ಭಟ್ಕಳ: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಭಟ್ಕಳದ ಒಳ ರಸ್ತೆಗಳು ಶೋಚನೀಯ ಸ್ಥಿತಿಯಲ್ಲಿದ್ದು, ಸವಾರರು ಸಂಚರಿಸಲು ಪರದಾಡುವಂತಾಗಿದೆ. ಈಗಾಗಲೇ ಹಾಳಾಗಿರುವ ಮುಖ್ಯರಸ್ತೆಯಲ್ಲಿ ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿದ್ದು, ಪ್ರಯಾಣಕ್ಕೆ ಮತ್ತಷ್ಟು ತೊಡಕುಂಟಾಗಿದೆ.
ಬಂದರ್ ರಸ್ತೆಯ ಶಂಸುದ್ದೀನ್ ವೃತ್ತದ ಬಳಿ 14 ರಿಂದ 15 ಮೂಟೆ ಅಕ್ಕಿ ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ಹದಗೆಟ್ಟಿರುವ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡಿದ್ದು ಅಕ್ಕಿಮೂಟೆಗಳು ಕೆಳಕ್ಕೆ ಬಿದ್ದುಕೊಂಡಿವೆ.
ಮಧ್ಯಾಹ್ನದ ವೇಳೆಗೆ ಈ ಘಟನೆ ನಡೆದಿದ್ದು, ಸಂಚಾರ ವಿರಳವಾಗಿದ್ದರಿಂದ ಅದೃಷ್ಟವಶಾತ್ ಯಾರಿಗೂ ಅಪಾಯ ಉಂಟಾಗಲಿಲ್ಲ ಎಂದು ಹೇಳಲಾಗುತ್ತಿದೆ. ಲಾರಿಯಿಂದ ಬಿದ್ದಿರುವ ಗೋಣಿಚೀಲಗಳು ದಾರಿಹೋಕರಿಗೆ ಅಥವಾ ಸವಾರನಿಗೆ ಬಡಿದಿದ್ದರೆ ಗಂಭೀರ ಹಾನಿಯಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಹದಗೆಟ್ಟಿರುವ ರಸ್ತೆಗಳಿಂದ ಹೆಚ್ಚಿನ ಅಪಘಾತಗಳನ್ನು ತಡೆಗಟ್ಟಲು ಮತ್ತು ಸುರಕ್ಷಿತ ಪ್ರಯಾಣದ ಪರಿಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ತಕ್ಷಣ ಗಮನಹರಿಸಿ ರಸ್ತೆ ದುರಸ್ತಿ ಮಾಡಬೇಕೆಂದು ಸ್ಥಳಿಯರು ಒತ್ತಾಯಿಸಿದ್ದಾರೆ.
ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ ಶೀಘ್ರವಾಗಿ ಹದಗೆಟ್ಟಿರುವ ಮೂಲಸೌಕರ್ಯಗಳನ್ನು ಪರಿಹರಿಸಿ ಭವಿಷ್ಯದಲ್ಲಿ ಇನ್ನಷ್ಟು ಗಂಭೀರ ಘಟನೆಗಳನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.