ಭಟ್ಕಳ: ಬಿರುಗಾಳಿ ಬೀಸಿದ ಪರಿಣಾಮ ಭಟ್ಕಳ ಮತ್ತು ಉತ್ತರಕನ್ನಡ ಗಡಿಭಾಗದ ಗೊರ್ಟೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹೊಟೇಲ್ನ ಮೇಲ್ಛಾವಣಿ ಸಹಿತ ಸಮೀಪದ ಸೋಫಾ ತಯಾರಿಕೆ ಅಂಗಡಿಯ ಮೇಲ್ಛಾವಣಿ ಹಾರಿಹೋಗಿದೆ. ಇದರ ಪರಿಣಾಮ ಅಪಾರ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿರುವ ಘಟನೆ ಮಂಗಳವಾರ ಬೆಳಗ್ಗೆ ವರದಿಯಾಗಿದೆ.
ಈ ಕುರಿತಂತೆ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಹೊಟೇಲ್ ಸಹಾರಾ ಮಾಲೀಕ ಗೋರ್ಟೆಯ ನಿವಾಸಿ ಲಕ್ಷ್ಮೇಶ್ ನಾಯ್ಕ, ಬೆಳಿಗ್ಗೆ 10 ಗಂಟೆ ಸುಮಾರಿಗೆ ಗಾಳಿ ಬೀಸಿದ್ದು, ಹೋಟೆಲ್ನಲ್ಲಿ ಕೇವಲ ಇಬ್ಬರು ಅಥವಾ ನಾಲ್ವರು ಸಿಬ್ಬಂದಿ ಮಾತ್ರ ಕೆಲಸ ಮಾಡುತ್ತಿದ್ದು, ಬೆಳಗಿನ ಜಾವದ ಕಾರಣ ಗ್ರಾಹಕರು ಇರಲಿಲ್ಲ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ವಾಹನಗಳ ಓಡಾಟ ವಿರಳವಾಗಿತ್ತು. ಇದರಿಂದಾಗಿ ಪ್ರಾಣಹಾನಿ ಮತ್ತು ಸಂಭವನೀಯ ದೊಡ್ಡ ಅನಾಹುತವನ್ನು ತಪ್ಪಿದಂತಾಗಿದೆ ಎಂದು ಮಾಹಿತಿ ನೀಡಿದರು.
ಅವರ ಹೋಟೆಲ್ನ ಮೇಲಿನ ಮಹಡಿಯಲ್ಲಿದ್ದ ಟಿನ್ ಶೆಡ್ ಕುಸಿದು ಹೋಟೆಲ್ನೊಳಗಿನ ಪೀಠೋಪಕರಣಗಳು, ಪಾತ್ರೆಗಳು ಮತ್ತು ಉಪಕರಣಗಳು ನಾಶವಾಗಿವೆ. ಹೊಟೇಲ್ನೊಳಗೆ ಕೆಲಸ ಮಾಡುತ್ತಿದ್ದ ಪದ್ಮಾವತಿ ಎಂಬ ಮಹಿಳೆ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ವಿದ್ಯುತ್ ಕಂಬ ಹಾಗೂ ಮರವೂ ಉರುಳಿ ಬಿದ್ದಿದ್ದು, ವಿದ್ಯುತ್ ತಂತಿ ತುಂಡಾಗಿದೆ. ಶೆಡ್ನ ತುಂಡು ಮರಕ್ಕೆ ನೇತಾಡುತ್ತಿರುವುದನ್ನು ನೋಡಿದರೆ ಗಾಳಿಯ ತೀವ್ರತೆಯನ್ನು ಅಂದಾಜಿಸಬಹುದಾಗಿದೆ.
ಭಟ್ಕಳ ಹೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ವಿದ್ಯುತ್ ತಂತಿಗಳನ್ನು ಜೋಡಿಸುವ ಕಾಮಗಾರಿ ಜತೆಗೆ ಕಂಬ ಅಳವಡಿಕೆಯನ್ನು ಕೂಡಲೇ ಕೈಗೊಳ್ಳುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಸಹಾರಾ ಹೋಟೆಲ್ ಜೊತೆಗೆ ಸಮೀಪದ ಸನ್ಶೈನ್ ಸೋಫಾ ಮ್ಯಾನುಫ್ಯಾಕ್ಚರಿಂಗ್ ಶಾಪ್ನ ಮೇಲ್ಛಾವಣಿ ಕೂಡ ಕಿತ್ತು ಹೋಗಿದ್ದು, ಅಂಗಡಿಯಲ್ಲಿನ ಹಲವಾರು ಸೋಫಾಗಳು ಮಳೆಯಿಂದ ಹಾನಿಗೊಳಗಾಗಿವೆ.