ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳದಲ್ಲಿ ಕರಾಟೆ ರೆಫ್ರಿ ತರಬೇತಿ; ತಪ್ಪು ನಿರ್ಣಯಗಳಿಂದ ಸ್ಪರ್ಧಾಳುವಿನ ಭವಿಷ್ಯ ಮಣ್ಣುಪಾಲಾಗುತ್ತದೆ-ಜೋಸ್

ಭಟ್ಕಳದಲ್ಲಿ ಕರಾಟೆ ರೆಫ್ರಿ ತರಬೇತಿ; ತಪ್ಪು ನಿರ್ಣಯಗಳಿಂದ ಸ್ಪರ್ಧಾಳುವಿನ ಭವಿಷ್ಯ ಮಣ್ಣುಪಾಲಾಗುತ್ತದೆ-ಜೋಸ್

Tue, 02 Jul 2024 21:36:54  Office Staff   SOnews

ಭಟ್ಕಳ : ಉತ್ತರ ಕನ್ನಡ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ವತಿಯಿಂದ ಇಲ್ಲಿನ ಬಂದರ್ ರಸ್ತೆಯ ಕಮಲಾವತಿ ರಾಮನಾಥ ಶಾನಭಾಗ ಸಭಾಭವನದಲ್ಲಿ ಸ್ಪೋರ್ಟ್ಸ್ ಕರಾಟೆ ರೆಫ್ರಿ ತರಬೇತಿ ಇತ್ತಿಚೆಗೆ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಡನ್ ಬ್ಲ್ಯಾಕ್ ಬೆಲ್ಟ್ ಡಬ್ಲು.ಕೆ.ಎಫ್.ಸಿ. ರೆಫ್ರಿ ಕೆ.ಪಿ. ಜೋಸ್, ಕರಾಟೆ ಸ್ಪರ್ಧೆಯಲ್ಲಿ ರೆಫ್ರಿಗಳ ಪಾತ್ರ ನಿರ್ಣಾಯಕವಾಗಿರುತ್ತದೆ. ನಿರ್ಣಯ ನೀಡುವಾಗ ತನ್ನ ವಿದ್ಯಾರ್ಥಿ ಪರವಾಗಿ ತಪ್ಪು ನಿರ್ಣಯ ನೀಡಿದರೆ ಮುಂದಿನ ಹಂತದಲ್ಲಿ ಸ್ಪರ್ಧೆಯಲ್ಲಿ ಅವನ ಭವಿಷ್ಯ ಮಣ್ಣುಪಾಲಾಗುತ್ತದೆ. ರೆಫ್ರಿಯಾದವರು ಸ್ಪರ್ಧೆಯ ಸಂಪೂರ್ಣ ನಿಯಮ ಅರಿತು ಪಕ್ಷಪಾತ ಮಾಡದೆ ನಿರ್ಣಯ ಮಾಡಬೇಕು ಎಂದು ಹೇಳಿದರು.

ಕರಾಟೆ ತರಬೇತುದಾರು ಹಾಗೂ ರೆಫ್ರಿಗಳು ಕಾಲಕಾಲಕ್ಕೆ ಬದಲಾಗುವ ಕರಾಟೆ ಸ್ಪರ್ಧೆಯ ನಿಯಮದ ಬಗ್ಗೆ ತಿಳಿದುಕೊಂಡು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಉತ್ತರ ಕನ್ನಡ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ಅಧ್ಯಕ್ಷ ಅರವಿಂದ ನಾಯ್ಕ, ಬಹಳ ವರ್ಷದ ನಂತರ ಭಟ್ಕಳದಲ್ಲಿ ಈಶ್ವರ ನಾಯ್ಕ ಅವರು ತರಬೇತಿ ಆಯೋಜಿಸಿದ್ದಾರೆ. ಇದರ ಸದುಪಯೋಗವನ್ನು ಎಲ್ಲಾ ತರಬೇತುದಾರರು ಪಡೆದುಕೊಳ್ಳುವಂತೆ ತಿಳಿಸಿದರು.

ವಿದ್ಯಾಭಾರತಿ ಶಾಲೆಯ ಪ್ರಾಂಶುಪಾಲೆ ರೂಪಾ ಖಾರ್ವಿ ಮಾತನಾಡಿ, ಕರಾಟೆ ಕಲಿತ ನಂತರ ರೆಫ್ರಿ ಆಗಿ ನೇಮಕವಾಗಲು ಸ್ಪರ್ಧೆಯ ನಿಯಮಗಳ ಬಗ್ಗೆ ಸತತ ಅಧ್ಯಯನ ಮುಖ್ಯವಾಗಿರುತ್ತದೆ. ಏಕಾಗ್ರತೆ ಮತ್ತು ಕಲಿಕೆಯ ಮನಸ್ಸು ಇದ್ದರೆ ಯಶಸ್ಸು ಸಾಧ್ಯ ಎಂದರು.

ಪತ್ರಕರ್ತ ಮೋಹನ ನಾಯ್ಕ ಮಾತನಾಡಿ, ಭಟ್ಕಳದಲ್ಲಿ ಸ್ಪೋರ್ಟ್ಸ್ ಕರಾಟೆ ತರಬೇತಿ ಪಡೆದ ಕರಾಟೆ ಪಟುಗಳು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿ ಬಂದಿದ್ದಾರೆ. ಇದಕ್ಕೆ ಕಾರಣ ಇಲ್ಲಿನ ವ್ಯವಸ್ಥಿತ ತರಬೇತಿ ಕಾರಣವಾಗಿದೆ. ಕಾಲಕಾಲಕ್ಕೆ ಬದಲಾಗುವ ಸ್ಪರ್ಧಾ ನಿಯಮಗಳನ್ನು ತರಬೇತುದಾರರು ಅರಿತು ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಿದರೆ ವಿದ್ಯಾರ್ಥಿಗಳು ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದರು.

ಉತ್ತರ ಕನ್ನಡ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ಕಾರ್ಯದರ್ಶಿ ಆನಂದ ನಾಯ್ಕ ಮಾತನಾಡಿದರು. ಉತ್ತರ ಕನ್ನಡ ಜಿಲ್ಲಾ ಸ್ಪೋರ್ಟ್ಸ ಕರಾಟೆ ಅಸೋಸಿಯೇಶನ್ ಉಪಾಧ್ಯಕ್ಷ ಈಶ್ವರ ನಾಯ್ಕ, ಕಾನೂನು ಸಲಹೆಗಾರ ಮನೋಜ ನಾಯ್ಕ ಇದ್ದರು. ನಾಗಶ್ರೀ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.


Share: