ಭಟ್ಕಳ:೬, ಭಟ್ಕಳ ತಾಲೂಕಿನ ಬೆಳಕೆ ಗ್ರಾ.ಪಂ ವ್ಯಾಪ್ತಿಯ ಕಂಚಿಕೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿಡಿಗೇಡಿಗಳು ಧಾಂದಲೆಯನ್ನು ಮಾಡಿದ್ದು ಶಾಲೆಯ ಐದು ಕೊಠಡಿಗಳ ಬೀಗವನ್ನು ಮುರಿದು ಕೊಠಡಿಯಲ್ಲಿನ ದಾಖಲೆಪತ್ರಗಳನ್ನು ನಾಶಪಡಿಸಿದ ಘಟನೆ ಜರುಗಿದೆ. ಬೆಳ್ಕೆ ಗ್ರಾ.ಪಂ.ಕಾರ್ಯಲಯದ ಎದುರುಗಡೆ ಇರುವ ಕಂಚಿಕೇರಿ ಶಾಲೆಯಲ್ಲಿ ಈ ಘಟನೆ ಜರುಗಿದ್ದು ರಾತ್ರಿಯ ವೇಳೆ ಯಾರೋ ಕಿಡಿಗೇಡಿಗಳು ಈ ದುಷ್ಕೃತ್ಯವನ್ನು ಎಸಗಿರಬಹುದು ಎಂದು ಹೇಳಲಾಗಿದೆ. ಶುಕ್ರವಾರ ಬೆಳಿಗ್ಗೆ ಶಾಲೆಯನ್ನು ತೆರೆಯಲು ಶಿಕ್ಷಕರು ಬಂದಾಗ ಈ ಶಾಲಾ ಕೊಠಡಿಯ ಬೀಗ ಮುರಿದುದನ್ನು ಕಂಡು ಗಾಬರಿಗೊಂಡು ವಿಷಯವನ್ನು ಶಾಲಾಭಿವೈದ್ಧಿ ಸಮಿತಿ ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ತಿಳಿಸಿದ್ದಾರೆ. ಶಾಲೆಯ ಬೀಗವನ್ನು ಮುರಿದು ಒಳಹೊಕ್ಕ ಕಿಡಿಗೇಡಿಗಳು ಅಲ್ಲಿಯ ಯಾವುದೆ ಸಾಮಾಗ್ರಿಯನ್ನು ದೋಚಿಕೊಂಡು ಹೋಗದೆ ಕೇವಲ ಕಪಾಟು ಮುರಿದು ಹಾಕಿದ್ದು ಅಲ್ಲದೆ ದಾಖಲೆ ಪತ್ರಗಳನ್ನು ನಾಶ ಮಾಡುವ ಪ್ರಯುತ್ನವನ್ನು ಕೈಗೊಂಡಿದ್ದಾರೆ ಎನ್ನಲಗಿದೆ.
ವಿಷಯ ತಿಳಿಯುತ್ತಿದ್ದಂತೆ ಕ್ಷೇತ್ರಶಿಕ್ಷಣಾಧಿಕಾರಿ ದೇವಿದಾಸ ಮೊಗೇರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಖರ್ ನಾಯ್ಕ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಗಪ್ಪ ಮುಂತಾದವರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಈ ಕುರಿತು ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ದೂರನ್ನು ನೀಡಲಾಗಿದೆ ಎಂದು ಶಾಲೆಯ ಮುಖ್ಯಾಧ್ಯಾಪಕ ಎಸ್.ಎಮ್.ನಾಯ್ಕ ತಿಳಿಸಿದ್ದಾರೆ.