲಿ ತರಬೇತಿ ಕೇಂದ್ರ, ಆಲಮಟ್ಟಿಯಲ್ಲಿ ಒಳನಾಡು ಮೀನುಗಾರಿಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮೀನು ಮರಿ ಉತ್ಪಾದನಾ ಕೇಂದ್ರವನ್ನು ಮೇಲ್ದರ್ಜೆಗೇರಿಸುವುದು ಹಾಗೂ ಮೀನುಗಾರಿಕಾ ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ನಾಲ್ಕು ಶಾಖೆಗಳನ್ನು ಆರಂಭಿಸಲು ಕ್ರಮ ವಹಿಸಲಾಗಿದೆ. ಮಂಕಿಯಲ್ಲಿ ತರಬೇತಿ ಕೇಂದ್ರ ಸ್ಥಾಪನೆ ಸ್ಥಾಪನೆಗೆ ಸಂಬಂಧಿಸಿ ಈಗಾಗಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ಅವರು ಹೇಳಿದರು.
ಮೀನುಗಾರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈಗಾಗಲೇ 1.50 ಲಕ್ಷ ಲೀಟರ್ ಡೀಸೆಲ್ ವಿತರಣೆಯನ್ನು 2 ಲಕ್ಷ ಲೀಟರ್‌ಗೆ ಏರಿಕೆ ಮಾಡಲಾಗಿದೆ. ಹಾಗಾಗಿ ಕಳೆದ ಸಾಲಿನ ಮೀನುಗಾರಿಕಾ ಅವಧಿಯಲ್ಲಿ ಡೀಸೆಲ್ ಸಿಕ್ಕಿಲ್ಲ ಎಂಬ ದೂರು ಮೂರು ಜಿಲ್ಲೆಗಳಿಂದಲೂ ಬಂದಿಲ್ಲ. ಈ ಸಬ್ಸಿಡಿಗಾಗಿ ಸರಕಾರ 285 ಕೋಟಿ ರೂ. ವೆಚ್ಚ ಮಾಡುತ್ತಿದ್ದು, ಸೀಮೆಎಣ್ಣೆ ಸಮಸ್ಯೆ ಆಗದಂತೆಯೂ ಕ್ರಮ ವಹಿಸಲಾಗಿದೆ ಎಂದರು. ಮೀನುಗಾರ ಮಹಿಳೆಯರಿಗೆ 3 3 ಲಕ್ಷ ರೂ.ವರೆಗಿನ ಬಡ್ಡಿ ರಹಿತ ಸಾಲಕ್ಕೆ ರಾಷ್ಟ್ರೀಕೃತ ಬ್ಯಾಂಕ್ಗಳಿಂದ ಆಸ್ತಿ ಬೇಕೆನ್ನುವ ತಗಾದೆಯ ಕುರಿತು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಉಡುಪಿಯಲ್ಲಿ ಮಹಾಲಕ್ಷ್ಮಿ ಸೊಸೈಟಿ ಸಾಲ ಕೊಡಲು ಮುಂದೆ ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಲ್ಲಿ ಹಿಂದಿನ ನಾಲ್ಕು ವರ್ಷಗಳ ಬಾಕಿ ಪರಿಹಾರವನ್ನು ಒದಗಿಸಲಾಗಿದೆ. ಬೋಟ್ ದುರಂತದ ಸಂದರ್ಭದಲ್ಲಿಯೂ ಪರಿಹಾರ ನೀಡಲಾಗುತ್ತಿದ್ದು, ಅವಘಡಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡ ಮೀನುಗಾರರಿಗೆ 24 ಗಂಟೆಯಲ್ಲಿ 8 ಲಕ್ಷ ರೂ. ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಅವಘಡದಿಂದ ಅಂಗಾಂಗ ಕಳೆದುಕೊಂಡು ಮತ್ತೆ ಮೀನುಗಾರಿಕೆ ನಡೆಸಲಾಗದ ಮೀನುಗಾರರಿಗೆ ವೈದ್ಯಕೀಯ ವೆಚ್ಚ ಸಹಿತ ನಾಲ್ಕು ಲಕ್ಷ ರೂ. ಪರಿಹಾರ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಬೈಂದೂರಿನಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಸೀಫುಡ್ ಪಾರ್ಕ್ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಬೆಂಗಳೂರಿನ ಹೆಬ್ಬಾಳದ ಪಶು ಸಂಗೋಪನಾ ಇಲಾಖೆಯಿಂದ 3 ಎಕರೆ ಜಮೀನು ಪಡೆದು 50 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಹಾಗೂ 20 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಚಿವ ಮಂಕಾಳ ವೈದ್ಯ ವಿವರಿಸಿದರು.
ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದರು. ಶಾಸಕರಾದ ಡಾ.ಭರತ್ ಶೆಟ್ಟಿ ವೈ, ಐವನ್ ಡಿಸೋಜ, ಮೇಯರ್ ಸುಧೀರ್ ಶೆಟ್ಟಿ, ಸ್ಥಳೀ ಕಾರ್ಪೊರೇಟರ್ ಭರತ್ ಕುಮಾರ್, ಬೀದರ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ್ ಕುಮಾರ್ ಕಣ್ಣೀರ್, ಕೊಚ್ಚಿನ್ ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿವಿ ಕುಲಸಚಿವ ಡಾ.ದಿನೇಶ್ ಕೈಲ್ಲಿ, ಯಶಸ್ವಿ ಕಡಲ ಉತ್ಪನ್ನಗಳ ಕಂಪೆನಿ ಆಡಳಿತ ಪಾಲುದಾರ ಉದಯ ಸಾಲ್ಯಾನ್, ಮಿನುಗಾರಿಕೆ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರಮೇಶ್ ಎಂ.ಆರ್. ಮುಖ್ಯ ಅತಿಥಿಗಳಾಗಿದ್ದರು.
ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಚ್.ಎನ್.ಆಂಜನೇಯಪ್ಪ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ.ಶಿವಕುಮಾರ್ ಮಗದ ಪ್ರಾಸ್ತಾವಿಕವಾಗಿ ಮಾತನಾಡಿದರು.