ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಮುರ್ಡೇಶ್ವರ ಸಮುದ್ರದಲ್ಲಿ ದೋಣಿ ಮಗುಚಿ; ಒಬ್ಬ ಸಾವು, ನಾಲ್ವರ ರಕ್ಷಣೆ

ಭಟ್ಕಳ: ಮುರ್ಡೇಶ್ವರ ಸಮುದ್ರದಲ್ಲಿ ದೋಣಿ ಮಗುಚಿ; ಒಬ್ಬ ಸಾವು, ನಾಲ್ವರ ರಕ್ಷಣೆ

Fri, 13 Sep 2024 16:36:50  Office Staff   SOnews

ಭಟ್ಕಳ: ತಾಲೂಕಿನ ಮುರ್ಡೇಶ್ವರ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಎತ್ತರದ ಅಲೆಗಳ ಅಬ್ಬರಕ್ಕೆ ದೋಣಿಯೊಂದು ಪಲ್ಟಿಯಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಉಳಿದ ನಾಲ್ವರನ್ನು ದಡದಲ್ಲಿದ್ದ ಇತರ ಮೀನುಗಾರರ ಸಹಾಯದಿಂದ ರಕ್ಷಿಸಲಾಗಿದೆ.

ಇವರಲ್ಲಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಹೈದರ್ ಅಲಿ ಜಕರಿಯಾ ಬಾಬು (44) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇಬ್ಬರು ವ್ಯಕ್ತಿಗಳಾದ ಇಬ್ರಾಹಿಂ ಫಕೀರ ಮುಲ್ಲಾ (50) ಮತ್ತು ಅಬು ಮೊಹಮ್ಮದ್ ಉಮ್ರಾ (50) ಗಂಭೀರವಾಗಿ ಗಾಯಗೊಂಡು ಮುರ್ಡೇಶ್ವರ ಆರ್ಎನ್ಎಸ್ ಆಸ್ಪತ್ರೆಗೆ ದಾಖಲಾಗಿದ್ದರೆ, ಅಬ್ದುಲ್ ಸಮಿ ಇಲ್ಯಾಸ್ ಕಾಲು (21) ಮತ್ತು ಮುಹಮ್ಮದ್ ಶಾಫಿ ತಡ್ಲಿಕರ್ (45) ಪ್ರಾಣಾಪಾದಿಂದ ಪಾರಾಗಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾಹಿತಿ ನೀಡಿದ ಅಬ್ದುಲ್ ಸಮಿ, ಗುರುವಾರ ಬೆಳಿಗ್ಗೆ 6 ಗಂಟೆಯ ಸುಮಾರಿಗೆ ನಾವು ಐವರು ದೋಣಿಯಲ್ಲಿದ್ದು ಸಮುದ್ರದಲ್ಲಿ ಬಲೆ ಹಾಕುತ್ತಿದ್ದೆವು, ದಡಕ್ಕೆ ಹಿಂತಿರುಗುವಾಗ ಹಠಾತ್ ಅಲೆಯೊಂದು ಅಪ್ಪಳಿ ದೋಣಿ ಪಲ್ಟಿಯಾಗಿ ಈ ದುರಂತ ಸಂಭವಿಸಿದೆ. ಅಲೆಯ ರಭಸಕ್ಕೆ ದೋಣಿಯಲ್ಲಿದ್ದ ಓರ್ವ ಮೀನುಗಾರ ಸಮುದ್ರಕ್ಕೆ ಎಸೆಯಲ್ಪಟ್ಟರು. ನೋಡ ನೋಡುತ್ತಿದ್ದಂತೆ ಮತ್ತೊಂದು ಅಲೆಯು ಅಪ್ಪಳಿಸಿ ದೋಣಿಯಲ್ಲಿದ್ದ ಮೂವರನ್ನು ಸಮುದ್ರದಲ್ಲಿ ಮುಳುಗಿಸಿತು. ಇತರ ಬೋಟಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಆದರೆ ಹೈದರಲಿ ಝಕರಿಯಾ ಎಂಬುವವರು ಈ ದುರಂತದಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಮುರ್ಡೇಶ್ವರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೈದರ್ ಅಲಿ ಅವರ ಮೃತದೇಹವನ್ನು ಬೀಚ್ ರಸ್ತೆಯಲ್ಲಿರುವ ಅವರ ಮನೆಗೆ ತಂದು ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಹೈದರ್ ಅಲಿ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರು ಸೇರಿದಂತೆ ಮೂವರು ಮಕ್ಕಳನ್ನು ಅಗಲಿದ್ದಾರೆ.


Share: